ADVERTISEMENT

ನನೆಗುದಿಗೆ ಬಿದ್ದ ರಸ್ತೆ ಕಾಮಗಾರಿ: ಚುನಾವಣಾ ಬಹಿಷ್ಕಾರದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 5:28 IST
Last Updated 23 ಜನವರಿ 2023, 5:28 IST
ಕಳಸ ತಾಲ್ಲೂಕಿನ ಶಂಕರಕುಡಿಗೆ ಗ್ರಾಮದ ರಸ್ತೆ ಹದಗೆಟ್ಟಿರುವುದು
ಕಳಸ ತಾಲ್ಲೂಕಿನ ಶಂಕರಕುಡಿಗೆ ಗ್ರಾಮದ ರಸ್ತೆ ಹದಗೆಟ್ಟಿರುವುದು   

ಕಳಸ: ತಾಲ್ಲೂಕಿನ ಕಟ್ಟ ಕಡೆಯ ಗ್ರಾಮವಾದ ಶಂಕರಕುಡಿಗೆಯ ಗ್ರಾಮಸ್ಥರು ರಸ್ತೆ ಸಮಸ್ಯೆ ಕಾರಣಕ್ಕೆ ಮುಂದಿನ ಚುನಾವಣೆಗಳನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.

ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲೆಂದು ಕಳೆದ ವರ್ಷವೇ ₹ 70 ಲಕ್ಷ ಮಂಜೂರು ಆಗಿತ್ತು. ಲೋಕೋ ಪಯೋಗಿ ಇಲಾಖೆಯು ಶಂಕರಕುಡಿಗೆಯಿಂದ ಬಸರೀ ಕಟ್ಟೆ ಕಡೆಗಿನ 800 ಮೀಟರ್ ರಸ್ತೆ ದುರಸ್ತಿಗೆ ಸಜ್ಜಾಗಿತ್ತು. ವರ್ಷದ ಹಿಂದೆ ಗುತ್ತಿಗೆದಾರ ಈ ರಸ್ತೆಯನ್ನು ಅಗೆದು ಕಾಮಗಾರಿ ಆರಂಭಿಸಿದಾಗ ಗ್ರಾಮದ ರಸ್ತೆ ಅವ್ಯವಸ್ಥೆ ತೀರಿತು ಎಂದು ಗ್ರಾಮಸ್ಥರು ಸಂತಸಪಟ್ಟರು. ಆದರೆ, ಆನಂತರ ಈವರೆಗೂ ಕಾಮಗಾರಿ ನಡೆಸದೆ ಗುತ್ತಿಗೆ ದಾರ ನಾಪತ್ತೆ ಆಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಶಂಕರಕುಡಿಗೆಯಿಂದ ಪ್ರತಿದಿನ ಶಾಲೆಗೆ ತೆರಳಲು ಹತ್ತಾರು ಮಕ್ಕಳು, ಕೆಲಸಕ್ಕೆ ಹೋಗುವ ಕಾರ್ಮಿಕರು, ಆಸ್ಪತ್ರೆ ತಲುಪಬೇಕಾದ ರೋಗಿಗಳು, ಕೃಷಿ ಸಲಕರಣೆ ಕೊಂಡೊಯ್ಯಬೇಕಾದ ರೈತರು ಈ ರಸ್ತೆಯ ಅವ್ಯವಸ್ಥೆ ಬಗ್ಗೆ ರೋಸಿ ಹೋಗಿದ್ದಾರೆ. ಈ ರಸ್ತೆ ಅಗೆಯುವ ಮೊದಲು ತಕ್ಕ ಮಟ್ಟಿಗೆ ಉತ್ತಮ ಸ್ಥಿತಿಯಲ್ಲೇ ಇತ್ತು. ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಅಗೆದು ಹಾಕಿದ ನಂತರ ದಪ್ಪ ಜಲ್ಲಿ ರಸ್ತೆ ತುಂಬೆಲ್ಲಾ ಹರಡಿ ಜನರ ಮತ್ತು ವಾಹನಗಳ ಸಂಚಾರಕ್ಕೆ ಅಸಾಧ್ಯ ಎಂಬಂತಾಗಿದೆ ಎಂಬುದು ಅವರ ದೂರು.

ADVERTISEMENT

‘ರಸ್ತೆ ಅಗೆದು ಒಂದು ವರ್ಷ ಕಳೆದರೂ ಅಧಿಕಾರಿಗಳು ನಮ್ಮ ಊರಿಗೆ ಬಂದಿಲ್ಲ. ಜನಪ್ರತಿನಿಧಿಗಳಿಗೆ ತಿಳಿಸಿದರೂ ಪ್ರಯೋಜನ ಆಗಿಲ್ಲ. ಮುಂದಿನ ಚುನಾವಣೆಗಳನ್ನು ಬಹಿಷ್ಕಾರ ಮಾಡುತ್ತಿದ್ದೇವೆ’ ಎಂದು ಶಂಕರಕುಡಿಗೆ ಗ್ರಾಮಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.