
ಚಿಕ್ಕಮಗಳೂರು: ಜಿಲ್ಲೆಯ ಬಯಲು ಸೀಮೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ ಬರಮುಕ್ತ ನಾಡನ್ನು ಮಾಡಬೇಕು. ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನವನ್ನು ಬಜೆಟ್‌ನಲ್ಲಿ ನಿಗದಿ ಮಾಡಬೇಕು ಎಂಬ ಆಗ್ರಹ ಬಯಲು ಸೀಮೆಯ ಜನರಲ್ಲಿದೆ.
ಭದ್ರಾ ಜಲಾಶಯದಿಂದ ನೀರು ತಂದು ಕಡೂರು, ತರೀಕೆರೆ, ಚಿಕ್ಕಮಗಳೂರು ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಯಲ್ಲಿದೆ. ಎರಡು, ಮೂರು ಮತ್ತು ನಾಲ್ಕನೇ ಹಂತದ ಕಾಮಗಾರಿಗಳು ಇನ್ನೂ ಬಾಕಿ ಇದೆ. ಇವುಗಳಿಗೆ ಸೂಕ್ತ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಬೇಕು ಎಂಬುದು ರೈತರ ಆಗ್ರಹ.
ಕೆರೆಗಳನ್ನು ತುಂಬಿಸಿದರೆ ಅಂತರ್ಜಲ ವೃದ್ಧಿಯಾಗಲಿದೆ. ಜನ–ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾದರೂ ಸರಿಯಾಗಲಿದೆ. ಆದ್ದರಿಂದ ಬಜೆಟ್‌ನಲ್ಲಿ ಈ ಬಾರಿ ನೀರಾವರಿ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಎಂಬುದು ರೈತರ ಮನವಿ.
ಮೆಕ್ಕೆಜೋಳ ಬಯಲು ಸೀಮೆಯ ಪ್ರಮುಖ ಬೆಳೆಯಾಗಿದ್ದು, ಈ ಬೆಳೆ ಬೆಳೆದ ರೈತರು ಜೋಳ ಮಾರಾಟ ಮಾಡಲು ಈ ವರ್ಷ ಪರದಾಡಿದರು. ಖರೀದಿ ಕೇಂದ್ರವನ್ನು ಸರ್ಕಾರ ಜಿಲ್ಲೆಯಲ್ಲಿ ತೆರೆಯಲಿಲ್ಲ. ನೆರೆಯ ಹಾಸನಕ್ಕೆ ಕೊಂಡೊಯ್ದರೆ ವಾಪಸ್ ಕಳುಹಿಸಿದರು. ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಯಿತು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಹೇಶ್ ಬೇಸರ ವ್ಯಕ್ತಪಡಿಸಿದರು.
