ADVERTISEMENT

ಚಿಕ್ಕಮಗಳೂರು ಚಂದ್ರದ್ರೋಣ ಪರ್ವತ: ಸದ್ಯಕ್ಕಿಲ್ಲ ಹೆಲಿ ಟೂರಿಸಂ ಭಾಗ್ಯ

ವಿಜಯಕುಮಾರ್ ಎಸ್.ಕೆ.
Published 19 ಜನವರಿ 2025, 6:48 IST
Last Updated 19 ಜನವರಿ 2025, 6:48 IST
<div class="paragraphs"><p>ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಶ್ರೇಣಿಯ ಸಾಲುಗಳು</p></div>

ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಶ್ರೇಣಿಯ ಸಾಲುಗಳು

   

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್‌ಗಿರಿ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿಯನ್ನು ಹೆಲಿಕಾಪ್ಟರ್ ಮೂಲಕ ಆಗಸದಿಂದ ದರ್ಶನ ಮಾಡುವ ಭಾಗ್ಯ ಸದ್ಯಕ್ಕೆ ಇಲ್ಲವಾಗಿದೆ. ಜ.26ರಿಂದ ಆರಂಭವಾಗುವ ಫಲಪುಷ್ಪ ಪ್ರದರ್ಶನದ ವೇಳೆ ಹೆಲಿ ಟೂರಿಸಂ ಪರಿಚಯಿಸುವ ಆಲೋಚನೆಯನ್ನು ಜಿಲ್ಲಾಡಳಿತ ಕೈಬಿಟ್ಟಿದೆ.

ಡಿಸೆಂಬರ್ ಕೊನೆಯ ವಾರದಲ್ಲಿ ಕ್ರಿಸ್‌ಮಸ್ ರಜೆ ಮತ್ತು ವರ್ಷಾಂತ್ಯ ಆಚರಣೆ ವೇಳೆ ಜಿಲ್ಲೆಗೆ ಬರುವ ಪ್ರವಾಸಿಗರಿಗಾಗಿ ಒಂದು ವಾರದ ಮಟ್ಟಿಗೆ ಹೆಲಿ ಟೂರಿಸಂ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಹೊಸ ವರ್ಷಾಚರಣೆಗೆ ಬರುವ ಜನರಿಗೆ ಚಿಕ್ಕಮಗಳೂರನ್ನು ವಿಶೇಷವಾಗಿ ಪರಿಚಯಿಸಲು ಉದ್ದೇಶಿಸಲಾಗಿತ್ತು. ಚಿಕ್ಕಮಗಳೂರು ನಗರದಿಂದ ಚಂದ್ರದ್ರೋಣ ಪರ್ವತ ಶ್ರೇಣಿ ಮತ್ತು ಮೂಡಿಗೆರೆ ತಾಲ್ಲೂಕಿನ ರಾಣಿಝರಿ ಬಳಿಯಿಂದ ಮತ್ತೊಂದು ಸುತ್ತಿನಲ್ಲಿ ಕುದುರೆಮುಖದ ಗಿರಿಶ್ರೇಣಿಗಳನ್ನು ದರ್ಶನ ಮಾಡಿಸಲು ಉದ್ದೇಶಿಸಲಾಗಿತ್ತು.

ADVERTISEMENT

ಆದರೆ, ಪರಿಸರವಾದಿಗಳಿಂದ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಪಕ್ಷಿಗಳ ಸಂತಾನೋತ್ಪತ್ತಿಯಾಗಿ ಗೂಡು ಕಟ್ಟುವ ಸಮಯ. ಈ ಸಂದರ್ಭದಲ್ಲಿ ಗಿರಿಭಾಗದಲ್ಲಿ ಹೆಲಿಕಾಪ್ಟರ್‌ ಸುತ್ತಾಡಿದರೆ ಅವುಗಳ ಸಹಜ ಜೀವನಕ್ಕೆ ತೊಂದರೆಯಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಆದ್ದರಿಂದ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಈ ಹೆಲಿ ಟೂರಿಸಂ ಪ್ರಸ್ತಾಪ ಕೈಬಿಡಲಾಗಿತ್ತು.

