ADVERTISEMENT

ಕೊಪ್ಪ: ಗಮನ ಸೆಳೆಯುವ ಚನ್ನಕೇಶವ ದೇಗುಲ

ಹೆರಟೆಗದ್ದೆಯಲ್ಲಿ 17 ನೇ ಶತಮಾನದ ಶಿಲಾ ಶಾಸನ ಪತ್ತೆ

ರವಿಕುಮಾರ್ ಶೆಟ್ಟಿಹಡ್ಲು
Published 18 ಏಪ್ರಿಲ್ 2021, 5:06 IST
Last Updated 18 ಏಪ್ರಿಲ್ 2021, 5:06 IST
ಕೊಪ್ಪ ತಾಲ್ಲೂಕಿನ ಹೆರಟೆಗದ್ದೆಯಲ್ಲಿ ಪತ್ತೆ ಹಚ್ಚಿರುವ 17ನೇ ಶತಮಾನಕ್ಕೆ ಸೇರಿದ ಶಿಲಾ ಶಾಸನ
ಕೊಪ್ಪ ತಾಲ್ಲೂಕಿನ ಹೆರಟೆಗದ್ದೆಯಲ್ಲಿ ಪತ್ತೆ ಹಚ್ಚಿರುವ 17ನೇ ಶತಮಾನಕ್ಕೆ ಸೇರಿದ ಶಿಲಾ ಶಾಸನ   

ಕೊಪ್ಪ: ತಾಲ್ಲೂಕಿನ ತುಳುವಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿ ಮಾಚಿಕೊಪ್ಪ ಗ್ರಾಮದ ಹೆರಟೆಗದ್ದೆ ಪ್ರದೇಶದ ಚೆನ್ನಕೇಶವ ದೇವಸ್ಥಾನದ ಸಮೀಪ 17ನೇ ಶತಮಾನಕ್ಕೆ ಸೇರಿದ ಶಿಲಾ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ.ಸುರೇಶ ಕಲ್ಕೆರೆ ಪತ್ತೆ ಹಚ್ಚಿದ್ದಾರೆ.

ಈ ಶಾಸನ ಶಿಲೆಯು 85 ಸೆಂಟಿ ಮೀಟರ್ ಎತ್ತರ ಮತ್ತು 55 ಸೆಂಟಿ ಮೀಟರ್ ಅಗಲವಿದ್ದು, ಗ್ರಾನೈಟ್ ಶಿಲೆಯಲ್ಲಿ‌ ಕೆತ್ತನೆ ಮಾಡಲಾಗಿದೆ. ಶಾಸನವು 8 ಸಾಲುಗಳನ್ನು ಹೊಂದಿದ್ದು, ಕನ್ನಡ ಲಿಪಿ ಮತ್ತು ಕನ್ನಡ ಭಾಷೆಯಲ್ಲಿದೆ. ಪ್ರಸ್ತುತ ಶಾಸನದ ಹೆಚ್ಚಿನ ಅಕ್ಷರಗಳು ತ್ರುಟಿತ(ನಾಶ)ಗೊಂಡಿವೆ.

ಈ ಶಾಸನವು ಆಣಶಿಕರಿಗಳು ಚೆನ್ನಕೇಶವ ದೇವರ ಸಮ್ಮುಖದಲ್ಲಿ ದೆರಸ ನಾಯಕರಿಗೆ ಕೊಟ್ಟಂತಹ ನೆಲತೆರು (ತೆರಿಗೆ)ವಿನ ಬಗ್ಗೆ ತಿಳಿಸುತ್ತದೆ. ಇದಕ್ಕೆ ಚೆನ್ನಕೇಶವ ದೇವರ ಒಪ್ಪ ಎಂಬ ಬರಹವಿದೆ. ಶಾಸನ ಓದುವುದರಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಸಹಕರಿಸಿದ್ದರು. ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಬಾಲಚಂದ್ರ ನಕ್ಕರಿಕೆ ಮತ್ತು ಹೊಸ ದೇವಸ್ಥಾನದ ದತ್ತಾತ್ರೇಯ ಭಟ್ ಸಹಕರಿಸಿದ್ದರು.

