ADVERTISEMENT

ಗೋಹತ್ಯೆ ಕಾಯ್ದೆ ತಿದ್ದುಪಡಿಗೆ ವಿರೋಧ

ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 4:15 IST
Last Updated 10 ಡಿಸೆಂಬರ್ 2025, 4:15 IST
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಚಿಕ್ಕಮಗಳೂರಿನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಚಿಕ್ಕಮಗಳೂರಿನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು   

ಚಿಕ್ಕಮಗಳೂರು: ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಆಜಾದ್ ಪಾರ್ಕ್‌ನಲ್ಲಿ ಜಮಾಯಿಸಿದ ಕಾರ್ಯಕರ್ತರು, ಭಿತ್ತಿಪತ್ರಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬಳಿಕ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಕಾರ್ಯದರ್ಶಿ ರಂಗನಾಥ್, ‘ಮುಖ್ಯಮಂತ್ರಿಯಾಗಿ ಎರಡು ಬಾರಿ ಅಧಿಕಾರ ನಡೆಸಿದ ಸಿದ್ದರಾಮಯ್ಯ ಅವರು ಹಿಂದುತ್ವ ಮತ್ತು ಹಿಂದೂ ಸಮಾಜಕ್ಕಾಗಿ ಏನನ್ನೂ ಮಾಡಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಅವರ ಅವಧಿಯಲ್ಲಿ ಜಾರಿಗೆ ತಂದಿರುವ ಎಲ್ಲಾ ಯೋಜನೆಗಳು ಮುಸ್ಲಿಮರ ಪರವಾಗಿವೆ. ಶಾದಿಭಾಗ್ಯ ಸೇರಿ ಎಲ್ಲಾ ಭಾಗ್ಯ ಯೋಜನೆಗಳು ಅವರಿಗಾಗಿಯೇ ಜಾರಿಗೆ ತರಲಾಗಿದೆ ಎಂದು ಆರೋಪಿಸಿದರು.

ಅಂಬೇಡ್ಕರ್ ರಚಿಸಿರುವ ಮೂಲ ಸಂವಿಧಾನವನ್ನು ರಕ್ಷಣೆ ಮಾಡುತ್ತಿಲ್ಲ. ಬದಲಾಗಿ ಕಾಂಗ್ರೆಸ್ ತಿದ್ದುಪಡಿ ಮಾಡಿರುವ ಜಾತ್ಯತೀತ ಲೇಪನದ ಸಂವಿಧಾನ ರಕ್ಷಣೆ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಗೋಹತ್ಯೆ ನಿಷೇಧದ ವಿರುದ್ಧವಾಗಿ ಮತ್ತು ಗೋವುಗಳನ್ನು ಹತ್ಯೆ ಮಾಡುವವರ ಪರವಾದ ಕಾನೂನು ತಿದ್ದುಪಡಿ ತರಬಾರದು. ಸದನದಲ್ಲಿ ಈ ಮಸೂದೆ ಮಂಡಿಸಬಾರದು ಎಂದು ಒತ್ತಾಯಿಸಿದರು.

ಮುಖಂಡ ಶ್ಯಾಮ್ ವಿ.ಗೌಡ ಮಾತನಾಡಿ, ‘ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಗೋವುಗಳನ್ನು ಸಾಗಣೆ ಮಾಡುವಾಗ ಕೆಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕಾಯ್ದೆಯಲ್ಲಿ ತಿಳಿಸಲಾಗಿದೆ. ಅವುಗಳನ್ನು ಬದಲಾವಣೆ ಮಾಡಿದರೆ ಗೋಹತ್ಯೆ ಮತ್ತೆ ನಿರಾತಂಕವಾಗಿ ನಡೆಯಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಿರುವ ಕಾಯ್ದೆ ಪ್ರಕಾರ ಗೋವುಗಳನ್ನು ಎಲ್ಲಿಂದ ತರಲಾಗುತ್ತಿದೆ, ಸಾಗಣೆ ಮಾಡುವ ವಾಹನಗಳ ದಾಖಲೆ ತೋರಿಸುವುದು ಕಡ್ಡಾಯ. ಈ ನಿಯಮಗಳನ್ನು ಸಡಿಲಗೊಳಿಸಿ ಕಾಯ್ದೆಗೆ ತಿದ್ದುಪಡಿ ತಂದರೆ ಗೋವುಗಳ ಅಕ್ರಮ ಸಾಗಣೆ ಮತ್ತು ಹತ್ಯೆ ತಡೆಯಲು ಆಗುವುದಿಲ್ಲ. ಗೋಹತ್ಯೆ ಮಾಡುವ ಕಟುಕರಿಗೆ ಸಹಾಯ ಮಾಡಲು ಸರ್ಕಾರ ಉಮೇದಿನಲ್ಲಿದೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ಘಟಕದ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ನಗರ ಘಟಕದ ಅಧ್ಯಕ್ಷ ಪುಷ್ಪರಾಜ್, ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್‌ ಕೋಟ್ಯಾನ್ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.