ADVERTISEMENT

ಆಹಾ ಚಳಿ ಚಳಿ.. ಚಿಕ್ಕಮಗಳೂರಲ್ಲಿ 10 ಡಿಗ್ರಿ ಸೆಲ್ಸಿಯಸ್‌ಗೆ ಇಳಿದ ತಾಪಮಾನ!

ತಾಪಮಾನ ಅತ್ಯಂತ ಗರಿಷ್ಠ ಪ್ರಮಾಣಕ್ಕೆ ಇಳಿಕೆ: ಶೀತಗಾಳಿಗೆ ಹೆಚ್ಚಾದ ಚಳಿ

ವಿಜಯಕುಮಾರ್ ಎಸ್.ಕೆ.
Published 16 ಡಿಸೆಂಬರ್ 2025, 7:40 IST
Last Updated 16 ಡಿಸೆಂಬರ್ 2025, 7:40 IST
<div class="paragraphs"><p>ಆಹಾ ಚಳಿ ಚಳಿ.. ಚಿಕ್ಕಮಗಳೂರಲ್ಲಿ 10 ಡಿಗ್ರಿ ಸೆಲ್ಸಿಯಸ್‌ಗೆ ಇಳಿದ ತಾಪಮಾನ!</p></div>

ಆಹಾ ಚಳಿ ಚಳಿ.. ಚಿಕ್ಕಮಗಳೂರಲ್ಲಿ 10 ಡಿಗ್ರಿ ಸೆಲ್ಸಿಯಸ್‌ಗೆ ಇಳಿದ ತಾಪಮಾನ!

   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ತಾಪಮಾನದಲ್ಲಿ ಗಣನೀಯವಾಗಿ ಕುಸಿತ ಕಂಡಿದ್ದು, ಚಳಿ ತೀವ್ರಗೊಂಡಿದೆ. ಕೊರೆವ ಚಳಿಗೆ ಜನ ತತ್ತರಿಸಿಹೋಗಿದ್ದಾರೆ.

ಸೋಮವಾರ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿತ್ತು. ಚಿಕ್ಕಮಗಳೂರು ನಗರದಲ್ಲೇ ಜನ ತಡೆಯಾಗದ ಕೊರೆವ ಚಳಿ ಅನುಭವಿಸುತ್ತಿದ್ದು, ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ, ಅತ್ತಿಗುಂಡಿ ಸೇರಿ ಗುಡ್ಡದ ಮೇಲಿರುವ ಜನವಸತಿಗಳ ಜನ ಭಾರಿ ಚಳಿ ಎದುರಿಸುತ್ತಿದ್ದಾರೆ.

ADVERTISEMENT

ಸೋಮವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಬಿಸಿಲಿದ್ದರೂ ಚಳಿಯ ಅನುಭವವಾಯಿತು. ಸಾಮಾನ್ಯವಾಗಿಯೇ ಸ್ವಲ್ಪ ತಣ್ಣನೆಯ ವಾತಾವರಣ ಹೊಂದಿರುವ ಜಿಲ್ಲೆಯ ಮಲೆನಾಡಿನಲ್ಲಿ ಈಗ ಶೀತ ಗಾಳಿಯಗೆ ಜನ ತತ್ತರಿಸಿ ಹೋಗಿದ್ದಾರೆ. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಜನ ಚಳಿಯಿಂದ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ.

ಚಳಿಯಿಂದ  ರಕ್ಷಣೆ ಪಡೆಯಲು ಟೋಪಿ, ಸ್ವೆಟರ್‌, ಜಾಕೆಟ್‌, ಮಫ್ಲರ್‌ ಸೇರಿದಂತೆ ಹಲವು ವಸ್ತುಗಳನ್ನು ಧರಿಸುತ್ತಿದ್ದಾರೆ. ಜೊತೆಗೆ ಅಲ್ಲಲ್ಲಿ ಬೆಂಕಿ ಕಾಯಿಸಿಕೊಳ್ಳುವುದನ್ನು ಕಾಣಿಸುತ್ತಿದೆ. 

