ಚಿಕ್ಕಮಗಳೂರು: ಶುಕ್ರವಾರ ಬೆಳಗಿನ ಜಾವ ಸುರಿದ ಭಾರಿ ಮಳೆಗೆ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹೊಲಗದ್ದೆಗಳಲ್ಲಿ ನೀರು ತುಂಬಿಕೊಂಡಿದ್ದರೆ, ಈರುಳ್ಳಿ ಫಸಲು ನೀರು ಪಾಲಾಗಿದೆ.
ತಾಲ್ಲೂಕಿನಲ್ಲಿ ಬಯಲು ಸೀಮೆಯ ಹಲವೆಡೆ ಬೆಳಿಗ್ಗೆ 3 ಗಂಟೆ ವೇಳೆಗೆ ಗುಡುಗು ಸಹಿತ ಆರಂಭವಾದ ಮಳೆ, 6 ಗಂಟೆ ತನಕ ಸತತವಾಗಿ ಸುರಿಯಿತು.
ಬೆಳವಾಡಿ, ಕುರುಬರಹಳ್ಳಿ, ನರಸೀಪುರ, ಮಾಚೇನಹಳ್ಳಿ ಸುತ್ತಮುತ್ತ ಧಾರಾಕಾರವಾಗಿ ಸುರಿದ ಮಳೆಗೆ ನೀರು ಹೊಲಗದ್ದೆಗಳಲ್ಲಿ ಪ್ರವಾಹದಂತೆ ತುಂಬಿಕೊಂಡಿದೆ.
ಬೆಳವಾಡಿ ಕೆರೆ ಜುಲೈನಲ್ಲೇ ತುಂಬಿ ಕೋಡಿ ಬಿದ್ದಿತು. ಗುರುವಾರ ಸುರಿದ ಮಳೆಗೆ ಮತ್ತಷ್ಟು ನೀರು ಬಂದಿತ್ತು. ಶುಕ್ರವಾರ ಬೆಳಿಗ್ಗೆ ಭಾರಿ ಮಳೆ ಸುರಿದಿದ್ದರಿಂದ ನೀರು ಹೊಲಗದ್ದೆಗಳಿಗೆ ತುಂಬಿಕೊಂಡಿದೆ. ಅಡಿಕೆ ಮತ್ತು ತೆಂಗಿನ ತೋಟಗಳು ಜಲಾವೃತಗೊಂಡಿವೆ. ರಾಗಿ ಮತ್ತು ಜೋಳದ ಬೆಳೆ ಕೂಡ ಹಾನಿಯಾಗಿದೆ.
ಭೂಮಿಯಿಂದ ಈರುಳ್ಳಿ ಗಡ್ಡೆ ಹೊರ ತೆಗೆದು ರೈತರು, ದರ ಕಡಿಮೆ ಇರುವುದರಿಂದ ಹೊಲದಲ್ಲೇ ರಾಶಿ ಹಾಕಿದ್ದರು. ಬೆಳಗಾಗುವಷ್ಟರಲ್ಲಿ ಈರುಳ್ಳಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ರೈತರಲ್ಲಿ ಕಣ್ಣೀರು ತರಿಸಿದೆ. ಈರುಳ್ಳಿ ಬೆಳೆಯಲು ಹಾಕಿದ್ದ ಶ್ರಮ, ಖರ್ಚು ಮಾಡಿದ್ದ ಹಣವೆಲ್ಲಾ ನೀರಿನಲ್ಲಿ ತೇಲಿ ಹೋಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.
ಸಖರಾಯಪಟ್ಟಣ ಭಾಗದಲ್ಲೂ ರಾತ್ರಿ ಸುರಿದ ನಿರಂತರ ಮಳೆಯಿಂದ ಬಹುತೇಕ ಎಲ್ಲ ಬೆಳೆಗಳು ನೀರಿನಿಂದ ಆವೃತವಾಗಿದ್ದರು, ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಬಹುತೇಕ ಕರೆಗಳು ಮತ್ತೆ ಭರ್ತಿಯಾಗಿವೆ.
ನರಸಿಂಹರಾಜಪುರ ತಾಲ್ಲೂಕಿನ ಹಲವೆಡೆ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಿಗ್ಗೆ ತನಕ ಗುಡುಗು ಸಹಿತ ಭಾರಿ ಮಳೆ ಸುರಿಯಿತು. ಗುರುವಾರದಿಂದ ಶುಕ್ರವಾರ ಬೆಳಿಗ್ಗೆ ತನಕ 5.20 ಸೆಂಟಿ ಮೀಟರ್ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.