ADVERTISEMENT

ಕೊಟ್ಟಿಗೆಹಾರ: ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಸಮಗ್ರ ವರದಿ

ಬೆಳೆಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಭೇಟಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 4:51 IST
Last Updated 12 ಜನವರಿ 2021, 4:51 IST
ಮಳೆಯಿಂದ ಕಾಫಿ ಹಣ್ಣು ಉದುರಿರುವ ಕೊಟ್ಟಿಗೆಹಾರದ ಅತ್ತಿಗೆರೆಯ ಎ.ಬಿ.ಕೃಷ್ಣೇಗೌಡ ಅವರ ಕಾಫಿ ತೋಟಕ್ಕೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಭೇಟಿ ನೀಡಿದರು.
ಮಳೆಯಿಂದ ಕಾಫಿ ಹಣ್ಣು ಉದುರಿರುವ ಕೊಟ್ಟಿಗೆಹಾರದ ಅತ್ತಿಗೆರೆಯ ಎ.ಬಿ.ಕೃಷ್ಣೇಗೌಡ ಅವರ ಕಾಫಿ ತೋಟಕ್ಕೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಭೇಟಿ ನೀಡಿದರು.   

ಕೊಟ್ಟಿಗೆಹಾರ: ಅಕಾಲಿಕ ಮಳೆಯಿಂದ ಬೆಳೆ ಹಾನಿಯಾದ ಮೂಡಿಗೆರೆ ತಾಲ್ಲೂಕಿನ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಭೇಟಿ ನೀಡಿ, ಹಾನಿ ವೀಕ್ಷಿಸಿದರು.

ತಾಲ್ಲೂಕಿನ ಲೋಕವಳ್ಳಿ, ಮುಗ್ರಹಳ್ಳಿ, ಬೆಟ್ಟಗೆರೆ, ಫಲ್ಗುಣಿ, ಅತ್ತಿಗೆರೆ ಗ್ರಾಮಗಳಿಗೆ ಭೇಟಿ ನೀಡಿ ಹಾನಿಯಾದ ಭತ್ತದ ಗದ್ದೆಗಳು ಹಾಗೂ ಕಾಫಿತೋಟಗಳನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕಾಫಿ ಮಂಡಳಿಯಿಂದ ಮೂಡಿಗೆರೆ ತಾಲ್ಲೂಕಿನಲ್ಲಿ ಕಾಫಿ ಬೆಳೆಹಾನಿಯ ಸಮೀಕ್ಷೆ ಮಾಡಲು 5 ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಆ ತಂಡಗಳು ಸಮೀಕ್ಷೆಯಲ್ಲಿ ತೊಡಗಿವೆ. ತೋಟಗಾರಿಕಾ ಇಲಾಖೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಅಡಿಕೆ, ಭತ್ತ ಹಾಗೂ ಇತರೆ ಬೆಳೆಗಳ ಹಾನಿಯ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದಾರೆ. ಒಂದು ವಾರದೊಳಗೆ ಸಮೀಕ್ಷೆ ಪೂರ್ಣಗೊಳ್ಳಲಿದ್ದು, ಬೆಳೆಹಾನಿಯ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದರು.

ADVERTISEMENT

‘ಅಕಾಲಿಕ ಮಳೆಯಿಂದ ಕಾಫಿಗಿಡಗಳಲ್ಲಿ ಹೂ ಅರಳಿದೆ. ಕಾಫಿ ಹಣ್ಣುಗಳು ಉದುರಿವೆ. ಅತಿಯಾದ ಮಳೆಯಿಂದ ರಾಶಿ ಕಾಫಿಹಣ್ಣುಗಳು ಬೂಸು ಬಂದಿವೆ. ಕಾರ್ಮಿಕರ ಕೊರತೆಯಿಂದ ಗಿಡದಿಂದ ಉದುರಿದ ಕಾಫಿಯನ್ನು ಹೆಕ್ಕಲು ಕೂಡ ಸಮಸ್ಯೆ ಯಾಗಿದೆ. ಈ ಎಲ್ಲಾ ಅಂಶಗಳನ್ನು ಉಲ್ಲೇ ಖಿಸಿ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದರು.

ಅತ್ತಿಗೆರೆಯ ಹಿರಿಯ ಕಾಫಿ ಬೆಳೆಗಾರರಾದ ಎ.ಬಿ ಕೃಷ್ಣೇಗೌಡ ಅವರು ಜಿಲ್ಲಾಧಿಕಾರಿಯ ಬಳಿ ಕಾಫಿ ಬೆಳೆ ಹಾನಿಯಾದ ಬಗ್ಗೆ ಅಳಲು ತೋಡಿಕೊಂಡರು. ‘ವರ್ಷದಿಂದ ಕಾಫಿ ತೋಟದಲ್ಲಿ ಶ್ರಮ ವಹಿಸಿ ದುಡಿದಿದ್ದು, ಫಸಲು ಕೈ ಸೇರುವ ಹೊತ್ತಿಗೆ ಕೈತಪ್ಪಿದೆ. ಸರ್ಕಾರ ಕಾಫಿ ಬೆಳೆಗಾರರ ಹಾಗೂ ರೈತರ ನೆರವಿಗೆ ಬರಬೇಕು’ ಎಂದರು.

ಮೂಡಿಗೆರೆ ತಹಶೀಲ್ದಾರ್ ರಮೇಶ್, ಕೃಷಿ ಇಲಾಖೆಯ ಕೃಷಿ ಅಧಿಕಾರಿ ವೆಂಕಟೇಶ್, ಕಾಫಿ ಮಂಡಳಿಯ ಹಿರಿಯ ಸಂಪರ್ಕ ಅಧಿಕಾರಿ ಶ್ರೀದೇವಿ, ಗ್ರಾಮ ಲೆಕ್ಕಾಧಿಕಾರಿ ರಾಜಸ್ವ ನಿರೀಕ್ಷಕ ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿಗಳಾದ ಆನಂದ್, ನಿತ್ಯಾ, ನಮಿತಾ, ರಮ್ಯಾ, ಉಮೇಶ್, ಗ್ರಾಮ ಸಹಾಯಕ ಅಣ್ಣಪ್ಪ ಇದ್ದರು.

ಬಣಕಲ್: ಹೋಬಳಿಯ ಫಲ್ಗುಣಿ ಗ್ರಾಮದಲ್ಲಿ ಹಾನಿಯಾದ ಭತ್ತದ ಗದ್ದೆಗಳು ಹಾಗೂ ಕಾಫಿ ತೋಟಗಳಿಗೆ ಡಾ.ಬಗಾದಿ ಗೌತಮ್ ವಿವಿಧ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.

ಫಲ್ಗುಣಿ ಗ್ರಾಮ ಪಂಚಾಯಿತಿ ಸದಸ್ಯರಾದ ಸರಿತಾ ಲೋಹಿತ್, ಸತೀಶ್, ಹಾಗೂ ಶೀಲಾ, ರೈತರಾದ ಒ.ಜಿ.ರವಿ, ಶರತ್, ರವಿಶಂಕರ್, ಮಿಥುನ್, ಅರುಣ್, ಪವನ್, ಶಿವಕುಮಾರ್, ಹರೀಶ್, ರವಿಕಿರಣ್, ನಾಗರಾಜ್, ಇಕ್ಬಲ್ ಅಹಮ್ಮದ್, ಸುಧಾಕರ, ನವೀನ್, ಪ್ರಮೋದ್, ದಿನೇಶ್, ಭಾಸ್ಕರ್, ಕೃಷ್ಣೇಗೌಡ, ಕಿರಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.