ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನ ಸಾಮಾನ್ಯರು, ಮಕ್ಕಳು ಒಂಟಿಯಾಗಿ ಓಡಾಡುವುದೇ ಕಷ್ಟವಾಗಿದೆ. ಚಿಕ್ಕಮಗಳೂರು ನಗರದ ಬಡಾವಣೆಗಳಲ್ಲಿ ರಸ್ತೆಗೆ ಬರಲು ಭಯಪಟುವ ಸ್ಥಿತಿ ಇದೆ.
ಎಂಟು ತಿಂಗಳಲ್ಲಿ ಜಿಲ್ಲೆಯಲ್ಲಿ 17 ಸಾವಿರಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದು, ನಾಯಿ ಕಡಿಸಿಕೊಂಡವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಚಿಕ್ಕಮಗಳೂರು ನಗರದಲ್ಲೇ ಅತೀ ಹೆಚ್ಚು 5800 ಪ್ರಕರಣಗಳು ವರದಿಯಾಗಿವೆ. ನಗರದ ಯಾವುದೇ ಮೂಲೆಗೆ ಹೋದರೂ ನಾಯಿಗಳ ಹಿಂಡು ಕಾಣಿಸುತ್ತವೆ. ಮಕ್ಕಳು ಮನೆಯಿಂದ ಹೊರ ಹೋಗುವುದೇ ಕಷ್ಟವಾಗಿದೆ.
ಹಿಂಡು, ಹಿಂಡಾಗಿ ಸುತ್ತುವ ಬೀದಿ ನಾಯಿಗಳು ಏಕಾಏಕಿ ಜನರ ಮೇಲೆ ಹಾಗೂ ದ್ವಿಚಕ್ರ ವಾಹನ ಸವಾರರ ಮೇಲೂ ದಾಳಿ ನಡೆಸುತ್ತಿವೆ. ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗುತ್ತವೆ. ಅದರಲ್ಲೂ ಮಕ್ಕಳನ್ನು ಕಂಡರೆ ದಾಳಿ ಖಚಿತ ಎಂಬಂತಾಗಿದೆ. ಸೈಕಲ್‌ನಲ್ಲಿ ಶಾಲೆಗೆ ಹೋಗುವ ಮಕ್ಕಳ ಭಯದಲ್ಲಿ ಸಾಗುತ್ತಿದ್ದಾರೆ.
ನಗರದ ಮಾತ್ರವಲ್ಲ ಗ್ರಾಮೀಣ ಪ್ರದೇಶದಲ್ಲೂ ಇದೇ ಸ್ಥಿತಿ ಇದೆ. ಎಲ್ಲೆಂದರಲ್ಲಿ ತಲೆ ಎತ್ತಿರುವ ಮಾಂಸ ಮತ್ತು ಕೋಳಿ ಅಂಗಡಿಗಳ ತ್ಯಾಜ್ಯ ರಸ್ತೆ ಬದಿಯಲ್ಲಿ ಬೀಳುತ್ತಿದೆ. ಇಂತಹ ಜಾಗದಲ್ಲಿ ಬೀದಿನಾಯಿಗಳ ಹಿಂಡು ಬೀಡು ಬಿಡುತ್ತಿದ್ದು, ಜನ ಸಂಚಾರವೇ ಕಷ್ಟವಾಗಿದೆ ಎಂದು ನಿವಾಸಿಗಳು ಹೇಳುತ್ತಾರೆ.
ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ ಆರು ಸಾವಿರ ಬೀದಿ ನಾಯಿಗಳಿದ್ದು, 2 ಸಾವಿರ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಲು ನಗರಸಭೆ ಉದ್ದೇಶಿಸಿದೆ. ಆದರೆ, ಆರು ಬಾರಿ ಟೆಂಡರ್ ಕರೆದರೂ ಏಜೆನ್ಸಿಗಳು ಮುಂದೆ ಬರುತ್ತಿಲ್ಲ. ಇದು ನಗರಸಭೆಗೆ ತಲೆನೋವಾಗಿ ಪರಿಣಮಿಸಿದೆ. ‘ಎರಡು ವರ್ಷಗಳ ಹಿಂದೆ 4 ಸಾವಿರ ನಾಯಿಗಳಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಇನ್ನೂ ಎರಡು ಸಾವಿರ ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ಉದ್ದೇಶಿಸಲಾಗಿದೆ. ಶಸ್ತ್ರಚಿಕಿತ್ಸೆಗೆ ಬೇಕಿರುವ ಆಪರೇಷನ್ ಕೊಠಡಿ ಸೇರಿ ಎಲ್ಲಾ ಸಿದ್ಧತೆ ಮಾಡಲಾಗಿದೆ. ನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ಮಾಡುವ ಏಜೆನ್ಸಿಗಳು ಮುಂದೆ ಬರುತ್ತಿಲ್ಲ. ಏಳನೇ ಬಾರಿ ಟೆಂಡರ್ ಕರೆಯಲು ಉದ್ದೇಶಿಸಿದ್ದೇವೆ’ ಎಂದು ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ತಿಳಿಸಿದರು.
