ADVERTISEMENT

ಸರ್ಕಾರಿ ಪ್ರೌಢಶಾಲೆ: ಸದಸ್ಯತ್ವ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 2:16 IST
Last Updated 5 ಆಗಸ್ಟ್ 2022, 2:16 IST
ಶೃಂಗೇರಿ ಸರ್ಕಾರಿ ಪ್ರೌಢಶಾಲೆ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘ, ಶಾಲಾ ಸಮಿತಿ ಪದಾಧಿಕಾರಿಗಳು ಹರಿಹರಪುರ ಮಠದ  ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಾದ ಪಡೆದರು.
ಶೃಂಗೇರಿ ಸರ್ಕಾರಿ ಪ್ರೌಢಶಾಲೆ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘ, ಶಾಲಾ ಸಮಿತಿ ಪದಾಧಿಕಾರಿಗಳು ಹರಿಹರಪುರ ಮಠದ  ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಾದ ಪಡೆದರು.   

ಶೃಂಗೇರಿ: ‘ದೇಶ ಸ್ವಾತಂತ್ರ್ಯ ಪಡೆದ ವರ್ಷ ಆರಂಭವಾದ ಶೃಂಗೇರಿ ಸರ್ಕಾರಿ ಪ್ರೌಢಶಾಲೆ, ಈ ವರ್ಷ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ’ ಎಂದು ಶೃಂಗೇರಿ ಸರ್ಕಾರಿ ಪ್ರೌಢಶಾಲೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಬಿ.ಶಿವಶಂಕರ್ ಹೇಳಿದರು.

ಹರಿಹರಪುರ ಮಠಕ್ಕೆ ಗುರುವಾರ ಹಳೆ ವಿದ್ಯಾರ್ಥಿ ಸಂಘ, ಶಾಲಾ ಅಭಿವೃದ್ಧಿ ಸಮಿತಿ ಮತ್ತು ಶಿಕ್ಷಕರ ತಂಡ ಭೇಟಿ ನೀಡಿ ಮಠಾಧೀಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಾದ ಪಡೆದ ಸಂದರ್ಭದಲ್ಲಿ ಅವರು ಮಾತನಾಡಿದರು.

‘ತಾಲ್ಲೂಕು ಬೋರ್ಡ್ ಶಾಲೆಯಾಗಿದ್ದ ನಂತರ ಇದು ಸರ್ಕಾರಿ ಪ್ರೌಢಶಾಲೆಯಾಗಿತ್ತು. ತಾಲ್ಲೂಕಿನ ಮೊದಲ ಪ್ರೌಢಶಾಲೆ ಎಂಬ ಹೆಗ್ಗಳಿಕೆ ಹೊಂದಿರುವುದು ಹಾಗೂ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸಿದ ಶಾಲೆಯಾಗಿದೆ. ಈಗಲೂ ಉತ್ತಮ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಶಿಕ್ಷಕರ ತಂಡ ಹೊಂದಿದೆ. ಈ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಅಮೃತ ಮಹೋತ್ಸವವನ್ನು ನಡೆಸುವ ಉದ್ದೇಶ ಹೊಂದಲಾಗಿದೆ. ವಿವಿಧೆಡೆ ಹಂಚಿ ಹೋಗಿರುವ ಹಳೆ ವಿದ್ಯಾರ್ಥಿಗಳ ಸದಸ್ಯತ್ವವನ್ನು ಮಾಡಲಾಗುತ್ತದೆ. ಈ ಶಾಲೆಯ ಹಳೆ ವಿದ್ಯಾರ್ಥಿಯೂ ಆಗಿರುವ ಹರಿಹರಪುರ ಮಠದ ಗುರುಗಳು ಸದಸ್ಯತ್ವ ಪಡೆಯುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ‘ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಶಾಲೆಯ ಕಾರ್ಯಕ್ರಮಗಳು ಯಶಸ್ವಿಯಾಗಲಿ. ಸಾವಿರಾರು ಜನರಿಗೆ ವಿದ್ಯಾದಾನ ಮಾಡಿರುವ ಶಾಲೆ ಮತ್ತಷ್ಟು ಅಭಿವೃದ್ಧಿ ಹೊಂದಲಿ’ ಎಂದರು. ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ವಿಜಯಕುಮಾರ್, ಶೃಂಗೇರಿ ಸುಬ್ಬಣ್ಣ, ಕಿರಣ್, ಶ್ರೀನಿವಾಸ್, ಕೌಸ್ತುಭಾ ಭಟ್, ಶಾಲಾ ಸಮಿತಿ ಅಧ್ಯಕ್ಷ ಸುಧಾಕರ್, ಸದಸ್ಯರಾದ ಸದಾನಂದ, ನಳಿನಿ, ಶಿಕ್ಷಕ ವೆಂಕಟೇಶಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.