ವಿದ್ಯುತ್ ತಂತಿ ಮೇಲೆ ಮರ ಬಿದ್ದಿರುವು –ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು: ಮುಂಗಾರು ಆರಂಭಕ್ಕೂ ಮುನ್ನವೇ ಮಳೆ ಆರ್ಭಟಿಸಿದೆ. ಮುಂಗಾರು ಎದುರಿಸಲು ಮೆಸ್ಕಾಂ ಸಜ್ಜಾಗಿದ್ದು, 950 ಕಿಲೋ ಮೀಟರ್‌ನಷ್ಟು ಜಂಗಲ್ ತೆರವು ಮಾಡಿದೆ.
ಮಾನ್ಸೂನ್‌ನಲ್ಲಿ ಮಲೆನಾಡಿನಲ್ಲಿ ವಿದ್ಯುತ್ ಕಂಬಗಳು ಮುರಿದು ಬೀಳುವುದು ಸಾಮಾನ್ಯ ಎಂಬಂತಾಗಿದೆ. ತಿಂಗಳು ಗಟ್ಟಲೆ ಮಲೆನಾಡು ಕಗ್ಗತ್ತಲಿನಲ್ಲಿ ಮುಳುಗುತ್ತದೆ. ಕಳೆದ ವರ್ಷ ಮಳೆಗೆ ಮೆಸ್ಕಾಂ ಬಾರಿ ಪ್ರಮಾಣದ ನಷ್ಟ ಅನುಭವಿಸಿತ್ತು.
4,477 ವಿದ್ಯುತ್ ಕಂಬಗಳು ಉರುಳಿದ್ದವು. 66.91 ಕಿ.ಮೀ ವಿದ್ಯುತ್ ತುಂತಿಗೆ ಹಾನಿಯಾಗಿತ್ತು. ಈ ವರ್ಷವೂ ಉತ್ತಮವಾಗಿ ಮುಂಗಾರು ಮಳೆಯಾಗುವ ಸಾಧ್ಯತೆ ಇದ್ದು, ವಿದ್ಯುತ್ ಮಾರ್ಗಕ್ಕೆ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುತ್ತಿದೆ.
ಜಿಲ್ಲೆಯ 9 ತಾಲ್ಲೂಕುಗಳ ವ್ಯಾಪ್ತಿಯಲ್ಲಿ 950 ಕಿಲೋ ಮೀಟರ್ ಜಂಗಲ್ ತೆರವು ಮಾಡಲಾಗಿದೆ. ವಿದ್ಯುತ್ ತಂತಿಗೆ ತಗಬಹುದಾದ ಮರಗಳು, ಮಳೆಗಾಳಿಗೆ ಬೀಳಬಹುದಾದ ಮರಗಳನ್ನು ಗುರುತಿಸಿ ತೆರವು ಮಾಡಲಾಗಿದೆ. ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರದಲ್ಲಿ ಹೆಚ್ಚು ಅವಘಡಗಳು ಸಂಭವಿಸುತ್ತವೆ. ಮಳೆಗಾಲದಲ್ಲಿ ತುರ್ತು ಕೆಲಸಗಳನ್ನು ನಿರ್ವಹಿಸಲು ಮಾನ್‌ಸೂನ್ ಗ್ಯಾಂಗ್‌ಮನ್‌ಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ.
ಈ ಕೆಲಸಕ್ಕೆ ಇಲಾಖೆಯಲ್ಲಿ ಇರುವ 570 ಲೈನ್‌ಮನ್‌ಗಳು, ಪೋಲ್‌ಮನ್‌ಗಳನ್ನು ಬಳಕೆ ಮಾಡಿಕೊಂಡು 52 ತಂಡಗಳನ್ನು ರಚನೆ ಮಾಡಲಾಗಿದೆ. ಹೊಸದಾಗಿ ಮಾನ್ಸೂನ್ ಗ್ಯಾಂಗ್ ಮನ್‌ಗಳನ್ನು ನೇಮಕ ಮಾಡಿಕೊಳ್ಳಲು ಟೆಂಡರ್ ಕರೆಯಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.
ಜೋತು ಬಿದ್ದಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಲಾಗಿದೆ. ವಿದ್ಯುತ್ ಅವಘಡದಿಂದ ಉಂಟಾಗಬಹುದಾದ ಸಾವು, ನೋವುಗಳನ್ನು ತಡೆಯುವ ನಿಟ್ಟಿನಲ್ಲೂ ಕ್ರಮಗಳನ್ನು ತಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಮಳೆಗಾಲದಲ್ಲಿ ತುರ್ತು ಪರಿಸ್ಥಿತಿಯ ರೀತಿಯಲ್ಲಿ ಕೆಲಸ ಮಾಡಬೇಕಾದ ಸ್ಥಿತಿ ಇದೆ. ಆದರೆ ಜಿಲ್ಲೆಯಲ್ಲಿ ಮೆಸ್ಕಾಂನಲ್ಲಿ ಶೇ 45ರಷ್ಟು ಸಿಬ್ಬಂದಿ ಕೊರತೆ ಇದೆ. ಒಟ್ಟು ಮೂರು ವಿಭಾಗಗಳು 12 ಉಪ ವಿಭಾಗಗಳಿದ್ದು ಸಿಬ್ಬಂದಿ ಕೊರತೆ ಮೆಸ್ಕಾಂಗೆ ದೊಡ್ಡ ತಲೆನೋವಾಗಿದೆ. 1017 ಲೈನ್‌ಮನ್‌ಗಳು ಮಾಡಬೇಕಾದ ಕೆಲಸವನ್ನು 549 ಲೈನ್‌ಮನ್‌ಗಳೇ ಮಾಡಬೇಕಿದೆ. ಕೆಳ ಹಂತದಲ್ಲಿ ಕೆಲಸ ಮಾಡಬೇಕಾದ ಸಿಬ್ಬಂದಿ ಇವರೇ ಆಗಿದ್ದು ಈ ಸಿಬ್ಬಂದಿಯ ಸಂಖ್ಯೆ ಶೇ 50ರಷ್ಟು ಇರುವುದು ಸಮಸ್ಯೆಯಾಗಿದೆ.
ಮಳೆಗಾಲ ಎದುರಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮೆಸ್ಕಾಂ ಚಿಕ್ಕಮಗಳೂರು ವೃತ್ತದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಲೋಕೇಶ್ ತಿಳಿಸಿದರು. ವಿದ್ಯುತ್ ಪರಿವರ್ತಕ ಸೇರಿ ಎಲ್ಲಾ ರೀತಿಯ ಪರಿಕರಗಳನ್ನು ವಿಭಾಗ ಮಟ್ಟದಲ್ಲಿ ದಾಸ್ತಾನು ಮಾಡಲಾಗಿದೆ. ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ಕಡಿತಲೆ ಮಾಡಲು ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು. ಮಾನ್‌ಸೂನ್ ಗ್ಯಾಂಗ್‌ಮನ್‌ಗಳ ನೇಮಕಕ್ಕೆ ಟೆಂಡರ್ ಕರೆಯಲಾಗಿದೆ. ಈಗಿರುವ ಸಿಬ್ಬಂದಿ ಮೂಲಕವೇ ಜಂಗಲ್ ಕಟಿಂಗ್ ಮಾಡಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.