ADVERTISEMENT

ಚಿಕ್ಕಮಗಳೂರು|ಮಣ್ಣಿನ ಗಣೇಶ ಮೂರ್ತಿಗಷ್ಟೇ ಅವಕಾಶ: ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 7:29 IST
Last Updated 22 ಆಗಸ್ಟ್ 2025, 7:29 IST
ಚಿಕ್ಕಮಗಳೂರಿನ ಕುಂಬಾರ ಬೀದಿಯಲ್ಲಿ ಗಣೇಶ ಮೂರ್ತಿಗಳನ್ನು ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮತ್ತು ಆಯುಕ್ತ ಬಿ.ಸಿ.ಬಸವರಾಜ್ ಪರಿಶೀಲಿಸಿದರು
ಚಿಕ್ಕಮಗಳೂರಿನ ಕುಂಬಾರ ಬೀದಿಯಲ್ಲಿ ಗಣೇಶ ಮೂರ್ತಿಗಳನ್ನು ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮತ್ತು ಆಯುಕ್ತ ಬಿ.ಸಿ.ಬಸವರಾಜ್ ಪರಿಶೀಲಿಸಿದರು   

ಚಿಕ್ಕಮಗಳೂರು: ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸಬಾರದು. ಮಣ್ಣಿನ ಮೂರ್ತಿಗಳನ್ನೇ ಪೂಜಿಸಬೇಕು ಎಂದು ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮನವಿ ಮಾಡಿದರು.

ನಗರದ ಬಸವನಹಳ್ಳಿ ಕುಂಬಾರ ಬೀದಿ ಬಡಾವಣೆಯ ಗಣೇಶನ ಮೂರ್ತಿಗಳನ್ನು ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಾತುಕತೆ ನಡೆಸಿದರು.

ನಗರದ ಕೋಟೆ ಕೆರೆಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಪ್ರತ್ಯೇಕ ವ್ಯವಸ್ಥೆಗಳನ್ನು ನಗರಸಭೆ ವತಿಯಿಂದ ಮಾಡಲಾಗಿದೆ. ಹೂವು ಮತ್ತು ಪೂಜಾ ಸಾಮಾಗ್ರಿಗಳನ್ನು ನೀರಿಗೆ ಬಿಡಬಾರದು. ಅದನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT

ನಗರಸಭೆ ಆಯುಕ್ತ ಬಿ.ಸಿ.ಬಸವರಾಜು ಮಾತನಾಡಿ, ‘ನಗರ ವ್ಯಾಪ್ತಿಯಲ್ಲಿ ಪರಿಶೀಲನೆ ವೇಳೆ ಯಾರೂ ಪಿಒಪಿ ಮೂರ್ತಿಗಳನ್ನು ತಯಾರಿಕೆ ಮತ್ತು ಮಾರಾಟ ಮಾಡಬಾರದು. ಕುಂಬಾರ ಬೀದಿಯಲ್ಲಿ ಮಣ್ಣಿನ ಮುರ್ತಿಗಳನ್ನಷ್ಟೇ ತಯಾರಿಸಲಾಗುತ್ತಿದೆ. ಈ ಹಿಂದೆಯೂ ಗಣೇಶ ಮತ್ತು ಗೌರಿ ಮೂರ್ತಿಗಳನ್ನು ಮಣ್ಣಿನಿಂದಲೇ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಇದು ಖುಷಿಯ ವಿಚಾರ’ ಎಂದರು.

‌ಗಣೇಶೋತ್ಸವ ಸಂಬಂಧ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಹೊರ ಜಿಲ್ಲೆಗಳಿಂದ ಪಿಒಪಿ ಗಣೇಶ ಮೂರ್ತಿ ತರಿಸಬಾರದು. ಈ ಉದ್ದೇಶದಿಂದ ಜಿಲ್ಲೆ ಮತ್ತು ತಾಲ್ಲೂಕಿನ ಗಡಿ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.

ಇದನ್ನು ಮೀರಿ ಪಿಒಪಿ ಮೂರ್ತಿ ಮಾರಾಟ ಮಾಡುವುದು ಕಂಡು ಬಂದರೆ ಸ್ಥಳದಲ್ಲೇ ದಂಡ ವಿಧಿಸಲಾಗುವುದು. ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ. ಇದಕ್ಕಾಗಿ ನಗರಸಭೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೇ ಎಲ್ಲಾ ಇಲಾಖೆಗೆ ಸಂಬಂಧಿಸಿದ ಅನುಮತಿ ಪಡೆಯಬಹುದು ಎಂದರು.

ಸದಸ್ಯ ಎ.ಸಿ.ಕುಮಾರ್ ಮಾತನಾಡಿ, ‘ಪ್ಲಾಸ್ಟಿಕ್ ಮುಕ್ತ ಮತ್ತು ಕಸಮುಕ್ತ ನಗರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶನನ್ನು ಪೂಜಿಸಿ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ನಗರಸಭೆ ಪರಿಸರ ಎಂಜಿನಿಯರ್ ತೇಜಸ್ವಿನಿ, ಆರೋಗ್ಯ ನಿರೀಕ್ಷ ನಾಗಪ್ಪ, ರಂಗಪ್ಪ, ಈಶ್ವರ್, ವೆಂಕಟೇಶ್, ಅಣ್ಣಯ್ಯ ಇದ್ದರು.

ಕೋಟೆ ಕೆರೆಯಲ್ಲಿ ಕಲ್ಯಾಣಿ

ನಗರದ ಕೊಟೆ ಕೆರೆಯಲ್ಲಿ ಗಣಪತಿ ವಿಸರ್ಜಿಸಲು ಕಲ್ಯಾಣಿ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರು ಅಲ್ಲಿಯೇ ಗಣೇಶ ಮೂರ್ತಿ ವಿಸರ್ಜಿಸಬೇಕು. ಬೇರೆ ಕರೆ ಕಟ್ಟೆಗಳಲ್ಲಿ ವಿಸರ್ಜಿಸಬಾರದು ಎಂದು ನಗರಸಭೆ ಆಯುಕ್ತ ಬಿ.ಸಿ.ಬಸವರಾಜ ತಿಳಿಸಿದರು. ಹನುಮಂತಪ್ಪ ವೃತ್ತ ಆಜಾದ್ ಪಾರ್ಕ್ ವೃತ್ತ ದಂಡರಮಕ್ಕಿ ಕೆರೆ ಬಳಿ ಟೌನ್ ಕ್ಯಾಂಟೀನ್ ಸರ್ಕಲ್ ಮತ್ತು ಮಲ್ಲಂದುರು ರಸ್ತೆಗಳಲ್ಲಿ ಗಣೇಶ ವಿಸರ್ಜನೆಗೆ ಟ್ಯಾಂಕರ್‌ಗಳನ್ನು ನಿಲ್ಲಿಸಲಾಗುವುದು. ಚಿಕ್ಕ ಗಣೇಶ ಮೂರ್ತಿಗಳನ್ನು ಅಲ್ಲಿಯೇ ವಿಸರ್ಜಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಕೋಟೆ ಕೆರೆಯಲ್ಲಿ ವಿಸರ್ಜನೆ ಮಾಡುವುದು ಸೂಕ್ತ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.