ADVERTISEMENT

ಚಿಕ್ಕಮಗಳೂರು: 34 ಕೆರೆಗಳಿಗೆ ದಾಖಲೆಯೇ ಇಲ್ಲ

ವಿಜಯಕುಮಾರ್ ಎಸ್.ಕೆ.
Published 3 ಮೇ 2025, 5:20 IST
Last Updated 3 ಮೇ 2025, 5:20 IST
ಕಡೂರು ತಾಲ್ಲೂಕಿನ ವಿಷ್ಣು ಸಮುದ್ರ ಕೆರೆ
ಕಡೂರು ತಾಲ್ಲೂಕಿನ ವಿಷ್ಣು ಸಮುದ್ರ ಕೆರೆ   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ 34 ಕೆರೆಗಳಿಗೆ ದಾಖಲೆಗಳೇ ಇಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಇದು ಒತ್ತುವರಿ ತೆರವಿಗೆ ತೊಡಕಾಗಿದೆ.

ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಕೆರೆ ಒತ್ತುವರಿ ತೆರವು ಕಾರ್ಯವನ್ನು ಜಿಲ್ಲೆಯಲ್ಲಿ ತೀವ್ರಗೊಳಿಸಲಾಗಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 124 ಕೆರೆಗಳಿದ್ದರೆ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದಲ್ಲಿ 880 ಕೆರೆಗಳಿವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 834, ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ 6 ಕೆರೆ ಸೇರಿ 1810 ಕೆರೆಗಳಿವೆ.

ಒಟ್ಟು 20,126 ಎಕರೆ ವಿಸ್ತೀರ್ಣದಲ್ಲಿ ಕೆರೆ ಪ್ರದೇಶವಿದ್ದರೆ, 1,209 ಎಕರೆಯಷ್ಟು ಒತ್ತುವರಿಯಾಗಿದೆ ಎಂದು ಗುರುತಿಸಲಾಗಿದೆ. ಅಳತೆ ಮಾಡಲು ಇನ್ನೂ 66 ಕೆರೆಗಳಿವೆ. ಅಳತೆ ಮಾಡಿರುವ 1,744 ಕೆರೆಗಳ ಪೈಕಿ 777 ಕೆರೆಗಳಲ್ಲಿ ಒತ್ತುವರಿ ಗುರಿತಿಸಿದ್ದು, 1,209 ಎಕರೆಯಷ್ಟು ಒತ್ತುವರಿಯಾಗಿದೆ. ಈ ಪೈಕಿ 301 ಕೆರೆಗಳಲ್ಲಿ 456 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನೂ 476 ಕೆರೆಗಳಲ್ಲಿ 752 ಎಕರೆ ಒತ್ತುವರಿ ತೆರವು ಬಾಕಿ ಇದೆ. 

ADVERTISEMENT

ಒತ್ತುವರಿ ಎಷ್ಟು ಪ್ರಮಾಣದಲ್ಲಿ ಆಗಿದೆ ಎಂಬುದನ್ನು ಅಳತೆ ಮಾಡಲು ಬಾಕಿ ಇರುವ 66 ಕೆರೆಗಳು ಇನ್ನೂ ಬಾಕಿ ಇವೆ. ಸಣ್ಣ ನೀರಾವರಿ ಇಲಾಖೆ 124 ಕೆರೆಗಳನ್ನು ನಿರ್ವಹಣೆ ಮಾಡುತ್ತಿದ್ದರೆ, ಈ ಪೈಕಿ 34 ಕೆರೆಗಳಿಗೆ ಸಂಬಂಧಿಸಿದ ದಾಖಲೆಗಳಿಲ್ಲ.

ಒತ್ತುವರಿ ತೆರವಿಗೂ ಮುನ್ನ ಸರ್ವೆ ನಂಬರ್ ಆಧರಿಸಿ ಕೆರೆ ಜಾಗ ಎಷ್ಟಿದೆ ಎಂಬ ಅಳತೆಯನ್ನು ಕಂದಾಯ ಇಲಾಖೆ ಮತ್ತು ಭೂಮಾಪನಾ ಇಲಾಖೆ ಮಾಡುತ್ತಿದೆ. ಈ ಸಂದರ್ಭದಲ್ಲಿ ದಾಖಲೆಗಳನ್ನು ಪರಿಶೀಲಿಸಿದಾಗ ಕೆರೆ ಇರುವ ಜಾಗ ಖಾಸಗಿ ಹಿಡುವಳಿದಾದರ ಹೆಸರಿನಲ್ಲಿ ಇರುವುದು ಪತ್ತೆಯಾಗಿದೆ.

ಕಡೂರು, ಅಜ್ಜಂಪುರ ಮತ್ತು ತರೀಕೆರೆ ತಾಲ್ಲೂಕಿನಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಿವೆ. ‘ರಾಜರ ಕಾಲದಲ್ಲಿ ಕಟ್ಟಿದ್ದ ಕೆರೆಗಳ ದುರಸ್ತಿ ಸೇರಿ ನಿರ್ವಹಣೆಯನ್ನು ನಮ್ಮ ಇಲಾಖೆ ಹಲವು ವರ್ಷಗಳಿಂದ ಮಾಡುತ್ತಿದೆ. ಇಲಾಖೆಯ ರಿಜಿಸ್ಟರ್‌ನಲ್ಲಿ ಮಾತ್ರ ಕೆರೆಗಳ ಹೆಸರಿವೆ. ಪಹಣಿ ಸೇರಿ ಯಾವ ದಾಖಲೆಯೂ ಇಲಾಖೆ ಹೆಸರಿನಲ್ಲಿ ಇಲ್ಲ’ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. 

ವಿಷ್ಣುಸಮುದ್ರ ಕೆರೆ ಹಿಡುವಳಿ ಜಾಗ

ಕಡೂರು ತಾಲ್ಲೂಕಿನ ಐತಿಹಾಸಿಕ ವಿಷ್ಣುಸಮದ್ರ ಕೆರೆ ದಾಖಲೆಗಳ ಪ್ರಕಾರ ಈಗಲೂ ಹಿಡುವಳಿ ಜಮೀನು. ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿರುವ ಈ ಕೆರೆ ಹೆಮಗರಿ ಬೆಟ್ಟದ ತಪ್ಪಲಿನಲ್ಲಿದೆ. 1500 ಎಕರೆ ವಿಸ್ತೀರ್ಣವಿದ್ದು ವಿವಿಧ ಹಿಡುವಳಿದಾರರ ಹೆಸರಿನಲ್ಲಿ ಈ ಜಾಗದ ದಾಖಲೆಗಳಿವೆ.  ಕೆರೆಯ ಜಾಗ ಎಷ್ಟು ಒತ್ತುವರಿ ಜಾಗ ಯಾವುದು ತೆರವುಗೊಳಿಸಬೇಕಿರುವುದು ಯಾವ ಜಾಗ ಎಂಬುದನ್ನು ಪತ್ತೆ ಮಾಡಲು ಅಧಿಕಾರಿಗಳಿಗೆ ತಲೆನೋವಾಗಿದೆ. ಕಂದಾಯ ಇಲಾಖೆ ಭೂದಾಖಲೆಗಳ ಇಲಾಖೆಗಳ ಜತೆ ಸೇರಿ ಅಳತೆ ಮಾಡಿ ದಾಖಲೆ ನಿರ್ಮಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.