ಕೃಷಿಗೆ ನೀರಾವರಿ ಸೌಕರ್ಯ ಮತ್ತು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ದೊರಕಿಸುವ ಕೆಲಸವನ್ನು ಸರ್ಕಾರ ಮಾಡಿದರೆ ರೈತರು ಬೇರೆ ಏನನ್ನೂ ನಿರೀಕ್ಷೆ ಮಾಡುವುದಿಲ್ಲ. ಈ ವಿಷಯಗಳನ್ನು ಸರ್ಕಾರ ಬಜೆಟ್‌ನಲ್ಲಿ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
‘ಸಕಾಲಕ್ಕೆ ಗೊಬ್ಬರ ಬಿತ್ತನೆ ಬೀಜ ಕೊಡಿಸಿ’
ರಾಸಾಯನಿಕ ಗೊಬ್ಬರ ಮತ್ತು ಬಿತ್ತನೆ ಬೀಜ ಸಕಾಲಕ್ಕೆ ಸಬ್ಸಿಡಿ ದರದಲ್ಲಿ ದೊರಕಿಸಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಹೇಶ್ ಆಗ್ರಹಿಸಿದರು. ಬಿತ್ತನೆ ಬೀಜ ಗೊಬ್ಬರ ಸಕಾಲಕ್ಕೆ ದೊರಕಬೇಕು. ಅದಕ್ಕೆ ಬೇಕಾದ ಅನುದಾನವನ್ನು ಸರ್ಕಾರ ಬಜೆಟ್‌ನಲ್ಲಿ ನಿಗದಿ ಮಾಡಬೇಕು ಎಂದರು. ಭತ್ತ ಮತ್ತು ಮೆಕ್ಕೆಜೋಳ ಸಕಾಲಕ್ಕೆ ಖರೀದಿಯಾಗುತ್ತಿಲ್ಲ. ಖರೀದಿ ಮಾಡಲು ವ್ಯವಸ್ಥೆ ಇಲ್ಲದೆ ರೈತರು ಪರದಾಡಿದ್ದಾರೆ. ಇದನ್ನು ತಪ್ಪಿಸಲು ಖರೀದಿ ಕೇಂದ್ರವನ್ನು ಸಕಾಲಕ್ಕೆ ತೆರೆಯಬೇಕು ಎಂದು ಒತ್ತಾಯಿಸಿದರು.
‘ಗ್ರಾಮೀಣ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸುವ ಯೋಜನೆ ರೂಪಿಸಬೇಕು. ಎಲ್ಲಾ ಆಶ್ವಾಸನೆ ನಿಲ್ಲಿಸಿ ಬಿಪಿಎಲ್ ಕುಟುಂಬಗಳ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವಂತೆ ಸರ್ಕಾರ ಮಾಡಬೇಕು’ ಎಂದು ಆಗ್ರಹಿಸಿದರು.
‘ನೀರಾವರಿ ಯೋಜನೆ ಪೂರ್ಣವಾಗಬೇಕು’
‘ಬಯಲು ಸೀಮೆಯನ್ನು ಬರಮುಕ್ತ ಮಾಡಬೇಕೆಂದು 25 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಂಡಿಲ್ಲ’ ಎಂದು ರೈತ ಸಂಘದ ಮುಖಂಡ ಗುರುಶಾಂತಪ್ಪ ಹೇಳಿದರು.
ಕಳೆದ ಬಾರಿಯ ಬಜೆಟ್ ಘೋಷಣೆಗಳು ಹಾಗೇ ಉಳಿದಿವೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರ ಕಾಲ ತಳ್ಳುತ್ತಿದೆ. ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಮೆಕ್ಕೆಜೋಳ ಬೆಳೆದ ರೈತರು ಜೋಳ ಮಾರಾಟ ಮಾಡಲು ಪರದಾಡುತ್ತಿದ್ದಾರೆ. ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುವಂತಾಗಿದೆ ಎಂದರು.
‘ಅತಿವೃಷ್ಟಿ ಪರಿಹಾರದ ಬಗ್ಗೆ ಸರ್ಕಾರ ಮಾತನಾಡುತ್ತಿಲ್ಲ. ಬಯಲು ಸೀಮೆಯಲ್ಲಿ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಯಿತು. ಉಳಿದ ಈರುಳ್ಳಿ ಫಸಲಿಗೆ ಲಾಭದಾಯಕ ಬೆಲೆಯೂ ಸಿಗಲಿಲ್ಲ. ಕಾಫಿ ಮೆಣಸು ಉದುರಿ ಹೋಗಿದೆ. ಅಡಿಕೆಗೆ ರೋಗದ ಕಾಟ ತೆಂಗಿಗೆ ನುಸಿ ರೋಗ ಕಾಟ. ಎಲ್ಲವನ್ನು ಬಗೆಹರಿಸುವ ನಿಟ್ಟಿನಲ್ಲಿ ರೈತರಿಗೆ ಪೂರಕವಾದ ಬಜೆಟ್ ಬರಬೇಕು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.