
ಹೊರನಾಡು, ಶೃಂಗೇರಿ, ನರಸಿಂಹರಾಜಪುರ, ಕೊಪ್ಪಕ್ಕೆ ಕೇಂದ್ರಬಿಂದು | ಠಾಣಾಧಿಕಾರಿ ರವೀಶ್ ನೇತೃತ್ವದಲ್ಲಿ ಚೌಡಿಕೆರೆ ಮತ್ತಿತರ ಕಡೆ ಕ್ಯಾಮೆರಾ | ಕಸ ಹಾಕಿದರೂ ಗುರುತಿಸುತ್ತವೆ ಸಿಸಿಟಿವಿ ಕ್ಯಾಮೆರಾಗಳು
ಬಾಳೆಹೊನ್ನೂರು: ಪಟ್ಟಣದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಪೊಲೀಸರು ಅತ್ಯಾದುನಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಈ ಪ್ರಯೋಗ ರಾಜ್ಯದಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ.
₹12.5 ಲಕ್ಷ ವೆಚ್ಚದಲ್ಲಿ ಅಳವಡಿಸಿರುವ ಈ ವ್ಯವಸ್ಥೆಗೆ ದಾನಿಗಳಿಂದ ನೆರವು ಪಡೆಯಲಾಗಿದೆ. 18 ಸಾವಿರ ಜನಸಂಖ್ಯೆ ಹೊಂದಿರುವ ಹೋಬಳಿ ಕೇಂದ್ರ ಬಾಳೆಹೊನ್ನೂರಿನ ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯು ಹೊರನಾಡು, ಶೃಂಗೇರಿ, ನರಸಿಂಹರಾಜಪುರ, ಕೊಪ್ಪಕ್ಕೆ ಕೇಂದ್ರ ಬಿಂದು. ಹೀಗಾಗಿ ನಿತ್ಯವೂ ಇಲ್ಲಿ ಜನರು ಮತ್ತು ವಾಹನಗಳ ಓಡಾಟ ಹೆಚ್ಚು. ಆದ್ದರಿಂದ ಇಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ.
ಠಾಣಾಧಿಕಾರಿ ರವೀಶ್ ನೇತೃತ್ವದಲ್ಲಿ ನರಸಿಂಹರಾಜಪುರ ರಸ್ತೆಯ ಚೌಡಿಕೆರೆ, ಕೊಪ್ಪ ರಸ್ತೆಯ ರಂಭಾಪುರಿ ಪೆಟ್ರೋಲ್ ಬಂಕ್, ಕಳಸ, ಚಿಕ್ಕಮಗಳೂರಿಗೆ ತೆರಳುವ ರೋಟರಿ ವೃತ್ತ ಹಾಗೂ ಪಟ್ಟಣದ ಹೃದಯ ಭಾಗದ ಜೇಸಿ ವೃತ್ತದಲ್ಲಿ ಒಟ್ಟು 6 ಕ್ಯಾಮೆರಾ ಅಳವಡಿಸಲಾಗಿದೆ. ವಾಹನಗಳು ಈ ಮಾರ್ಗದಲ್ಲಿ ಸಾಗಿದಾಗ ಅವುಗಳ ನೋಂದಣಿ ಸಂಖ್ಯೆಯು ಪೊಲೀಸ್ ಠಾಣೆಯ ನಿಯಂತ್ರಣ ಕೊಠಡಿಯಲ್ಲಿ ಅಳವಡಿಸಿರುವ ಕಂಪ್ಯೂಟರ್ ಪರದೆಯಲ್ಲಿ ದಾಖಲಾಗುತ್ತದೆ. ಒಂದು ತಿಂಗಳು ದತ್ತಾಂಶ ಸಂಗ್ರಹಿಸಿಡುವ ಸೌಲಭ್ಯ ಇದೆ.
ಬೈಕ್‌ನಲ್ಲಿ ಮೂವರ ಸವಾರಿ, ಸೀಟ್ ಬೆಲ್ಟ್ ಹಾಕಿಕೊಳ್ಳದೆ ವಾಹನದಲ್ಲಿ ಪ್ರಯಾಣ, ಅತಿವೇಗ, ಹೆಲ್ಮೆಟ್ ರಹಿತ ಚಾಲನೆ, ಎಲ್ಲೆಂದರಲ್ಲಿ ಕಸ ಹಾಕುವುದನ್ನು ಕ್ಯಾಮೆರಾಗಳು ಗುರುತಿಸುತ್ತವೆ.
32 ಸೆಕ್ಯೂರ್ ಕ್ಯಾಮೆರಾಗಳನ್ನು ಬಸ್ ನಿಲ್ದಾಣ, ಅಂಚೆ ಕಚೇರಿ ಸಮೀಪ, ಕೆಳಗಿನ ಪೇಟೆ, ಸಂತೆ ಮಾರುಕಟ್ಟೆ ಸೇರಿದಂತೆ 4 ಕಿಲೊಮೀಟರ್ ವ್ಯಾಪ್ತಿಯಲ್ಲಿ ಅಳವಡಿಸಲಾಗಿದೆ. ವಿವಿಧ ಕಡೆಗಳಲ್ಲಿ ಧ್ವನಿವರ್ಧಕಗಳೂ ಇವೆ. ಎಲ್ಲವನ್ನು ವೀಕ್ಷಿಸಲು ನಿಯಂತ್ರಣ ಕೊಠಡಿಯಲ್ಲಿ 65 ಇಂಚುಗಳ ಎರಡು ಟಿವಿಗಳನ್ನು ಅಳವಡಿಸಲಾಗಿದೆ.
‘ಅಪರಾಧ ತಡೆಗಟ್ಟಲು, ಕಾನೂನುಬಾಹಿರ ಚಟುವಟಿಕೆ ಹತ್ತಿಕ್ಕಲು ಸಂಘ ಸಂಸ್ಥೆಗಳು, ದಾನಿಗಳ ನೆರವಿನಿಂದ ಈ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ಜಾಗವನ್ನು ಬಣ್ಣದಲ್ಲಿ ಗುರುತಿಸಲಾಗುವುದು. ವೇಗ ನಿಯಂತ್ರಿಸಲು ರಬ್ಬರ್ ಹಂಪ್ ಹಾಕಲು ನಿರ್ಧರಿಸಲಾಗಿದೆ’ ಎಂದು ಠಾಣಾಧಿಕಾರಿ ರವೀಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.