ತೆಂಗಿನ ಕಾಯಿ
ಕಡೂರು: ನಿತ್ಯ ಬಳಕೆಯ ತೆಂಗಿನ ಕಾಯಿ ದರ ದಿನದಿಂದ ದಿನಕ್ಕೆ ಏರುತ್ತಿರುವುದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.
ಸದ್ಯ ಉತ್ತಮ ಗುಣಮಟ್ಟದ ಕಾಯಿ ಬೆಲೆ 1 ಸಾವಿರಕ್ಕೆ ₹38 ರಿಂದ ₹42 ಸಾವಿರದ ಆಸುಪಾಸಿನಲ್ಲಿದೆ. ಚಿಲ್ಲರೆಯಾಗಿ 1 ಕಾಯಿಗೆ ಮಾರುಕಟ್ಟೆಯಲ್ಲಿ ₹45ರಿಂದ 50ರವರೆಗೆ ದರ ಇದೆ. ಕಳೆದ ವಾರ ತೆಂಗಿನ ಕಾಯಿ ಬೆಲೆ 1 ಸಾವಿರಕ್ಕೆ ಗಾತ್ರ ಆಧರಿಸಿ (ದಪ್ಪ) ₹40ಸಾವಿರ, ಮಧ್ಯಮ ₹30 ಸಾವಿರದಿಂದ ₹35 ಸಾವಿರ ಮತ್ತು ಸಣ್ಣದು ₹ 22 ಸಾವಿರ ಇತ್ತು. ಕೆ.ಜಿ ಲೆಕ್ಕದಲ್ಲಿ ಒಂದು ಕ್ವಿಂಟಲ್ ತೆಂಗಿನ ಕಾಯಿಗೆ ₹2,800 ರಿಂದ 5,200ರವರೆಗೆ ದರ ಇದೆ.
ದುಬಾರಿ ಬೆಲೆಯಿಂದಾಗಿ ಹೋಟೆಲ್ ಮಾಲೀಕರು ತೆಂಗಿನಕಾಯಿ ಬಳಕೆ ಮಿತಗೊಳಿಸಿದ್ದಾರೆ. ಚಟ್ನಿಗೆ ಕಾಯಿ ಬಳಸುವುದನ್ನು ಕಡಿಮೆ ಮಾಡಿದ್ದಾರೆ. ಕಾಯಿ ಚಟ್ನಿ ಜಾಗವನ್ನು ಶೇಂಗಾ ಚಟ್ನಿ ಆವರಿಸಿಕೊಂಡಿದೆ. ದೇವಸ್ಥಾನಗಳಿಗೆ ಬರುವವರು ಚಿಕ್ಕ ಕಾಯಿ ತೆಗೆದುಕೊಂಡು ಹೋಗುವುದು ಸಾಮಾನ್ಯವಾಗಿದೆ.
ತೆಂಗಿನ ಕಾಯಿ ಜತೆಗೆ ಹಸಿ ಶೇಂಗಾ ಧಾರಣೆಯಲ್ಲೂ ಏರಿಕೆಯಾಗಿದೆ. ಹಸಿ ಶೇಂಗಾವನ್ನು ಬಳ್ಳಾರಿ ಭಾಗದ ರೈತರು ಪಟ್ಟಣಕ್ಕೆ ತಂದು ಮಾರುತ್ತಾರೆ. ಲೀಟರ್ ಅಳತೆ ಪಾತ್ರೆಯಲ್ಲಿ ಒಂದು ಲೀಟರ್ ಶೇಂಗಾಕ್ಕೆ (ಮುಕ್ಕಾಲು ಕೆ.ಜಿ) ₹30 ದರವಿದೆ. ₹100ಕ್ಕೆ ನಾಲ್ಕು ಲೀಟರ್ ಶೇಂಗಾ ಮಾರುತ್ತಿದ್ದಾರೆ.
ಹಸಿ ಶೇಂಗಾವನ್ನು ಉಪ್ಪು ಹಾಕಿ ಬೇಯಿಸಿ ತಿನ್ನಲು ಮತ್ತು ಕಾಯಿ ಬೆಲೆ ದುಬಾರಿಯಾಗಿರುವುದರಿಂದ ಚಟ್ನಿ ಮಾಡಲು ಬಳಸುತ್ತಿದ್ದಾರೆ. ಕೆಲವು ಸ್ಥಳೀಯ ಕಡಲೆ ಮಾರಾಟಗಾರರು, ಹಸಿ ಶೇಂಗಾ ಖರೀದಿಸಿ ಅದಕ್ಕೆ ಉಪ್ಪು ಹಾಕಿ ಬೇಯಿಸಿ ಮಾರಾಟ ಮಾಡುತ್ತಾರೆ. ಕೆಲವರಿಗೆ ಇದು ಆದಾಯ ಮೂಲವೂ ಆಗಿದೆ.
ದಿನಕ್ಕೆ 120 ರಿಂದ 130 ಲೀಟರ್‌ನಷ್ಟು ಶೇಂಗಾ ಮಾರಾಟವಾಗುತ್ತದೆ. 100 ಲೀಟರ್‌ಗೆ ₹1,200 ರಿಂದ ₹1,300 ಕೊಟ್ಟು ತರುತ್ತೇವೆ. ಸಾಗಾಣಿಕೆ ಖರ್ಚು ಕಳೆದು ಒಂದು ಲೀಟರ್‌ಗೆ ₹3 ರಿಂದ ₹4 ಲಾಭ ಉಳಿಯುತ್ತದೆ ಎನ್ನುತ್ತಾರೆ ಬಳ್ಳಾರಿಯಿಂದ ಇಲ್ಲಿಗೆ ಶೇಂಗಾ ಮಾರಲು ಬಂದಿದ್ದ ದೇವರಾಜು.
ಕಡೂರು ಪ್ರದೇಶದಲ್ಲಿ ಮಾರಾಟ ಮಾಡಲು ತಂದಿರುವ ಹಸಿ ಶೇಂಗಾ
ಕಾಯಿ ಚಟ್ನಿ ಬದಲು ಶೇಂಗಾ ಚಟ್ನಿ ಬಳಕೆ ಲೀಟರ್ ಅಳತೆಯಲ್ಲಿ ಶೇಂಗಾ ಮಾರಾಟ ಬಳ್ಳಾರಿಯಿಂದ ಶೇಂಗಾ ತಂದು ಮಾರುತ್ತಿರುವ ರೈತರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.