ADVERTISEMENT

ಕಾಫಿ ಬೆಲೆ ಏರಿಕೆ: ಬೆಳೆಗಾರರಲ್ಲಿ ಉತ್ಸಾಹ

ಕಾರ್ಮಿಕರ ಕೊರತೆಯ ಮಧ್ಯೆಯೂ ಮಲೆನಾಡಿನಲ್ಲಿ ಕಾಫಿ ಕೊಯಿಲು ಆರಂಭ

ರವಿ ಕೆಳಂಗಡಿ
Published 2 ಜನವರಿ 2022, 4:30 IST
Last Updated 2 ಜನವರಿ 2022, 4:30 IST
   

ಕಳಸ: ಹೊಸ ವರ್ಷದಲ್ಲಿ ಕಾಫಿ ಬೆಲೆಯ ಏರಿಕೆಯ ಜೊತೆಗೆ ಕಾಫಿನಾಡಿನಲ್ಲಿ ಎಲ್ಲ ವ್ಯವಹಾರ ಮತ್ತು ವಹಿವಾಟು ಕೂಡ ಗರಿಗೆದರಿದೆ.

ಶನಿವಾರದ ಕಾಫಿ ಬೆಲೆಯು ಅರೇಬಿಕಾ ಪಾರ್ಚ್ಮೆಂಟ್ 50 ಕೆ.ಜಿ. ಮೂಟೆಗೆ ₹ 15,000, ಅರೇಬಿಕಾ ಚೆರಿಮೂಟೆಗೆ ₹ 7,000, ರೊಬಸ್ಟಾ ಪಾರ್ಚ್ಮೆಂಟ್‌ಮೂಟೆಗೆ ₹ 6,800, ರೋಬಸ್ಟಾ ಚೆರಿ ಮೂಟೆಗೆ ₹ 4,200ಕ್ಕೆ ಏರಿಕೆಯಾಗಿದೆ. ಇದು ಕಳೆದ 10 ವರ್ಷದಲ್ಲೇ ಕಾಫಿಗೆ ಸಿಕ್ಕ ಗರಿಷ್ಠ ಗೌರವ ಎನ್ನುವುದು ಬೆಳೆಗಾರರ ಅಭಿಪ್ರಾಯ.

ಇದೀಗ ಕಾಫಿ ಹಣ್ಣು ಕೊಯಿಲು ಅತ್ಯಂತ ಉತ್ಸಾಹದಿಂದ ನಡೆಯುತ್ತಿದೆ. ಕಾರ್ಮಿಕರ ಕೊರತೆ ಈ ಬಾರಿ ಕಾಡುತ್ತಿದೆ. ಈ ಮಧ್ಯೆ ಮಧ್ಯಪ್ರದೇಶ, ಅಸ್ಸಾಂ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬಂದಿದ್ದಾರೆ. ಕಾಫಿಯನ್ನು ದಾಸ್ತಾನು ಮಾಡಿ ಗರಿಷ್ಠ ಬೆಲೆ ಪಡೆಯುವ ಹುಮ್ಮಸ್ಸು ಬೆಳೆಗಾರರಲ್ಲಿ ಕಂಡು ಬರುತ್ತಿದೆ. ಸಣ್ಣ ಬೆಳೆಗಾರರು ಬೆಲೆ ಇಳಿಯುವ ಮುನ್ನವೇ ಒಣಗಿಸಿ ಮಾರಾಟ ಮಾಡುವ ಧಾವಂತದಲ್ಲಿ ಇದ್ದಾರೆ.

ADVERTISEMENT

‘ಬ್ರೆಜಿಲ್‍ನಲ್ಲಿ ಕಳೆದ ವರ್ಷ ಸಂಭವಿಸಿದ ಹಿಮಪಾತದ ಕಾರಣಕ್ಕೆ ಅಲ್ಲಿ ಈ ಸಾಲಿನ ಕಾಫಿ ಉತ್ಪಾದನೆಯು 1.5 ಕೋಟಿ ಚೀಲದಷ್ಟು ಕಡಿಮೆ ಆಗಬಹುದು ಎಂಬ ಒಂದು ಅಂಶವೇ ಜಾಗತಿಕ ಕಾಫಿ ಮಾರುಕಟ್ಟೆಯಲ್ಲಿ ತಲ್ಲಣ ತಂದಿದೆ. ಮುಂದಿನ ವರ್ಷವೂ ಅಲ್ಲಿನ ಹವಾಮಾನ ಪ್ರತಿಕೂಲ ಆಗಬಹುದು ಎಂಬ ಊಹೆಯೂ ಇದೆ. ಜೊತೆಗೆ ಹೊಸ ಕಾಫಿ ಗಿಡಗಳು ಬೆಳೆದು ಫಸಲು ನೀಡಲು ಕನಿಷ್ಠ 4-5 ವರ್ಷ ಬೇಕಾಗಬಹುದು ಎಂಬ ಅಂಶ ಕೂಡ ಕಾಫಿ ಬೆಲೆ ಸದ್ಯಕ್ಕೆ ಇಳಿಯದು’ ಎಂಬ ಲೆಕ್ಕಾಚಾರ ಕಾಫಿ ಬೆಳೆಗಾರರದು.

