ADVERTISEMENT

ಚಿಕ್ಕಮಗಳೂರು: ಹೆಣ್ಣು ಮಕ್ಕಳ ಸಂಖ್ಯೆ ಕುಸಿತ

ಕಾವಲು ಸಮಿತಿ ಸದಸ್ಯರಿಗೆ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಆತಂಕ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 3:08 IST
Last Updated 19 ಆಗಸ್ಟ್ 2025, 3:08 IST
ಗ್ರಾಮ ಪಂಚಾಯಿತಿ ಮಟ್ಟದ ಕಾವಲು ಸಮಿತಿ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಉದ್ಘಾಟಿಸಿದರು
ಗ್ರಾಮ ಪಂಚಾಯಿತಿ ಮಟ್ಟದ ಕಾವಲು ಸಮಿತಿ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಉದ್ಘಾಟಿಸಿದರು   

ಚಿಕ್ಕಮಗಳೂರು: ಮಹಿಳಾ ಪ್ರಧಾನವಾದ ಈ ಜಿಲ್ಲೆಯಲ್ಲಿ 1000 ಇದ್ದ ಹೆಣ್ಣಿನ ಜನನ ಪ್ರಮಾಣ ಈಗ 900ಕ್ಕೆ ಕುಸಿದಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬೆಂಗಳೂರಿನ ಕೆಎಚ್‌ಪಿಟಿ ಆಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ‘ಭದ್ರ ಬಾಲ್ಯ’ ಯೋಜನೆ ಅನುಷ್ಠಾನ ಸಂಬಂಧ ಗ್ರಾಮ ಪಂಚಾಯಿತಿ ಮಟ್ಟದ ಕಾವಲು ಸಮಿತಿ ಸದಸ್ಯರಿಗೆ ಸೋಮವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹೆಣ್ಣು ಮಕ್ಕಳನ್ನು ರಕ್ಷಿಸುವ ಕೆಲಸ ಮಾಡಬೇಕು. ಹೆಚ್ಚಾಗುತ್ತಿರುವ ಪೋಕ್ಸೊ, ಬಾಲ್ಯವಿವಾಹ, ಬಾಲ ಗರ್ಭಿಣಿ ರೀತಿಯ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಪಂಚಾಯಿತಿ ಮಟ್ಟದ ಕಾವಲು ಸಮಿತಿ ಮೂಲಕ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ADVERTISEMENT

‘ಜಿಲ್ಲೆಯಲ್ಲಿ ಬಾಲ್ಯವಿವಾಹದ ಎಂಟು ಪ್ರಕರಣ ತಡೆದಿರುವುದು ಹೆಮ್ಮೆಯ ವಿಷಯ. ಇದು ಪ್ರಥಮ ಹೆಜ್ಜೆ. ಗ್ರಾಮ ಮಟ್ಟದಲ್ಲಿ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು ಎಲ್ಲರ ಜವಾಬ್ದಾರಿ’ ಎಂದರು. 

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಮಾತನಾಡಿ, ‘ಕಾವಲು ಸಮಿತಿಯನ್ನು ಉತ್ತೇಜಿಸಿದರೆ ಬಾಲ್ಯವಿವಾಹ, ಪೋಕ್ಸೊ ಪ್ರಕರಣ ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾರ್ಮಿಕ ವರ್ಗ, ವಲಸಿಗರಲ್ಲಿ ಹಾಗೂ ಅರ್ಧದಲ್ಲೇ ಶಾಲೆ ಬಿಟ್ಟ ಮಕ್ಕಳು ಇಂತಹ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಕಾವಲು ಸಮಿತಿ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು. 

ಕೆಎಚ್‌ಪಿಟಿ (ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್‌) ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಎಚ್.ಎಲ್.ಮೋಹನ್ ಮಾತನಾಡಿದರು. ಕೆಎಚ್‌ಪಿಟಿ ಸಕ್ರಿಯ ಕಾವಲು ಸಮಿತಿ ತರಬೇತಿ ಕೈಪಿಡಿ ಬಿಡುಗಡೆ ಮಾಡಲಾಯಿತು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎನ್.ಮಂಜುನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ ವೈ.ಆಲದಾರ್ತಿ ಭಾಗವಹಿಸಿದ್ದರು. 