ADVERTISEMENT

ದಟ್ಟ ಕಾಡಿನ ಮಧ್ಯೆ ಇರುವ ಸುಂದರ ಚೆನ್ನಕೇಶವ ದೇವಸ್ಥಾನ ನೋಡಲು ಮೋಹಕವಾಗಿದೆ. ದೇವಸ್ಥಾನದ ಸ್ವಲ್ಪ ದೂರದಲ್ಲಿ ಹದಿನಾರನೇ ಶತಮಾನದ ಮೂರು ಮಾಸ್ತಿ ಕಲ್ಲು ಮತ್ತು ಒಂದು ವೀರಗಲ್ಲು ಇದೆ. ದೇವಸ್ಥಾನದ ಪಕ್ಕದಲ್ಲಿ ಎತ್ತರವಾದ ಬೆಟ್ಟವಿದ್ದು ಸ್ಥಳೀಯರು ಇದನ್ನು ದುರ್ಗದ ಬೆಟ್ಟ ಎಂದೂ ಕರೆಯುತ್ತಾರೆ. ಇಲ್ಲಿ ಬಂಡೆಯ ಮೇಲೆ ಕೊರೆದ ಅರೆಯುವ ಕಲ್ಲಿನ ಗುಂಡಿಯಿದ್ದು ಜನರು ವಾಸಿಸುತ್ತಿದ್ದ ಕುರುಹುಗಳಿವೆ.

‘15-16ನೇ ಶತಮಾನದಲ್ಲಿ ಇಲ್ಲಿ ದುರ್ಗಾ ದೇವಿಯ ವಿಗ್ರಹವಿದ್ದು, ನಂತರ ಈ ವಿಗ್ರಹವನ್ನು ಈಗಿನ ಹೊಸ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು ಎಂಬ ಐತಿಹ್ಯವಿದೆ. ಜಾತ್ರೆಯ ಸಮಯ ಮತ್ತು ಕಾರ್ತಿಕ ಮಾಸದಲ್ಲಿ ಈ ದೇವಿಯ ಉತ್ಸವ ಮೂರ್ತಿಯನ್ನು ಚೆನ್ನಕೇಶವ ದೇವಸ್ಥಾನಕ್ಕೆ ತಂದು ಪೂಜಿಸಲಾಗುತ್ತಿತ್ತು ಎಂದು ಈ ಹಿಂದೆ 107 ವರ್ಷ ಬದುಕಿದ್ದ ನೆಕ್ಕರಿಕೆ ಮಂಜುಭಟ್ ಎಂಬುವವರು ಅಭಿಪ್ರಾಯ ವ್ಯಕ್ತಪಡಿಸಿದ್ದರು’ ಎಂಬುದಾಗಿ ಇತಿಹಾಸ ಸಂಶೋಧನಾರ್ಥಿ ನ.ಸುರೇಶ ಕಲ್ಕೆರೆ ವಿವರಿಸಿದ್ದಾರೆ.

ಕಲ್ಲಿನ ರಚನೆಯ ‘ಸೀತಾ ಸೆರಗು’
ರಾಮ –ಲಕ್ಷ್ಮಣ –ಸೀತೆಯರು ಇಲ್ಲಿ ಕೆಲವು ಕಾಲ ಇದ್ದರೆಂದೂ, ಸೀತೆ ಸೀರೆಯನ್ನು ಇಲ್ಲಿ ಒಣಗಿಸಲು ಹಾಕಿದಾಗ ಸೆರಗಿನ ರೀತಿಯ ರಚನೆ ಕಲ್ಲಿನಲ್ಲಿ ಮೂಡಿ ಅದನ್ನು ಸ್ಥಳೀಯರು ‘ಸೀತಾ ಸೆರಗು’ ಎಂದೇ ಇಂದಿಗೂ ಕರೆಯುವರು. ದೂರದಲ್ಲಿ ಬಾವಿಯಿದ್ದು ಅದನ್ನು ‘ಸೀತಾ ಬಾವಿ’ ಎಂದು ಕರೆಯುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.