ಚಿಕ್ಕಮಗಳೂರು: ಜಿಲ್ಲೆಯ ಬಯಲು ಸೀಮೆಯಲ್ಲಿ ಮಳೆ ಜೋರಾಗಿದ್ದು, ತೆಂಗಿನ ತೋಟಗಳು ಜಲಾವೃತಗೊಂಡಿವೆ. ತಾಲ್ಲೂಕಿನ ದೇವಗೊಂಡನಹಳ್ಳಿಯಲ್ಲಿ ನೀರಿನಲ್ಲಿ ಕೊಚ್ಚಿಹೋಗಿ ರೈತ ಮೃತಪಟ್ಟಿದ್ದಾರೆ.
ಎಮ್ಮೆ ಮೇಯಿಸಲು ಹೋಗಿದ್ದ ಲಕ್ಷ್ಮಣಗೌಡ ವಾಪಸ್ ಬಂದಿರಲಿಲ್ಲ. ಗುರುವಾರ ಹಳ್ಳದ ನೀರಿನಲ್ಲಿ ಅವರ ಮೃತದೇಹ ದೊರೆತಿದೆ. ಹಳ್ಳ ದಾಟುವಾಗ ಕಾಲುಜಾರಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಡೂರು ತಾಲ್ಲೂಕಿನಲ್ಲಿ ಅತೀ ಹೆಚ್ಚು ಮಳೆ ಸುರಿದಿದ್ದು, ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹಳ್ಳ- ಕೊಳ್ಳಗಳು ಉಕ್ಕಿ ಹರಿದಿವೆ. ರಾತ್ರಿ ವೇಳೆ ಎಡಬಿಡದೆ ಮಳೆ ಸುರಿಯುತ್ತಿದ್ದು, ತೆಂಗು ಮತ್ತು ಅಡಿಕೆ ತೋಟಗಳು ಜಲಾವೃತಗೊಂಡಿವೆ. ತರಕಾರಿ ಬೆಳೆಗಳು ಸಂಪೂರ್ಣ ನೆಲ ಕಚ್ಚಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಡೂರು- ಚಿಕ್ಕಮಗಳೂರು ರೈಲು ಸಂಚಾರಕ್ಕೂ ಗುರುವಾರ ಕೆಲಕಾಲ ತೊಂದರೆಯಾಗಿತ್ತು. ಭಾರಿ ಮಳೆಗೆ ಕಣಿವೆ ಗ್ರಾಮದ ಬಳಿ ರೈಲು ಮಾರ್ಗದ ಜಲ್ಲಿ ಜರಿದಿದ್ದವು. ಚಿಕ್ಕಮಗಳೂರಿನಿಂದ ಶಿವಮೊಗ್ಗ ಹೊರಟಿದ್ದ ರೈಲನ್ನು ಅರ್ಧ ಗಂಟೆ ನಿಲ್ಲಿಸಿ ಜಲ್ಲಿ ಸರಿಪಡಿಸಲಾಯಿತು. ಬಳಿಕ ರೈಲು ಸಂಚಾರ ಸುಗಮಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.