ADVERTISEMENT

ಕಾಂಗ್ರೆಸ್‌ನಿಂದ ರಾಜಣ್ಣ ಉಚ್ಚಾಟಿಸಲು ಆಗ್ರಹ

ರಾಜಣ್ಣ ಹೇಳಿಕೆ ಖಂಡಿಸಿ ಜೆಡಿಎಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 7:18 IST
Last Updated 4 ಜುಲೈ 2022, 7:18 IST
ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಬೀರೂರಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಭಾನುವಾರ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಬೀರೂರಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಭಾನುವಾರ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.   

ಬೀರೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಅವಹೇಳನಕಾರಿ ಮಾತನಾಡಿದ ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಿ, ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಬೀರೂರು ಜೆಡಿಎಸ್ ಕಾರ್ಯಕರ್ತರು ಒತ್ತಾಯಿಸಿದರು.

ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಭಾನುವಾರ ಜೆಡಿಎಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ನಾಗರಾಜ್, ‘ರಾಜ್ಯದ ಹಿರಿಯ ಮುತ್ಸದ್ದಿ ಎಚ್.ಡಿ.ದೇವೇಗೌಡರು ಕರ್ನಾಟಕದ ಹಿರಿಮೆಯಾಗಿದ್ದಾರೆ. ಅವರು ಕೆಂಪು ಕೋಟೆಯನ್ನೇರಿ ಭಾರತದ ರಾಷ್ಟ್ರಧ್ವಜ ಹಾರಿಸಿದ ಏಕೈಕ ಕನ್ನಡಿಗ. ಅಂಥವರ ಬಗ್ಗೆ ಕೀಳಾಗಿ ಮಾತನಾಡಿರುವುದು ಖಂಡನೀಯ’ ಎಂದು ಆಕ್ರೋಶ ಹೊರಹಾಕಿದರು.

ಸಾಮಾಜಿಕ ಸೇವಾ ಕಾರ್ಯಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ಆರ್.ಹೇಮಂತ್ ಕುಮಾರ್ ಮಾತನಾಡಿ, ‘ಕೆಲ ರಾಜ್ಯದಲ್ಲಿ ಬೆಳೆಯುವ ಭತ್ತದ ತಳಿಗೂ ದೇವೇಗೌಡರ ಹೆಸರನ್ನು ನಾಮಕರಣ ಮಾಡಿ ಗೌರವ ನೀಡಿದ್ದಾರೆ. ಆದರೆ, ತವರು ರಾಜ್ಯದವರೇ ವ್ಯಂಗ್ಯವಾಗಿ ಮಾತನಾಡಿ, ಅರಿವುಗೇಡಿಯಂತೆ ವರ್ತಿಸುತ್ತಿದ್ದಾರೆ. ಅಪ್ರತಿಮ ರಾಜಕಾರಿಣಿಯ ಬಗ್ಗೆ ತುಚ್ಛವಾಗಿ ಮಾತನಾಡಿರುವ ಕೆ.ಎನ್.ರಾಜಣ್ಣ ಒಬ್ಬ ಅಪ್ರಬುದ್ಧ ರಾಜಕಾರಿಣಿ. ಆತನಿಂದ ಕಾಂಗ್ರೆಸ್ ಪಕ್ಷಕ್ಕೆ ಶ್ರೇಯಸ್ಸು ಲಭಿಸುವುದಿಲ್ಲ’ ಎಂದು ಟೀಕಿಸಿದರು.

ADVERTISEMENT

‘ದೇವೇಗೌಡರು ಈ ನಾಡಿನ ಆಸ್ತಿ, ಅಂತಹ ಹಿರಿಯರ ಬಗ್ಗೆ ಯಾವುದೇ ರಾಜಕೀಯ ಪಕ್ಷದವರೂ ಗೌರವದಿಂದ ನಡೆದುಕೊಳ್ಳಬೇಕು. ರಾಜಣ್ಣನ ನುಡಿಗಳು ಎಲ್ಲರ ಮನಸ್ಸನ್ನು ಗಾಸಿಗೊಳಿಸಿವೆ’ ಎಂದು ಕೆ.ಆರ್.ಮಹೇಶ್ ಒಡೆಯರ್ ಹೇಳಿದರು.

ಶಿವಮೂರ್ತಿ, ಅಯೂಬ್ ಅಹಮದ್, ಹರಿಪ್ರಸಾದ್, ಶಿವಕುಮಾರ್, ಸುರೇಶ್, ಮಂಜು, ರಮೇಶ್, ಅಜ್ಜಯ್ಯ, ರಂಗನಾಥ್, ಜಾವಿದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.