ಕಡೂರು: ಪಟ್ಟಣದಲ್ಲಿ ಕೋಟೆ ಪ್ರದೇಶ, ಬಿಜಿಎಸ್ ಶಾಲೆ ವಲಯ, ಎಲ್ಐಸಿ ಸಮೀಪದ 32 ಎಕರೆ ಬಡಾವಣೆ ಹಳೆ ಕೆ.ಎಂ. ರಸ್ತೆಯಲ್ಲಿ ಬೀದಿ ನಾಯಿಗಳ ಹಾವಳಿ ಇದೆ. ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಕಡೂರು ಪುರಸಭೆ ಕಳೆದ ವರ್ಷ 400 ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿದೆ. ಅವುಗಳನ್ನು ಗುರುತು ಹಿಡಿಯಲು ಕಿವಿಯ ತುದಿಯಲ್ಲಿ ಕತ್ತರಿಸಿ ಗುರುತು ಮಾಡಲಾಗಿದೆ. ಆನಂತರ ಪಟ್ಟ ಣದಲ್ಲಿ ನಾಯಿಗಳ ಹಾವಳಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಈ ವರ್ಷವೂ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಮಾಡಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೀರೂರು ಪುರಸಭೆ ವ್ಯಾಪ್ತಿಯಲ್ಲಿ ಪಟ್ಟಣದ ಹಲವಾರು ಬಡಾ ವಣೆಗಳಲ್ಲಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಹಲವರಿಗೆ ಕಚ್ಚಿದ ಘಟನೆಗಳು ನಡೆದಿವೆ. ಪುರಸಭೆ ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆಗಾಗಿ ₹2 ಲಕ್ಷ ಮೀಸಲಿಟ್ಟಿದ್ದು, ಟೆಂಡರ್ ಕರೆದರೂ ಈವರೆಗೆ ಯಾರೂ ಭಾಗವಹಿಸಿಲ್ಲ. ಹಾಗಾಗಿ ನಾಯಿ ಗಳ ಹಾವಳಿ ತಡೆಗೆ ಕ್ರಮವಹಿಸಲು ಸಾಧ್ಯವಾಗಿಲ್ಲ. ಈ ಬಾರಿಯಾವುದಾದರು ಅನುದಾನದಲ್ಲಿ ಹೆಚ್ಚಿನ ಹಣ ಮೀಸಲಿಟ್ಟು ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಕ್ರಮ ವಹಿಸು ವುದಾಗಿ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ್ ತಿಳಿಸಿದರು.
ತರೀಕೆರೆ: ತಾಲ್ಲೂಕಿನ ಗ್ರಾಮಾಂತರ ಮತ್ತು ಪಟ್ಟಣದ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರು ಭಯದ ವಾತವರಣದಲ್ಲಿ ಬದುಕುವ ಸ್ಥಿತಿಯಲ್ಲಿದ್ದಾರೆ.
ಮಕ್ಕಳು ಮತ್ತು ವೃದ್ಧರು ಬೀದಿನಾಯಿಗಳ ಹಾವಳಿಗೆ ಹೆಚ್ಚು ತುತ್ತಾಗುತ್ತಿದ್ದಾರೆ. ಪುರಸಭಾ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್‌ಗಳಿದ್ದು, ಬಹುತೇಕ ಈ ಎಲ್ಲಾ ವಾರ್ಡ್‌ಗಳಲ್ಲೂ ಬೀದಿನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಇವುಗಳು ರಸ್ತೆಯಲ್ಲಿ ಹಿಂಡು ಹಿಂಡು ಸಾಗುತ್ತಿವೆ. ಇದರಿಂದ ಮಕ್ಕಳ ಮೇಲೆ ಏಕಾಏಕಿ ಎರಗಿ ದಾಳಿ ನಡೆಸುತ್ತಿವೆ.