ಜಗತ್ತಿನ ಶೇ 35 ಕಾಫಿ ಬೆಳೆಯುವ ಬ್ರೆಜಿಲ್‍ನಲ್ಲಿ ಜಗತ್ತಿನ ಶೇ 70ರಷ್ಟು ಅರೇಬಿಕಾ ಕೂಡ ಇದೆ. ಇದು ಅರೇಬಿಕಾ ಕಾಫಿಗೆ ದೊಡ್ಡ ಮಟ್ಟದ ಮರ್ಯಾದೆ ತಂದಿದೆ. ಇನ್ನು ರೊಬಸ್ಟಾ ಬೆಳೆಯಲ್ಲಿ ಅಗ್ರಗಣ್ಯ ರಾಷ್ಟ್ರವಾದ ವಿಯೆಟ್ನಾಂನಲ್ಲಿ ಕೋವಿಡ್ ಸಂಬಂಧಿತ ಲಾಕ್‍ಡೌನ್ ನಿರ್ಬಂಧ ಸಕಾಲಕ್ಕೆ ಕಾಫಿ ರಫ್ತು ಮಾಡಲು ಅವಕಾಶ ನೀಡಿಲ್ಲ. ಇದರಿಂದ ರೊಬಸ್ಟಾ ಕಾಫಿ ಬೆಲೆ ಕೂಡ ಏರುತ್ತಲೇ ಇದೆ.‌

ಕೊವಿಡ್ ಲಾಕ್‍ಡೌನ್ ಕಾರಣಕ್ಕೆ ಕಾಫಿ ಸೇವನೆ ಪ್ರಮಾಣ ಕೂಡ ಹೆಚ್ಚಿರುವುದು ಕಾಫಿಯ ಜಾಗತಿಕ ಬಳಕೆಯನ್ನು ಹೆಚ್ಚಿಸಿದೆ ಎಂದೇ ಅಂದಾಜಿಸಲಾಗುತ್ತಿದೆ. ಕೊಲಂಬಿಯಾ, ಮಧ್ಯ ಅಮೆರಿಕ, ಆಫ್ರಿಕಾ ಮತ್ತು ಏಷಿಯಾದ ಕಾಫಿ ಬೆಳೆಯುವ ರಾಷ್ಟ್ರಗಳು ಕಾಫಿ ಬೆಲೆ ಏರಿಕೆಯ ಲಾಭವನ್ನು ಪಡೆಯಲು ಹವಣಿಸುತ್ತಿವೆ.

ಬೆಲೆ ಏರಿಕೆಯ ಪರಿಣಾಮ ವಿಯೆಟ್ನಾಂನಲ್ಲಿ ಈ ಬಾರಿ ಗರಿಷ್ಠ ಪ್ರಮಾಣದಲ್ಲಿ ನೀರಾವರಿ ಮಾಡಲಾಗಿದ್ದು, ಮುಂದಿನ ಸಾಲಿಗೆ ಕನಿಷ್ಠ 30 ಲಕ್ಷ ಚೀಲದಷ್ಟು ರೊಬಸ್ಟಾ ಹೆಚ್ಚುವರಿ ಬೆಳೆಯಬಹುದು ಎಂದು ಅಂದಾಜಿಸಲಾಗುತ್ತಿದೆ. ಜೊತೆಗೆ ಜಾಗತಿಕ ಮಟ್ಟದಲ್ಲಿ ಕಾಫಿ ಸಾಗಣೆಯಲ್ಲಿ ಕಳೆದ 2 ವರ್ಷಗಳಿಂದ ಇದ್ದಎಲ್ಲ ತೊಡಕು ಈ ಸಾಲಿನ ಮಾರ್ಚ್ ವೇಳೆಗೆ ನಿವಾರಣೆ ಆಗಲಿದೆ ಎಂಬ ನಿರೀಕ್ಷೆಯೂ ಇದೆ. ಹಾಗಾದಲ್ಲಿ ಆನಂತರ ಕಾಫಿ ಬೆಲೆಯಲ್ಲಿ ಕೊಂಚ ಇಳಿಕೆ ಆಗುವ ಸಾಧ್ಯತೆ ಜಾಗತಿಕ ಮಟ್ಟದಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.