ADVERTISEMENT

ಕೊಪ್ಪ | ಬೆರಳೆಣಿಕೆಯ ಬಸ್‌, ಜನರ ಪರದಾಟ

ಅಗತ್ಯ ಕೆಲಸಗಳಿಗೆ ಓಡಾಡಲು ಗ್ರಾಮೀಣ ಭಾಗದ ಜನರಿಗೆ ಸಂಪರ್ಕ ಸಮಸ್ಯೆ

ರವಿಕುಮಾರ್ ಶೆಟ್ಟಿಹಡ್ಲು
Published 10 ಜೂನ್ 2020, 5:26 IST
Last Updated 10 ಜೂನ್ 2020, 5:26 IST
ನವೀನ್ ಕರುವಾನೆ
ನವೀನ್ ಕರುವಾನೆ   

ಕೊಪ್ಪ: ಲಾಕ್‌ಡೌನ್ ನಿಯಮ ಸಡಿಲಿಕೆಯಾಗಿದ್ದರೂ ತಾಲ್ಲೂಕಿನಲ್ಲಿ ಸಾರಿಗೆ ಸಂಪರ್ಕ ವ್ಯವಸ್ಥೆ ಕೊರತೆಯಿಂದಾಗಿ ಅಗತ್ಯ ಕೆಲಸಗಳಿಗೆ ಓಡಾಡಲು ತೊಂದರೆಯಾಗಿದೆ ಎಂದು ಅನೇಕರು ತಿಳಿಸಿದ್ದಾರೆ.

ತಾಲ್ಲೂಕು ಕೇಂದ್ರಕ್ಕೆ ರೈತರು, ಸಾರ್ವಜನಿಕರು ಅಗತ್ಯ ಕೆಲಸಗಳಿಗೆ ಓಡಾಡಲು ಹಾಗೂ ವಿವಿಧ ಇಲಾಖೆ ಸಿಬ್ಬಂದಿ ಕಚೇರಿಗಳ ಕೆಲಸ ಕಾರ್ಯಗಳಿಗೆ ಓಡಾಡಲು ಸಮಸ್ಯೆ ಉಂಟಾಗಿದೆ. ಜಿಲ್ಲಾ ಕೇಂದ್ರದಿಂದ ಬೆರಳೆಣಿಕೆಯಷ್ಟು ಸರ್ಕಾರಿ ಬಸ್‌ಗಳು ಓಡಾಡುತ್ತಿದ್ದರೂ ಗ್ರಾಮೀಣ ಭಾಗಗಳಿಗೆ ಸಂಪರ್ಕವಿಲ್ಲದೇ ತೊಂದರೆ ಉಂಟಾಗಿದೆ.

ಕೊಪ್ಪದಿಂದ ತೀರ್ಥಹಳ್ಳಿ ಮೂಲಕ ಶಿವಮೊಗ್ಗಕ್ಕೆ ಖಾಸಗಿ ಸಂಸ್ಥೆಯೊಂದರ ಒಂದು ಬಸ್ ಮಾತ್ರ ಸದ್ಯಕ್ಕೆ ಓಡಾಡುತ್ತಿದೆ. ಬಹುತೇಕರು ಈಗ ತಮ್ಮ ಸ್ವಂತ ವಾಹನದಲ್ಲಿ ಓಡಾಡುತ್ತಿದ್ದಾರೆ. ಆದರೆ, ಬಡವರಿಗೆ, ರೈತರಿಗೆ ಪಟ್ಟಣದಲ್ಲಿ ಅಗತ್ಯ ಕೆಲಸಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ.

ADVERTISEMENT

‘ನರಸಿಂಹರಾಜಪುರದ ಸರ್ಕಾರಿ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಪ್ರತಿದಿನ ಗಡಿಕಲ್‌ನಿಂದ 75 ಕಿಲೋ ಮೀಟರ್ ದೂರ ಓಡಾಡಬೇಕಾಗಿದೆ. ಪ್ರಸ್ತುತ ಬೈಕ್ ಮೂಲಕ ಓಡಾಡುತ್ತಿದ್ದೇನೆ. ಇದು ಸಮಸ್ಯೆಯಾಗಿದೆ. ಬಸ್ ಸಂಪರ್ಕ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗುತ್ತಿತ್ತು’ ಎಂದು ಮಹಿಳೆಯೊಬ್ಬರು ತಿಳಿಸಿದ್ದಾರೆ.