ಜ.26ರಿಂದ ಫಲಪುಷ್ಪ ಪ್ರದರ್ಶನ ಆರಂಭವಾಗಲಿದೆ. ತೋಟಗಾರಿಕಾ ಇಲಾಖೆ ಆವರಣದಲ್ಲಿ ಆಯೋಜಿಸುತ್ತಿದ್ದ ಫಲಪುಷ್ಪ ಪ್ರದರ್ಶನವನ್ನು ಈ ಬಾರಿ ಜಿಲ್ಲಾ ಆಟದ ಮೈದಾನಕ್ಕೆ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನ ವಾರಾಂತ್ಯದ ರಜೆಗೊಂದಿಗೆ ಸೇರಿಕೊಂಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರಲಿದ್ದಾರೆ ಎಂದು ಜಿಲ್ಲಾಡಳಿತ ನಿರೀಕ್ಷಿಸಿದೆ. ಈ ವೇಳೆ ಹೆಲಿ ಟೂರಿಸಂ ಮೂಲಕ ಗಿರಿ ದರ್ಶನ ಮಾಡಿಸಲು ಸಿದ್ಧತೆ ನಡೆಸಿತ್ತು. ಆದರೆ, ಅದಕ್ಕೆ ಹಲವು ತೊಡಕುಗಳು ಎದುರಾಗಿವೆ. ಜಿಲ್ಲಾಡಳಿತ ಸಿದ್ಧವಿದ್ದರೂ, ಹೆಲಿ ಟೂರಿಸಂ ನಡೆಸಿಕೊಡುವ ಏಜೆನ್ಸಿ ಆಸಕ್ತಿ ತೊರಿಸಿಲ್ಲ. ಆದ್ದರಿಂದ ಪ್ರಸ್ತಾಪ ಕೈಬಿಡಲಾಗಿದೆ.

2023ರ ಜನವರಿಯಲ್ಲಿ ನಡೆದ ಜಿಲ್ಲಾ ಉತ್ಸವದ ಸಂದರ್ಭದಲ್ಲಿ ಹೆಲಿ ಟೂರಿಸಂ ಏರ್ಪಡಿಸಲಾಗಿತ್ತು. 7 ನಿಮಿಷದ ಸುತ್ತು ಮತ್ತು 13 ನಿಮಿಷದ ಸುತ್ತುಗಳನ್ನು ನಿಗದಿ ಮಾಡಲಾಗಿತ್ತು. ಜನ ಮುಗಿಬಿದ್ದು ಹೆಲಿಕಾಪ್ಟರ್‌ನಲ್ಲಿ ಏರಿ ಗಿರಿ ಕಂದರಗಳನ್ನು ಕಣ್ತುಂಬಿಕೊಂಡಿದ್ದರು.

ಮುಂದೆ ಬಾರದ ಏಜೆನ್ಸಿ

ಹೆಲಿ ಟೂರಿಸಂ ನಡೆಸಲು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ತಯಾರಿದ್ದರೂ ನಡೆಸಿಕೊಡಲು ಹೆಲಿ ಟೂರಿಸಂ ನಡೆಸಿಕೊಡುವ ಏಜೆನ್ಸಿಗಳು ಮುಂದೆ ಬರುತ್ತಿಲ್ಲ. ‘ವರ್ಷಾಂತ್ಯದ ವೇಳೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ನಿರ್ವಹಣೆ ಸಾಧ್ಯವಾಗಲಿದೆ ಎಂದು ಅವರು ನಿರೀಕ್ಷೆ ಮಾಡಿದ್ದರು. ಈಗ ಅಷ್ಟೇನು ಆಸಕ್ತಿ ತೋರಿಸುತ್ತಿಲ್ಲ. ಆದ್ದರಿಂದ ಪ್ರಸ್ತಾಪವನ್ನು ಸದ್ಯಕ್ಕೆ ಕೈಬಿಡಲಾಗಿದೆ. ಮುಂದಿನ ದಿನಗಳಲ್ಲಿ ನೋಡೊಣ’ ಎಂದು ಅಧಿಕಾರಿಗಳು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.