
ಚಿಕ್ಕಮಗಳೂರು: ಬಾಳೆಹೊನ್ನೂರಿನಲ್ಲಿರುವ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ (ಸಿಸಿಆರ್‌ಐ) ನೂರು ವರ್ಷ ಪೂರೈಸುತ್ತಿದ್ದು, ಶತಮಾನೋತ್ಸವದ ಅಂಗವಾಗಿ ಮೂರು ದಿನಗಳ ಸಮಾವೇಶವನ್ನು ಕಾಫಿ ಮಂಡಳಿ ಆಯೋಜಿಸಿದೆ.
ಡಿ. 20ರಿಂದ 22ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಮೂರು ದಿನಗಳ ಕಾಲ ಕಾಫಿ ಉದ್ಯಮದ ಸವಾಲು ಮತ್ತು ಪರಿಹಾರ, ತಾಂತ್ರಿಕ ಮತ್ತು ವೈಜ್ಞಾನಿಕ ಅಂಶಗಳನ್ನು ಒಳಗೊಳ್ಳುವ ಬಗ್ಗೆ ಚರ್ಚೆಗಳು ನಡೆಯಲಿವೆ ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಅವರು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಮೈಸೂರು ಮಹಾರಾಜರ ಆಡಳಿತ ಸಂದರ್ಭದಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಕಾಫಿ ಬೆಳೆಯಲ್ಲಿ ಎರಡು ಜಿ.ಐ ಟ್ಯಾಗ್‌ಗಳನ್ನು ಹೊಂದಿದೆ. ಇದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.
ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಕೇಂದ್ರ ವಾಣಿಜ್ಯ ಖಾತೆ ರಾಜ್ಯ ಸಚಿವ ಜಿತೇಂದ್ರ ಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಅರಣ್ಯ ಇಲಾಖೆ ಸಚಿವ ಈಶ್ವರ್ ಬಿ.ಖಂಡ್ರೆ ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಭಾರತೀಯ ಕಾಫಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದರೆ, ಬ್ರ‍್ಯಾಡಿಂಗ್ ಸಮಸ್ಯೆ ಇದೆ. ಈ ನಿಟ್ಟಿನಲ್ಲಿ ಭಾರತೀಯ ಕಾಫಿ ಬ್ರ‍್ಯಾಡಿಂಗ್ ಹೆಚ್ಚಿಸುವ ಬಗ್ಗೆಯೂ ಚರ್ಚಿಸಲಾಗುವುದು ಎಂದು ತಿಳಿಸಿದರು.
ಈ ಎಲ್ಲಾ ವಿಷಯಗಳ ಕುರಿತು ಮೂರು ದಿನಗಳ ಕಾಲ ನಡೆಯುವ ಚಿಂತನ–ಮಂಥನಕ್ಕೆ ರಾಜ್ಯ ಹೊರ ರಾಜ್ಯಗಳಿಂದ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂರ್ಮಾ ರಾವ್ ಮಾತನಾಡಿ, ‘ಬಾಳೆಹೊನ್ನೂರು ಕಾಫಿ ಸಂಶೋಧನಾ ಕೇಂದ್ರ 1925ರಲ್ಲಿ ಆರಂಭವಾಗಿದ್ದು, 2025ಕ್ಕೆ ನೂರು ವರ್ಷ ಪೂರೈಸಿದೆ. ನೂರು ವರ್ಷಗಳಲ್ಲಿ ಸಂಶೋಧನಾ ಕೇಂದ್ರವೂ ಸಾಕಷ್ಟು ಸಾಧನೆ ಮಾಡಿದೆ’ ಎಂದರು.
2024-25ನೇ ಸಾಲಿನಲ್ಲಿ ಕರ್ನಾಟಕದಲ್ಲಿ 3.67 ಮೆಟ್ರಿಕ್ ಟನ್ ಕಾಫಿ ಉತ್ಪಾದನೆ ಮಾಡಲಾಗುತ್ತಿದೆ. ಅರೇಬಿಕಾ ಕಾಫಿ 13 ತಳಿ, ರೋಬೊಸ್ಟಾ 3 ತಳಿ ಸೇರಿ ಒಟ್ಟು 16 ತಳಿಗಳನ್ನು ಈ ಕೇಂದ್ರ ಸಂವರ್ಧನೆ ಮಾಡಿದೆ. ಚಂದ್ರಗಿರಿ ತಳಿ ಅತ್ಯಂತ ಜನಪ್ರಿಯತೆ ಪಡೆದುಕೊಂಡಿದೆ ಎಂದು ವಿವರಿಸಿದರು.