ಬೀದಿ ನಾಯಿಗಳ ದಾಳಿಯಿಂದ ಪ್ರತಿನಿತ್ಯ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕನಿಷ್ಠ ಐದಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕಾಗಿ ಆಸ್ಪತ್ರೆಯಲ್ಲಿ ಪ್ರತ್ಯೇಕ ರಿಜಿಸ್ಟರ್ ಇಟ್ಟಿದ್ದು, ಇದಕ್ಕೆ ಸಂಬಂಧಿಸಿದ ಲಸಿಕೆಗಳು ಆಸ್ಪತ್ರೆಯಲ್ಲಿ ದಾಸ್ತಾನಿವೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಚನ್ನಬಸಪ್ಪ ತಿಳಿಸಿದ್ದಾರೆ.
ಬೀದಿ ನಾಯಿಗಳನ್ನು ಸಾಯಿಸುವಂತಿಲ್ಲ. ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಅವಕಾಶವಿದ್ದು, ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ₹7 ಲಕ್ಷ ಅನುದಾನ ಮೀಸಲಿಡಲಾಗಿದೆ. ಎರಡು ಬಾರಿ ಟೆಂಡರ್ ಕರೆದರೂ ಭಾಗವಹಿಸಲು ಯಾರೂ ಆಸಕ್ತಿ ತೋರುತ್ತಿಲ್ಲ. ಈಗ ಮೂರನೇ ಬಾರಿ ಟೆಂಡರ್ ಕರೆಯಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ವಸಂತಕುಮಾರ್ ಹೇಳಿದರು.
ಅಜ್ಜಂಪುರ: ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ ನಾಯಿ ಹಾವಳಿ ಹೆಚ್ಚಾಗಿದೆ. ಗುಂಪಾಗಿ ಸಾಗುವ ನಾಯಿಗಳು ಜನರಲ್ಲಿ ಭೀತಿ ಮೂಡಿಸುತ್ತಿವೆ.
ತಾಲ್ಲೂಕಿನ ನಾರಣಾಪುರ ಗ್ರಾಮದಲ್ಲಿ ಈರುಳ್ಳಿ ಹಸನುಗೊಳಿಸುವ ಕೂಲಿ ಅರಸಿ ಬಂದಿದ್ದ ಹಿರಿಯೂರಿನ ಕೃಷಿ ಕಾರ್ಮಿಕರ ಮೇಲೆ ಈಚೆಗೆ(ಸೆ.30) ನಾಯಿ ದಾಳಿ ಮಾಡಿತು. ಮಕ್ಕಳು ಮಹಿಳೆಯರು ಸೇರಿ 14 ಮಂದಿ ಮೇಲೆ ತಿರಗಿತು. ನಾಯಿ ಕಡಿತಕ್ಕೆ ಒಳಗಾದವರು ಪಟ್ಟಣದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು, ಕೂಲಿ ತೊರೆದು ಸ್ವಗ್ರಾಮಕ್ಕೆ ಹಿಂದಿರುಗಿದರು. ಹುಚ್ಚು ನಾಯಿಯಿಂದ ಕಡಿತಕ್ಕೊಳಗಾದ ಇತರ ನಾಲ್ಕು ನಾಯಿಗಳು ಜವೂರು ಹೊಸಳ್ಳಿ ಗ್ರಾಮದಲ್ಲಿ ಏಳು ಮಂದಿಗೆ, ಪಟ್ಟಣದ ಒಂದು ಮಗು ವಿಗೆ ಕಡಿದು ಗಾಯಗೊ ಳಿಸಿತು. ನಾಯಿಗಳು ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿವೆ. ಅವು ದಾಳಿ ಮಾಡಬಹುದೆಂಬ ಭಯ ಜನರಲ್ಲಿ ಆವರಿಸಿದೆ. ಚಿಕ್ಕ ಮಕ್ಕಳು ಅಷ್ಟೇ ಅಲ್ಲದೆ ವೃದ್ಧರು, ಮಹಿಳೆಯರು ಸಹ ಹೆದುರುವಂತಾಗಿದೆ. ಅಂಗಡಿಗಳಿಂದ ತಿನಿಸು ಹಿಡಿದು ಸಾಗುವವರು ನಾಯಿ ಮೇಲೆರಗುವ ಆತಂಕದ ನಡುವೆ ನಡೆಯುವಂತಾಗಿದೆ. ಮದ್ಯದ ಅಂಗಡಿ, ಮಾಂಸದಂಗಡಿ ಇರುವ ಸಂತೆ ಮೈದಾನ, ಹೋಟೆಲ್ ಬೇಕರಿ ಹೆಚ್ಚಾಗಿರುವ ಬಸ್ ನಿಲ್ದಾಣ ಬಳಿ ನಾಯಿಗಳು ಅಧಿಕ ಸಂಖ್ಯೆಯಲ್ಲಿ ಇರುತ್ತವೆ. ಏಕಾಏಕಿ ರಸ್ತೆಗೆ ನುಗ್ಗುವ ನಾಯಿಗಳು ವಾಹನ ಸವಾರರಿಗೂ ಕಂಟಕಪ್ರಾಯವಾಗಿವೆ. ಈ ಬಗ್ಗೆ ಪಂಚಾಯಿತಿಯವರು ಗಮನಹರಿಸಬೇಕು, ನಾಯಿಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಮೂಲಕ ಸಂಭವಿಸುವಬಹುದಾದ ಅಪಾಯ ತಡೆಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ‘ಪಂಚಾಯಿತಿ ವ್ಯಾಪ್ತಿಯಲ್ಲಿ 200 ನಾಯಿಗಳಿರುವ ಅಂದಾಜು ಇದೆ. ಸರ್ಕಾರದ ಸುತ್ತೋಲೆಯಂತೆ, ನಾಯಿಗಳನ್ನು ಹಿಡಿಸಿ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಬಳಿಕ ಮೊದಲಿದ್ದ ಸ್ಥಳಕ್ಕೆ ಬಿಡಲಾಗುವುದು’ ಎಂದು ಪಂಚಾಯಿತಿ ಮುಖ್ಯಾಧಿಕಾರಿ ರಮೇಶ್ ಮಾಹಿತಿ ನೀಡಿದರು.
ಕೊಪ್ಪ: ಪಟ್ಟಣದಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಜನರ ಮೇಲೆ ದಾಳಿಗೆ ಮುಂದಾಗುತ್ತಿರುವುದು ಆತಂಕ ಮೂಡಿಸಿದೆ.
ಬೆಳಿಗ್ಗೆ –ಸಂಜೆ ವಾಯು ವಿಹಾರಕ್ಕೆ ಹೋಗುವ ವೃದ್ಧರ ಮೇಲೆ ಎರಗುತ್ತವೆ. ಶಾಲಾ ಮಕ್ಕಳು ಭಯದಲ್ಲಿ ಓಡಾಡುವ ಸ್ಥಿತಿ ಇದೆ. ಕೆಲ ತಿಂಗಳ ಹಿಂದೆ ಪಟ್ಟಣದಲ್ಲಿ ಬೀದಿ ನಾಯಿಯೊಂದಕ್ಕೆ ಹುಚ್ಚು ಹಿಡಿದು ಅದು ಓಡಾಡುತ್ತಾ ದಾರಿಯಲ್ಲಿ ಹೋಗುವವರನ್ನು ಕಚ್ಚಿತ್ತು. ಇದಕ್ಕೆ ನಿಯಂತ್ರಣ ಹೇರಬೇಕಾದ ಸ್ಥಳೀಯ ಪಂಚಾಯಿತಿ, ಪಟ್ಟಣ ಪಂಚಾಯಿತಿ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಜನರು ದೂರಿದ್ದಾರೆ. ಇತ್ತೀಚೆಗೆ ಪಶು ಇಲಾಖೆ, ಸ್ಥಳೀಯ ಪಂಚಾಯಿತಿ ವತಿಯಿಂದ ಬೀದಿ ನಾಯಿಗಳಿಗೆ ಹಾಗೂ ಸಾಕು ನಾಯಿಗಳಿಗೆ ರೇಬಿಸ್ ತಡೆ ಚುಚ್ಚು ಮದ್ದು ನೀಡಲಾಗಿದೆ. ಆದರೆ, ಪಟ್ಟಣ ವ್ಯಾಪ್ತಿಯಲ್ಲಿ ಈ ರೀತಿಯ ಯಾವುದೇ ಕ್ರಮ ಜರುಗಿಸಿಲ್ಲ. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿಯೂ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಸಾಧ್ಯವಾಗಿಲ್ಲ.
‘ಬೀದಿ ನಾಯಿಗಳನ್ನು ನಿಯಂತ್ರಿಸಲು ಕಳೆದ ಸಭೆಯಲ್ಲಿ ಚರ್ಚೆ ನಡೆದಿದೆ. ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯಾ ಕೊಸ್ ಹೇಳಿದ್ದಾರೆ.
ಪೂರಕ ಮಾಹಿತಿ: ಜೆ.ಒ.ಉಮೇಶ್‌ಕುಮಾರ್, ಎನ್.ಸೋಮಶೇಖರ್,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.