ಎ.ಜೆ. ಸುಬ್ರಾಯಗೌಡ
ಮೂಡಿಗೆರೆ: ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಈಚೆಗೆ ನಡೆದ ಹಿಂದೂ ಮಹಾಸಭಾ ಗಣಪತಿ ಸೇವಾ ಸಮಿತಿಯ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಶಾಸಕಿ ನಯನಾ ಮೊಟಮ್ಮ ಅವರು ಭಾಗವಹಿಸಿ ಮಾತನಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಗೋಣಿಬೀಡು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಎ.ಜೆ. ಸುಬ್ರಾಯಗೌಡ ಹೇಳಿದರು.
ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷ ಬಿಂಬಿಸಲಾಗುತ್ತದೆಯೆ ಹೊರತು ಶಾಸಕರಾದ ಬಳಿಕ ಅವರು ಕ್ಷೇತ್ರದ ಎಲ್ಲಾ ಜನರ ಶಾಸಕರಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಶಾಸಕಿ ನಯನಾ ಮೋಟಮ್ಮ ಅವರು ಕೂಡ ಪಕ್ಷ ಬೇಧ ಮರೆತು, ಎಲ್ಲರೊಂದಿಗೆ ಬರೆಯುವ ಮೂಲಕ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ’ ಎಂದರು.
‘ಕಾರ್ಯಕ್ರಮದಲ್ಲಿ ಶಾಸಕರು ಪಕ್ಷಾಂತರದ ಕುರಿತು ಮಾತನಾಡಿಯೇ ಇಲ್ಲ. ತನ್ನ ಉಪಸ್ಥಿತಿಯಿಂದ ಜನರಲ್ಲಿ ಪಕ್ಷಾಂತರದ ಭಾವನೆ ಉಂಟಾಗಬಾರದೆಂಬ ದೃಷ್ಟಿಯಿಂದ ನದಿ ಅಂದರೆ ಕಾಂಗ್ರೆಸ್ಸಾ, ದಡ ಅಂದರೆ ಬಿಜೆಪಿನಾ ಎಂದು ಜನರಿಗೆ ಅರ್ಥ ಮಾಡಿಸಲು ಆ ಪದ ಬಳಕೆ ಮಾಡಿದ್ದಾರೆ. ನಾನು ಗಣಪತಿಗಾಗಿ, ಧರ್ಮಕ್ಕಾಗಿ ಹಾಗೂ ಸಮಿತಿಯಲ್ಲಿ ಕಾರ್ಯಾಧ್ಯಕ್ಷೆಯಾಗಿದ್ದರಿಂದ ಇಲ್ಲಿಗೆ ಬಂದಿದ್ದೇನೆಂದು ಅವರೇ ಅದೇ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೂ ತಪ್ಪು ಸಂದೇಶವನ್ನು ರವಾನಿಸುವ ಕುಕೃತ್ಯವನ್ನು ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.
ಸಭೆಯಲ್ಲಿ ನಾಳೆ ನಾನು ಬಿಜೆಪಿಗೆ ಬರುತ್ತೇನೋ, ಕಾಂಗ್ರೆಸ್‌ನಲ್ಲಿ ಉಳಿಯುತೇನೋ ಅಥವಾ ಎಸ್‌ಡಿಪಿಐ, ಬಿಎಸ್‌ಪಿಗೆ ಹೋಗುತ್ತೇನೋ? ಆ ಪ್ರಶ್ನೆಗೆ ಉತ್ತರ 3 ವರ್ಷದ ಮೇಲೆ ನೋಡೋಣ ಎಂದು ಹೇಳಿದ್ದಾರೆ. ಈ ಮಾತನ್ನು ಹೇಳುವ ಪ್ರಾರಂಭದಲ್ಲಿಯೇ ಪಕ್ಷಾಂತರದ ಈ ಪ್ರಶ್ನೆ ಯಾರಿಗೂ, ಯಾವ ಪಕ್ಷದವರಿಗೂ ಮೂಡಿ ಬರಬಾರದೆಂದು ಒತ್ತಿ ಒತ್ತಿ ಹೇಳುವ ಮೂಲಕ ಜನರಿಗೆ ಅರ್ಥ ಮಾಡಿಸಲು ಪ್ರಯತ್ನಿಸಿದ್ದಾರೆ. ಅವರ ಭಾಷಣದಲ್ಲಿ ಹೆಚ್ಚಾಗಿ ತಾನು ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ಇದ್ದೇನೆಂದು ಸ್ಪಷ್ಟಪಡಿಸುತ್ತಲೇ ಇದ್ದರು. ಆದರೆ ಶಾಸಕರ ಮಾತನ್ನು ಅರ್ಥ ಮಾಡಿಕೊಳ್ಳದೇ ವಿಡಿಯೋ ತುಳುಕನ್ನು ಅರ್ಧಕ್ಕೆ ಕಟ್ ಮಾಡಿ, ಅವರ ಹೇಳಿಕೆಯನ್ನು ತಿರುಚಿ ತಮಗಿಷ್ಟ ಬಂದ ಹಾಗೆ ವೈಭವಿಕರಿಸಲಾಗಿದೆ’ ಎಂದು ದೂರಿದರು.
‘ಕೇಸರಿ ಬಣ್ಣ ಯಾವ ಪಕ್ಷ ಹಾಗೂ ಸಂಘಟನೆಯ ಸ್ವತ್ತಲ್ಲ. ಆದರೂ ಶಾಸಕಿ ನಯನಾ ಮೋಟಮ್ಮ ಅವರು ಕೇಸರಿ ಶಾಲು ಧರಿಸಿದ್ದನ್ನೂ ವೈಭವೀಕರಿಸಲಾಗಿದೆ. ರೈತರೆಂದರೆ ಹಸಿರು, ಕನ್ನಡ ಎಂದರೆ ಕೆಂಪು, ಹಳದಿ ಹೀಗೆ ವಿವಿಧ ಕಾರ್ಯಕ್ರಮಗಳಲ್ಲಿ ಆಯಾ ಬಣ್ಣದ ಶಾಲು ಹಾಕಿಕೊಂಡಾಗ ಬಾರದ ಕೋಮು ಭಾವನೆ, ಕೇಸರಿ ತೊಟ್ಟಾಗ ಮಾತ್ರ ತೋರುತ್ತಿರುವುದು ಸರಿಯಲ್ಲ’ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.