ಸಂಶೋಧನಾ ಕೇಂದ್ರದಿಂದ ಆಧುನಿಕ ತಂತ್ರಜ್ಞಾನ ಬಳಕೆಯ ಬಗ್ಗೆ ಅಧ್ಯಯನ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಕಾಫಿಯನ್ನು ಇನ್ನಷ್ಟು ಉತ್ಕೃಷ್ಟ ಗುಣಮಟ್ಟಕ್ಕೆ ಕೊಂಡೊಯ್ಯಲು ಮಾರ್ಗಸೂಚಿ ಮತ್ತು ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಫಿ ಮಂಡಳಿ ನಿರ್ದೇಶಕ ಸೆಂದಿಲ್ ಇದ್ದರು.
‘7 ಲಕ್ಷ ಟನ್ ಗುರಿ; ಎರಡು ಹೊಸ ತಳಿ’
‘ಏಳು ಲಕ್ಷ ಟನ್‌ಗಳ ಅದ್ಭುತ ಭವಿಷ್ಯಕ್ಕೆ ಏಳು ಚಿನ್ನದ ಬೀಜಗಳು’ ಎಂಬ ಘೋಷ ವಾಕ್ಯದೊಂದಿಗೆ ಶತಮಾನೋತ್ಸವ ಆಚರಿಸಲಾಗುವುದು ಎಂದು ದಿನೇಶ್ ದೇವವೃಂದ ತಿಳಿಸಿದರು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ 7 ಲಕ್ಷ ಮೆಟ್ರಿಕ್ ಟನ್ ಕಾಫಿ ಉತ್ಪಾದನೆ ಮಾಡಲು ಏನು ಮಾಡಬೇಕು ಎಂಬ ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ. ಕಾಫಿ ಉದ್ಯಮಕ್ಕೆ ಬರುತ್ತಿರುವ ಯುವಜನರನ್ನು ಪ್ರೋತ್ಸಾಹಿಸಲು ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಕಾಫಿ ಉತ್ಪಾದನೆ ಹೆಚ್ಚಳಕ್ಕೆ ಕಾಫಿ ಬೆಳೆಯುವ ಜಾಗ ವಿಸ್ತರಣೆ ಮಾಡಬೇಕಿಂದಿಲ್ಲ. ತಂತ್ರಜ್ಞಾನ ಸಹಿತ ತೋಟಗಳ ನಿರ್ವಹಣೆಯಲ್ಲಿ ಬದಲಾವಣೆ ಮಾಡಿಕೊಂಡರೆ ಇಳುವರಿಯನ್ನು ದುಪ್ಪಟ್ಟು ಮಾಡಿಕೊಳ್ಳಲು ಅವಕಾಶ ಇದೆ. ಈ ಎಲ್ಲ ವಿಷಯಗಳ ಬಗ್ಗೆ ಸಮಾವೇಶದಲ್ಲಿ ಚರ್ಚೆಯಾಗಲಿದೆ ಎಂದರು. ಶತಮಾನೋತ್ಸವ ಸಮಾರಂಭದಲ್ಲಿ ಕಾಫಿಯ ಎರಡು ಹೊಸ ತಳಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಸಮಗ್ರ ಕೃಷಿ ಆರ್ಥಿಕ ನಿರ್ವಹಣೆ ಮಣ್ಣು ಮತ್ತು ಪರಿಸರಕ್ಕೆ ಧಕ್ಕೆಯಾಗದಂತೆ ಕಾಫಿ ಬೆಳೆಯುವ ವಿಧಾನ ಕಾಫಿ ತೋಟಗಳ ನಿರ್ವಹಣೆ ಬಗ್ಗೆಯೂ ಕಾರ್ಯಾಗಾರಗಳು ನಡೆಯಲಿವೆ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.