ADVERTISEMENT

ಜೆಡಿಎಸ್ ವಿರುದ್ಧ ಅಪಪ್ರಚಾರ ಸಲ್ಲದು: ಸುಧಾಕರ್ ಎಸ್. ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 8:28 IST
Last Updated 17 ಜನವರಿ 2023, 8:28 IST
ನರಸಿಂಹರಾಜಪುರ ವಗ್ಗಡೆ ಗ್ರಾಮದಲ್ಲಿ ಜೆಡಿಎಸ್ ನಿಂದ ಆಯೋಜಿಸಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಸುಧಾಕರ್ ಎಸ್.ಶೆಟ್ಟಿ ಮಾತನಾಡಿದರು
ನರಸಿಂಹರಾಜಪುರ ವಗ್ಗಡೆ ಗ್ರಾಮದಲ್ಲಿ ಜೆಡಿಎಸ್ ನಿಂದ ಆಯೋಜಿಸಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಸುಧಾಕರ್ ಎಸ್.ಶೆಟ್ಟಿ ಮಾತನಾಡಿದರು   

ವಗ್ಗಡೆ (ಎನ್.ಆರ್.ಪುರ): ಕ್ಷೇತ್ರದಲ್ಲಿ ಜಾತ್ಯತೀತ ಜನತಾದಳದ ಪ್ರಬಲ ಸಂಘಟನೆಯಿಂದ ವಿಚಲಿತರಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ನ ನಾಯಕರು ತಮ್ಮ ವಿರುದ್ಧ ಹಾಗೂ ಜೆಡಿಎಸ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಶೃಂಗೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಸುಧಾಕರ್ ಎಸ್.ಶೆಟ್ಟಿ ತಿಳಿಸಿದರು.

ತಾಲ್ಲೂಕಿನ ವಗ್ಗಡೆ ಗ್ರಾಮದಲ್ಲಿ ಭಾನುವಾರ ತಾಲ್ಲೂಕು ಜೆಡಿಎಸ್ ಘಟಕದಿಂದ ಹಮ್ಮಿಕೊಂಡಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಹಾಲಿ ಮತ್ತು ಮಾಜಿ ಶಾಸಕರ ದಬ್ಬಾಳಿಕೆ, ಸ್ವಜನಪಕ್ಷಪಾತ ದಿಂದ ಬೇಸತ್ತ ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ ಗೊಳ್ಳುತ್ತಿದ್ದಾರೆ. ಇದರಿಂದ ಹತಾಶರಾಗಿ ಅವರು ಜೆಡಿಎಸ್ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.

ADVERTISEMENT

ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಹೆಚ್ಚು ಬಾರಿ ಕ್ಷೇತ್ರ ಪರ್ಯಟನೆ ಮಾಡಿದ್ದೇನೆ. ಕ್ಷೇತ್ರದ ಜನರ ನಾಡಿ ಮಿಡಿತ ಅರಿತುಕೊಂಡಿದ್ದು, ಕ್ಷೇತ್ರದ ಸಮಸ್ಯೆ ಅಧ್ಯಯನ ಮಾಡಲಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.

ಬಿಜೆಪಿಯವರು ಹಿಂದುತ್ವವನ್ನು ಅಸ್ತ್ರ ಮಾಡಿಕೊಂಡು ಭಾವನೆಗಳ ಮೇಲೆ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತ, ದಲಿತ ಮತಗಳ ಓಲೈಕೆ ರಾಜಕಾರಣ ಮಾಡು ತ್ತಿದೆ ಎಂದು ದೂರಿದ ಅವರು, ಪಂಚರತ್ನ ಯಾತ್ರೆಯ ಮೂಲಕ ರಾಜ್ಯಕ್ಕೆ ಉತ್ತಮವಾದ ಆರೋಗ್ಯ, ಉತ್ತಮ ಶಿಕ್ಷಣ, ರೈತರಿಗೆ ಚೈತನ್ಯ, ಉತ್ತಮ ನೀರಾವರಿ ಮೂಲಕ ಅಭಿವೃದ್ಧಿಗೆ ಗಮನಹರಿಸಲಿದೆ ಎಂದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿದ್ದರೂ ಹಾಲಿ, ಮಾಜಿ ಶಾಸಕರು ಕಿತ್ತಾಟದಲ್ಲಿ ತೊಡಗಿದ್ದಾರೆ. ಈ ಹಿಂದೆ ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಅಳೇಹಳ್ಳಿ, ವಗ್ಗಡೆ ರಸ್ತೆ ಅಭಿವೃದ್ಧಿ ಮಾಡಲಾಗಿತ್ತು ಎಂದರು.

ಜೆಡಿಎಸ್ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಕಣಿವೆ ವಿನಯ್ ಮಾತನಾ ಡಿದರು. ಅಧ್ಯಕ್ಷತೆಯನ್ನು ಜೆಡಿಎಸ್ ಘಟಕದ ವಗ್ಗಡೆ ಬೂತ್ ಅಧ್ಯಕ್ಷ ಸಚಿನ್ ವಹಿಸಿದ್ದರು. ಮುಖಂಡರಾದ ಕುಂಚೂರು ವಾಸು, ಪ್ರಕಾಶ್ ಗೌಡ, ವಿಜಯಕೃಷ್ಣ, ಮೇಘರ್ಷ, ನಾಗರಾಜು, ರಾಯಪ್ಪಣ್ಣ, ಬಾಲಕೃಷ್ಣ, ಸಿದ್ದಪ್ಪ, ವಾಸುದೇವ, ಮಂಜಪ್ಪ, ಧನ್ಯ ಜಗದೀಶ್, ಪಿ.ಪ್ರಭಾಕರ್, ಎಂ.ಮಹೇಶ್, ಸಿಜು ಇದ್ದರು.

ಮನೋಹರ್ ನಾಯ್ಕ ಸೇರಿದಂತೆ ಹಲವು ಮಂದಿ ಯುವಕರು ಬಿಜೆಪಿ, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.