
ಚಿಕ್ಕಮಗಳೂರು: ಬಾಗಿಲಿಗೆ ಬೀಗವಿಲ್ಲದೆ ವರ್ಷ ಪೂರ್ತಿ ತೆರೆದೇ ಇರುವ ಉದ್ಯಾನ, ನೀರಿಲ್ಲದೆ ನಲುಗುತ್ತಿರುವ ಸಸ್ಯಗಳು, ಹಸಿರು ಕಂಡಲ್ಲಿ ಬಂದು ಮೇಯುವ ದನಗಳು... ಇದು ನಗರದ ಹೌಸಿಂಗ್ ಬೋರ್ಡ್ ನಗರಸಭೆ ಉದ್ಯಾನದ ಸ್ಥಿತಿ.
ಅತಿ ಹೆಚ್ಚು ಜನಸಂಖ್ಯೆ ಇರುವ ನಗರದ ಹೌಸಿಂಗ್ ಬೋರ್ಡ್‌ನಲ್ಲಿ ನಗರಸಭೆ ಉದ್ಯಾನವಿದೆ. ಅಲ್ಲಿ ಸಸ್ಯ ಹಾಗೂ ಮರ ಬೆಳೆಸಲು ವಿಶಾಲವಾದ ಜಾಗ ಇದೆ. ಆದರೆ, ಸರಿಯಾದ ನಿರ್ವಹಣೆ ಇಲ್ಲದೆ ಈ ಉದ್ಯಾನದ ತುಂಬೆಲ್ಲ ಗಿಡಗಂಟಿಗಳು ಬೆಳೆದು ಸೌಂದರ್ಯ ಸಂಪೂರ್ಣ ಹಾಳಾಗಿದೆ.
ಈ ಪಾರ್ಕ್‌ನಲ್ಲಿ ಅನೇಕ ವರ್ಷಗಳ ಹಿಂದೆಯೇ ಹಲಸು, ಮಾವು, ಸೀಬೆ ಸೇರಿ ಅನೇಕ ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಆದರೆ, ನಿರ್ವಹಣೆ ಇಲ್ಲದೆ ಫಸಲು ದನ–ಕರುಗಳ ಆಹಾರವಾಗಿದೆ.
ಈ ಪಾರ್ಕ್‌ನ ಮುಖ್ಯದ್ವಾರದ ಗೇಟ್ ವರ್ಷ ಪೂರ್ತಿ ತೆರೆದೇ ಇರುತ್ತದೆ. ಇದರಿಂದ ನಿತ್ಯ ದನ–ಕರು, ಬೀದಿನಾಯಿಗಳು ಇಲ್ಲೇ ಬಂದು ಮಲಗಲು ವಾಸಸ್ಥಾನ ಮಾಡಿಕೊಂಡಿವೆ. ಪಾರ್ಕ್‌ನಲ್ಲಿ ಅಲ್ಲಲ್ಲಿ ಕಾಣುವ ಹಸಿರನ್ನು ದನಗಳು ಮೇಯ್ದು ಅಲ್ಲೇ ಮಲಗುತ್ತವೆ.
ವಿಶಾಲವಾದ ಪಾರ್ಕ್ ಇದಾಗಿದ್ದು ನಿರ್ವಹಣೆ ಇಲ್ಲದೆ ಗಿಡಗಂಟಿಗಳು ಬೆಳೆದು ಪಾರ್ಕ್ ಚಿತ್ರಣವೇ ಬದಲಾಗಿದೆ. ಪಾರ್ಕ್‌ನ ಸುತ್ತಲು ಜಾಲರಿ ಬೇಲಿ ಅಳವಡಿಸಲಾಗಿದೆ. ಆದರೆ, ಬೇಲಿಯ ತುಂಬೆಲ್ಲ ಕಾಡು ಬಳ್ಳಿ ಬೆಳೆದು ನಿಂತಿವೆ.
ಇತ್ತೀಚೆಗೆ ಈ ಉದ್ಯಾನದಲ್ಲಿ ಅನೇಕ ಸಸ್ಯಗಳನ್ನು ನೆಡಿಸಲಾಗಿದೆ. ಆದರೆ, ಸರಿಯಾದ ನೀರು ಪೂರೈಕೆ ಇಲ್ಲದೆ ಗಿಡಗಳು ಒಣಗುತ್ತಿವೆ.
ಇಲ್ಲಿನ ನಿವಾಸಿಗಳು ವಿಶ್ರಾಂತಿ ಪಡೆಯಲು ಈ ಪಾರ್ಕ್‌ನಲ್ಲಿ ಸರಿಯಾದ ಆಸನಗಳು ಇಲ್ಲ. ಉದ್ಯಾನದೊಳಗೆ ಮಾವು, ಹಲಸು, ಸೀಬೆ ಸೇರಿ ಅನೇಕ ಮರಗಳನ್ನು ನೆಡಲಾಗಿದೆ. ಆದರೆ, ಅವು ದನಗಳ ಪಾಲಾಗುತ್ತಿವೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.
ವಿಶಾಲವಾದ ಉದ್ಯಾನವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ಸ್ಥಳೀಯರ ವಾಯು ವಿಹಾರ, ಮಕ್ಕಳ ಆಟೋಟಕ್ಕೆ ಅನುಕೂಲ ಆಗಲಿದೆ. ಏನನ್ನೂ ಮಾಡದಿರುವುದರಿಂದ ಉದ್ಯಾನ ಪಾಳು ಬಿದ್ದಿದೆ. ನಗರಸಭೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಅವರು ಆಗ್ರಹಿಸುತ್ತಾರೆ.
ಸುತ್ತಲೂ ಹರಡಿದ ಕಸ ಉದ್ಯಾನದ ಒಳಗೆ ಮತ್ತು ಸುತ್ತಲೂ ಕಸ ಹರಡಿಕೊಂಡಿದ್ದು ಅನೈರ್ಮಲ್ಯಕ್ಕೆ ಕಾರಣವಾಗಿದೆ. ಸುತ್ತಲು ಪ್ಲಾಸ್ಟಿಕ್ ಪೇಪರ್ ಕಟ್ಟಿಗೆ ಸೇರಿ ಕಸ ಅಲ್ಲಲ್ಲಿ ಹರಡಿಕೊಂಡಿರುವುದು ಕಾಣಿಸುತ್ತದೆ. ಉದ್ಯಾನವನ್ನು ಸ್ವಚ್ಛಗೊಳಿಸಿ ಗೇಟಿಗೆ ಬೀಗ ಹಾಕಿ ಬೆಳಿಗ್ಗೆ ಮತ್ತು ಸಂಜೆ ಸಾರ್ವಜನಿಕರ ವಾಯು ವಿಹಾರಕ್ಕೆ ಅವಕಾಶ ಮಾಡಿದರೆ ಸಾರ್ವಜನಿಕರಿಗೆ ಅನುಕೂಲ ಆಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.