ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತರು, ಕಾಫಿ, ಟೀ ತೋಟ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಕರ್ನಾಟಕ ಎಸ್ಟೇಟ್ ಲೇಬರ್ ಯೂನಿಯನ್, ಐಎನ್‌ಟಿಯುಸಿ ಸೇರಿ ಬೆಂಬಲ ಸೂಚಿಸಿದ್ದರಿಂದ ಕೆಂಬಾವುಟ ಹಿಡಿದಿದ್ದ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಹೆಜ್ಜೆ ಹಾಕಿದರು. ನಗರದ ಹನುಮಂತಪ್ಪ ವೃತ್ತದಿಂದ ಮೆರವಣಿಗೆ ಹೊರಟು ಎಂ.ಜಿ. ರಸ್ತೆ ಮೂಲಕ ಸಾಗಿ ಆಜಾದ್ ಪಾರ್ಕ್ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದರು.
‘ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಕೇಂದ್ರ ಕಾರ್ಮಿಕ ಕಾಯಿದೆಗಳನ್ನು ರದ್ದುಪಡಿಸಬೇಕು. ದುಡಿಯುವ ವರ್ಗಕ್ಕೆ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಒದಗಿಸಬೇಕು. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ದುಡಿಯುವ ಜನರ ಹಕ್ಕು ಕಸಿಯುತ್ತಿದೆ’ ಎಂದರು.
ದೇಶದ ಜನರ ಹಕ್ಕು ಬಾಧ್ಯತೆಗಳನ್ನು ರಕ್ಷಿಸುವ ಕಾನೂನುಗಳನ್ನು ರದ್ದುಪಡಿಸಿ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಹಾಗೂ ಬಂಡವಾಳಶಾಹಿ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡುವ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ ಎಂದು ದೂರಿದರು.
ದುಡಿಯುವ ಅವಧಿ ವಿಸ್ತರಣೆ, ಕನಿಷ್ಠ ವೇತನ ಹಕ್ಕು, ಹೋರಾಟ ಮತ್ತು ಮುಷ್ಕರದ ಹಕ್ಕು, ಸಂಘಟನಾ ಸ್ವಾತಂತ್ರ್ಯದ ಹಕ್ಕು ಕಸಿದುಕೊಳ್ಳಲು ಹೊರಟಿದೆ. ಕಾರ್ಮಿಕರು ತಮ್ಮ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ ಮಾಡುವುದನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲು ಕೇಂದ್ರ ಸರ್ಕಾರ ಕಾಯ್ದೆ ತಂದಿದೆ. ರಾಜ್ಯ ಸರ್ಕಾರ ಕೂಡ ಕೇಂದ್ರದ ಈ ಕಾಯ್ದೆ ಅನುಷ್ಠಾನಕ್ಕೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ಲಾಂಟೇಶನ್ ಕಾರ್ಮಿಕರಿಗೆ ವಸತಿ ಯೋಜನೆಯಡಿ ಮನೆ ನೀಡಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು. ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಕಟ್ಟಡ ಕಾರ್ಮಿಕರ ಸಮಸ್ಯೆಗಳನ್ನು ಇತ್ಯರ್ಥ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಉದ್ಯೋಗ ಕಾಯಂ ಮಾಡಬೇಕು. ಗ್ರಾಚ್ಯುಟಿ ನೀಡಬೇಕು, ಎಫ್‌ಆರ್‌ಎಸ್ ಪದ್ದತಿ ಕೈ ಬಿಡಬೇಕು. ನಿವೃತರಿಗೆ ಮಾಸಿಕ ₹10 ಸಾವಿರ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.
ಎಐಟಿಯುಸಿ ರಾಷ್ಟ್ರೀಯ ಮುಖಂಡ ಬಿ.ಅಮ್ಜದ್, ಜಿ.ರಘು, ರೇಣುಕಾರಾಧ್ಯ, ಎಸ್. ವಿಜಯಕುಮಾರ್, ರಾಧಾ ಸುಂದರೇಶ್, ಗ್ರೆಟ್ಟಾ ಫರ್ನಾಂಡಿಸ್, ಪುಷ್ಪಾ, ಜಯಕುಮಾರ್, ಧರ್ಮರಾಜು, ಸೆಲ್ವಂ, ರಾಮಚಂದ್ರ ಒಡೆಯರ್, ಗೋವಿಂದನ್, ಮಾಣಿಕ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.