ಚಳಿಯಿಂದಾಗಿ ಶೀತ, ಕೆಮ್ಮು, ಗಂಟಲು ನೋವು, ಜ್ವರ ಕೂಡ ಹೆಚ್ಚಾಗುವ ಆತಂಕ ಇದೆ. ಸದ್ಯಕ್ಕೆ ಜಿಲ್ಲೆಯ ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿಲ್ಲ, ಸಾಮಾನ್ಯವಾಗಿಯೇ ಇದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಿಗ್ಗೆ ಹಾಗೂ ರಾತ್ರಿ ಸಮಯದಲ್ಲಿ ಚಳಿ ಹೆಚ್ಚಾಗಿರುವುದರಿಂದ ಮನೆ ಹೊರಗೆ ಕೆಲಸ ಮಾಡುವ ಹಾಗೂ ಮುಂಜಾನೆ ಕೆಲಸಕ್ಕೆ ಹೊರಡುವ ಕಾರ್ಮಿಕರು, ರೈತರು ಮತ್ತು ಬೀದಿ ವ್ಯಾಪಾರಿಗಳು ಹೆಚ್ಚಿನ ತೊಂದರೆ ಎದುರಿಸುತ್ತಿದ್ದಾರೆ. ಮಲೆನಾಡಿನಲ್ಲಿ ಚಳಿ ಮತ್ತು ಮಳೆ ಎದುರಿಸಿ ಜನರಿಗೆ ಅನುಭವ ಇದೆ. ಆದರೂ, ಈ ವರ್ಷದ ಚಳಿಯ ಪ್ರಮಾಣ ಜಾಸ್ತಿಯಾಗಿರುವುದು ಜನರನ್ನು ತತ್ತರಿಸುವಂತೆ ಮಾಡಿದೆ.

ಸಾಮಾನ್ಯವಾಗಿದ್ದರೂ, ಮುಂಜಾನೆ ಹಾಗೂ ರಾತ್ರಿ ಚಳಿ ವಾಡಿಕೆಗಿಂತ ತುಸು ಹೆಚ್ಚೇ ಇರಲಿದೆ. ಇದು ವಾತಾವರಣದ ಜೊತೆಗೆ ಜನರ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ. ಚಳಿಯ ತೀವ್ರತೆ ಹೆಚ್ಚಿದಷ್ಟು ಜನರ ಆರೋಗ್ಯ ಕಾಳಜಿಯೂ ಹೆಚ್ಚಬೇಕು. ಅದರಲ್ಲೂ ಮಕ್ಕಳು, ಹಿರಿಯ ನಾಗರಿಕರು ಹೆಚ್ಚು ಜಾಗೃತೆ ವಹಿಸಬೇಕು. ಬೆಚ್ಚನೆಯ ಉಡುಪು, ಬಿಸಿಯಾದ ಆಹಾರಕ್ಕೆ ಆದ್ಯತೆ ನೀಡಬೇಕು ಎನ್ನುವುದು ವೈದ್ಯರ ಸಲಹೆ.

ಹವಾಮಾನ ತಜ್ಞರ ಪ್ರಕಾರ ಇನ್ನೂ ಕೆಲ ದಿನ ಜಿಲ್ಲೆಯಲ್ಲಿ ಚಳಿ ಮುಂದುವರಿಯುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎನ್ನುವುದು ಆರೋಗ್ಯ ಇಲಾಖೆ ಅಧಿಕಾರಿಗಳ ಮನವಿ.

ಚಿಕ್ಕಮಗಳೂರಿನ ಗುರುನಾಥ ಚಿತ್ರಮಂದಿರ ರಸ್ತೆಯಲ್ಲಿ ಚಳಿಯ ನಡುವೆ ಕಾಫಿ ಕುಡಿಯುತ್ತಿರುವ ಜನ
ಚಿಕ್ಕಮಗಳೂರಿನ ಎಂ.ಜಿ.ರಸ್ತೆಯಲ್ಲಿ ಸ್ವೆಟರ್ ಮತ್ತು ಟೋಪಿ ಖರೀದಿಸುತ್ತಿರುವ ಮಹಿಳೆಯರು

ಶೀತ ಗಾಳಿಯಿಂದ ಆಸ್ಪತ್ರೆಗೆ ಬರುವ ಜನರ ಸಂಖ್ಯೆ ಹೆಚ್ಚಾಗಿಲ್ಲ. ಬಿಸಿ ನೀರು ಬಿಸಿಯಾದ ಆಹಾರ ಸೇವನೆ ಬೆಚ್ಚನೆಯ ಉಡುಪು ಧರಿಸುವುದು ಸೇರಿ ಅಗತ್ಯ ಮುನ್ನೆಚ್ಚರಿಕೆಯನ್ನು ಜನ ವಹಿಸಬೇಕು

–ಡಾ.ಅಶ್ವತ್ಥಬಾಬು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಮುನ್ನೆಚ್ಚರಿಕೆ ಏನು

* ಉಷ್ಣ ಬಟ್ಟೆಗಳನ್ನು ಧರಿಸುವುದು. * ಬಿಸಿನೀರು ಕುಡಿಯುವುದು. * ಮಕ್ಕಳ ಹಾಗೂ ವೃದ್ಧರ ಆರೋಗ್ಯದ ಮೇಲೆ ಹೆಚ್ಚಿನ ಗಮನ ವಹಿಸುವುದು. * ಬೆಳಿಗ್ಗೆ ಹಾಗೂ ರಾತ್ರಿ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. * ಜ್ವರ ಉಸಿರಾಟದ ತೊಂದರೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.