ತೆಂಗಿನ ಕಾಯಿ
ಕಡೂರು: ತೆಂಗಿನ ಕಾಯಿ ಬೆಲೆ ಏರುಗತಿಯಲ್ಲಿ ಮುಂದುವರಿದಿದೆ. ಮಾರುಕಟ್ಟೆಯಿಂದ ಚಿಲ್ಲರೆಯಾಗಿ ಖರೀದಿಸುವ ಗ್ರಾಹಕರು ಬೆಲೆ ಕೇಳಿ ಸುಸ್ತಾಗುತ್ತಿದ್ದಾರೆ.
ಉತ್ತಮ ಧಾರಣೆ ಇರುವುದರಿಂದ ಕಾಯಿ ವ್ಯಾಪಾರಿಗಳು ನೇರವಾಗಿ ತೆಂಗಿನ ತೋಟಕ್ಕೇ ಹೋಗಿ, ಬೆಳೆಗಾರರ ಬಳಿ ಕಾಯಿ ವ್ಯಾಪಾರ ಕುದುರಿಸುತ್ತಿದ್ದಾರೆ.
ತೋಟದಲ್ಲೇ ಕಾಯಿ ಮಾರಾಟ ಮಾಡಿದರೆ ಕಾಯಿ ಕೆಡವುವ, ಸುಲಿಯುವ ಖರ್ಚು ಇಲ್ಲ. ಹಾಗಾಗಿ ಕೆಲ ರೈತರು ತೋಟದಲ್ಲೇ ಕಾಯಿ ಮಾರಾಟಕ್ಕೆ ಒಲುವು ತೋರಿಸುತ್ತಾರೆ. ದೊಡ್ಡ ಪ್ರಮಾಣದಲ್ಲಿ ತೆಂಗು ಬೆಳೆದಿರುವ ರೈತರು ಎಪಿಎಂಸಿಯಲ್ಲಿ ಮಾರಾಟ ಮಾಡಲು ಉತ್ಸುಕರಾಗಿದ್ದಾರೆ. ಬೇಸಿಗೆ ಆರಂಭವಾಗಿದ್ದು, ಎಳನೀರಿಗೂ ಹೆಚ್ಚಿನ ಬೇಡಿಕೆ ಇದೆ. ಇದರಿಂದ ಗುಣಮಟ್ಟದ ತೆಂಗಿನ ಕಾಯಿ ಲಭ್ಯತೆ ಕಡಿಮೆಯಾಗಿದೆ.
ಕೆಲವು ವ್ಯಾಪಾರಿಗಳು ತೆಂಗಿನಕಾಯಿಯನ್ನು ತೂಕದಲ್ಲಿ ಖರೀದಿಸುತ್ತಾರೆ. ಕಡೂರು ಎಪಿಎಂಸಿಯಲ್ಲಿ ಒಂದು ಕ್ವಿಂಟಲ್‌ಗೆ ₹4500 ರಿಂದ ₹5400ರ ತನಕ ಬೆಲೆ ಲಭಿಸಿದೆ. 1 ಕ್ವಿಂಟಲ್‌ಗೆ ಸಣ್ಣ ಕಾಯಿಯಾದರೆ 300, ದೊಡ್ಡ ಕಾಯಿಯಾದರೆ 100 ರಿಂದ 110 ಇರುತ್ತದೆ. ತೆಂಗಿನಕಾಯಿ ತೂಕದಲ್ಲಿ ಮಾರಾಟ ಮಾಡಿದರೆ ಹೆಚ್ಚು ಲಾಭ ದೊರೆಯುತ್ತದೆಯಾದರೂ, ರೈತರು ತೂಕದಲ್ಲಿ ಮಾರಾಟ ಮಾಡಲು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.
ತೆಂಗಿನ ಕಾಯಿ ಬೆಲೆ ಏರುಗತಿಯಲ್ಲಿರುವುದು ಮತ್ತು ಎಪಿಎಂಸಿಯಲ್ಲಿ ಕಾಯಿ ಸಂತೆ ಆರಂಭವಾಗಿರುವುದು ರೈತರಿಗೆ ಲಾಭದಾಯಕವಾಗಿ ಪರಿಣಮಿಸಿದೆ. ಆದರೆ, ಮಾರುಕಟ್ಟೆಯಿಂದ ಚಿಲ್ಲರೆಯಾಗಿ ಕಾಯಿ ಖರೀದಿಸುವವರಿಗೆ ಜೇಬಿಗೆ ಹೊರೆಯಾಗಿದೆ.
ತರಕಾರಿ ಮತ್ತು ಚಿಲ್ಲರೆ ಅಂಗಡಿಗಳಲ್ಲಿ ದೊಡ್ಡ ತೆಂಗಿನಕಾಯಿ ಒಂದಕ್ಕೆ ₹30 ರಿಂದ ₹35, ಮಧ್ಯಮ ಗಾತ್ರದ್ದು ₹20 ರಿಂದ ₹25, ಸಣ್ಣದು ₹15 ರಿಂದ ₹18 ದರದಲ್ಲಿ ಲಭಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.