‘ತಾಲ್ಲೂಕಿನ ಬಸರಿಕಟ್ಟೆ, ಮೆಣಸಿಹಾಡ್ಯ ಸೇರಿದಂತೆ ಬಹುತೇಕ ಕಡೆಗಳಿಂದ ರೈತರು, ಸಾರ್ವಜನಿಕರು ತಾಲ್ಲೂಕು ಕೇಂದ್ರಗಳಿಗೆ ಓಡಾಡಲು ಸಮಸ್ಯೆಯಾಗಿದೆ. ಪ್ರಸ್ತುತ 94ಸಿ ಹಕ್ಕುಪತ್ರ ದಾಖಲೆ ಹೊಂದಾಣಿಕೆ ಮಾಡಿಕೊಳ್ಳಲು ಕೂಲಿ ಕಾರ್ಮಿಕರು, ಬಡವರು ತಾಲ್ಲೂಕು ಕಚೇರಿಗೆ ಹೋಗಬೇಕಿರುವುದರಿಂದ ಅವರಿಗೂ ಸಮಸ್ಯೆಯಾಗಿದೆ’ ಎಂದು ಕ್ಷೇತ್ರ ರೈತ ಸಂಘದ ಕಾರ್ಯಾಧ್ಯಕ್ಷ ನವೀನ್ ಕರುವಾನೆ ತಿಳಿಸಿದ್ದಾರೆ.

‘ಪ್ರಸ್ತುತ ಸರ್ಕಾರದ ಸೂಚನೆಯಂತೆ ಬಸ್‌ನಲ್ಲಿ 30 ಜನರನ್ನು ಕೂರಿಸಿಕೊಂಡು ಹೋಗಬಹುದು. ಆದರೆ, ಒಂದು ಬಸ್ ತಂಗುಣದಲ್ಲಿ 2 ಜನ ಇಳಿದು, 4 ಜನ ಬಸ್ ಹತ್ತುವವರಿದ್ದರೆ, ಆಗ ಕೇವಲ 2 ಜನರನ್ನು ಹತ್ತಿಸಿಕೊಂಡು ಹೋಗಲು ಸಾಧ್ಯವಿಲ್ಲ. ಇದರಿಂದ ಜನರು ನಮ್ಮ ಮೇಲೆ ರೇಗಾಡಬಹುದು. ಇದು ಗೊಂದಲ ಉಂಟುಮಾಡಿದೆ’ ಎಂದು ಪಟ್ಟಣದ ಖಾಸಗಿ ಬಸ್ ಏಜೆಂಟ್ ಜನಾರ್ದನ್ ನಾಯ್ಕ್ ತಿಳಿಸಿದ್ದಾರೆ.

‘48 ಸೀಟುಗಳಿಗೆ ತೆರಿಗೆ ಕಟ್ಟಿ, ಕೇವಲ 30 ಪ್ರಯಾಣಿಕರನ್ನು ಕರೆದೊಯ್ದರೆ ಇನ್ನುಳಿದ 18 ಸೀಟಿನ ತೆರಿಗೆ ನಮ್ಮ ಸಂಸ್ಥೆಗಳಿಗೆ ಹೊರೆಯಾಗುತ್ತದೆ. ಸರ್ಕಾರ ಸದ್ಯಕ್ಕೆ ತೆರಿಗೆ ವಿನಾಯಿತಿ ನೀಡಬೇಕು. ಇಂತಿಷ್ಟು ಪ್ರಯಾಣಿಕರನ್ನು ಕೂರಿಸಿಕೊಂಡು ಹೋಗಬೇಕು ಎಂಬ ನಿಯಮದಲ್ಲಿ ನಮಗೆ ಗೊಂದಲವಿದ್ದು, ಸರ್ಕಾರ ಅದನ್ನು ನಿವಾರಿಸಬೇಕು. ಬಸ್ ಸೇವೆಯನ್ನು ಜುಲೈ 1ರಿಂದ ಪ್ರಾರಂಭಿಸಲು ಸಿದ್ಧತೆ ನಡೆದಿದೆ’ ಎಂದು ಸಹಕಾರ ಸಾರಿಗೆ ಸಂಸ್ಥೆ ಅಧ್ಯಕ್ಷ ಈ.ಎಸ್.ಧರ್ಮಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.