ಗ್ರಾಪಂ ಮಟ್ಟದಲ್ಲಿ ಕಾವಲು ಸಮಿತಿ:

‘ಭದ್ರ ಬಾಲ್ಯ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ಹಕ್ಕು ಕಾವಲು ಸಮಿತಿ ರಚಿಸಲಾಗಿದೆ. ಈ ಸಮಿತಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಬೀಳಲಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಚ್.ಎಸ್.ಕೀರ್ತನಾ ಹೇಳಿದರು.

ಮಹಿಳಾ ಮತ್ತು ಮಕ್ಕಳ ಹಕ್ಕು ಕಾವಲು ಸಮಿತಿಯಲ್ಲಿ 15 ಜನ ಕಾರ್ಯ ನಿರ್ವಹಿಸಲಿದ್ದಾರೆ. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆ ನಿರ್ವಹಿಸುವ ಸಾಮರ್ಥ್ಯ ಮತ್ತು ಅಧಿಕಾರ ಇದೆ. ಈ ಸಮಿತಿಗೆ ಮಗುವಿನ ಅಪೌಷ್ಟಿಕತೆ ಹಸಿವಿನ ಸಮಸ್ಯೆ ಲೈಂಗಿಕ ಶೋಷಣೆ ಕೌಟುಂಬಿಕ ಹಿಂಸೆ ಶಾಲೆಗೆ ಹೋಗದೆ ಇರುವುದು ಇತ್ಯಾದಿ ಸಮಸ್ಯೆಗಳನ್ನು ನಿರ್ವಹಿಸುವ ಅಧಿಕಾರವೂ ಇದೆ ಎಂದು ತಿಳಿಸಿದರು.

ಈ ಸಮಿತಿಯಲ್ಲಿ ಪೊಲೀಸ್ ಸಿಬ್ಬಂದಿ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತೆಯರು ಮುಖ್ಯಶಿಕ್ಷಕರು ಸ್ವಸಹಾಯ ಸಂಘದ ಅಧ್ಯಕ್ಷರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಒಂದು ವೇಳೆ ಆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಹಿಳೆಯಾಗಿದ್ದರೆ ಅವರೇ ಈ ಸಮಿತಿಯ ಅಧ್ಯಕ್ಷರೂ ಆಗಿರುತ್ತಾರೆ ಎಂದು ಹೇಳಿದರು. 

ಬಾಲ್ಯವಿವಾಹ ಸಂದರ್ಭದಲ್ಲಿ ಈ ಸಮಿತಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಅಥವಾ ಮೇಲ್ವಿಚಾರಕರನ್ನು ಹೊಣೆ ಮಾಡಲಾಗುತ್ತಿದೆ. ಬಾಲ್ಯ ವಿವಾಹ ನಡೆಯುತ್ತಿರುವ ವೇಳೆ ದೂರು ನೀಡಬೇಕಾಗುತ್ತದೆ. ಒಂದು ವೇಳೆ ಬಾಲ್ಯ ವಿವಾಹ ನಡೆಸಿದ ಕುಟುಂಬದವರು ಪ್ರಭಾವಿಗಳಾಗಿದ್ದರೆ ಬೆದರಿಕೆ ಹಾಕುವಂತಹ ಸಂದರ್ಭಗಳು ಕಂಡು ಬಂದಿವೆ. ಆದ್ದರಿಂದ ಸಮಿತಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರೆ ಈ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ತಿಳಿಸಿದರು.

 ‘ಬೆಳೆಯುವ ಮಗುವಿಗೆ ಸುರಕ್ಷಿತ ವಾತಾವರಣ ಕಲ್ಪಿಸಿಕೊಡಬೇಕು ಎನ್ನುವುದು ‘ಭದ್ರ ಬಾಲ್ಯ’ ಯೋಜನೆಯ ಮುಖ್ಯ ಉದ್ದೇಶ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.