ಕಡೂರು (ಚಿಕ್ಕಮಗಳೂರು): ‘ಪದವಿಪೂರ್ವ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಹಣ ಪಡೆದು ಖಾಸಗಿ ಪದವಿಪೂರ್ವ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಿದ್ದಾರೆ’ ಎಂದು ಕಾಂಗ್ರೆಸ್ ಶಾಸಕ ಕೆ.ಎಸ್.ಆನಂದ್ ಇಲ್ಲಿ ಆರೋಪಿಸಿದರು.
ತಾಲ್ಲೂಕಿನ ಚಿಕ್ಕಂಗಳ ಗ್ರಾಮದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ನಾಯಿಕೊಡೆಗಳಂತೆ ಪದವಿಪೂರ್ವ ಕಾಲೇಜುಗಳು ಆರಂಭಗೊಳ್ಳುತ್ತಿವೆ. ಇದರಲ್ಲಿ ದೊಡ್ಡ ಹಗರಣವೇ ನಡೆದಿದೆ’ ಎಂದು ದೂರಿದರು.
‘ಮೂಲಸೌಕರ್ಯ ಇಲ್ಲದಿದ್ದರೂ ಖಾಸಗಿ ಪದವಿ ಪೂರ್ವ ಕಾಲೇಜುಗಳನ್ನು ಕ್ಷೇತ್ರದಲ್ಲಿ ಆರಂಭಿಸಲಾಗಿದೆ. ನಿಜಕ್ಕೂ ಇದು ದುರದೃಷ್ಟಕರ. ಬಡವರ ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಹಂಬಲ ಇಂತಹ ನಡೆಗಳ ಮೂಲಕ ಹಾಳಾಗುತ್ತಿದೆ’ ಎಂದರು.
‘ಇದನ್ನು ಸಿ.ಎಂ ಗಮನಕ್ಕೂ ತರಲಾಗುವುದು. ಸದನದಲ್ಲಿ ಪ್ರಸ್ತಾಪಿಸುತ್ತೆನೆ. ಅನುಮತಿ ನೀಡಿದ ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.
‘ಹಣ ಕೊಟ್ಟು ಪರವಾನಗಿ ಪಡೆದು ಬಡ ಮಕ್ಕಳನ್ನು ವಂಚಿಸುತ್ತಿರುವ ಕಾಲೇಜುಗಳು ಹಾಗೂ ಹಣ ಪಡೆದು ಪರವಾನಗಿ ನೀಡುವ ವ್ಯವಸ್ಥೆ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುವುದು’ ಎಂದು ಶಾಸಕರು ಎಚ್ಚರಿಸಿದರು.
‘ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಪ್ರವೇಶ ಮತ್ತು ಶಾಲೆಬಿಟ್ಟ ಮಕ್ಕಳ ಸ್ಥಾನ ಭರ್ತಿಗೆ ತರೀಕೆರೆ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಅವ್ಯವಹಾರ ನಡೆದಿದೆ’ ಎಂದು ಕೆ.ಎಸ್.ಆನಂದ್ ಅವರು ಆರೋಪಿಸಿದರು. ‘ವಸತಿ ಶಾಲೆಗಳ ಸೀಟು ಹಂಚಿಕೆ ಜವಾಬ್ದಾರಿ ಈಗ ಉಪವಿಭಾಗಾಧಿಕಾರಿ ನೇತೃತ್ವದ ಸಮಿತಿಗೆ ನೀಡಲಾಗಿದೆ. ತರೀಕೆರೆ ಕಚೇರಿಯಲ್ಲಿ ಸಿಬ್ಬಂದಿ ಮೂಲಕ ಹಣ ಪಡೆದು ಖಾಲಿ ಸೀಟುಗಳ ಭರ್ತಿ ಮಾಡಲಾಗಿದೆ’ ಎಂದರು. ‘ಈಗ ವಿದ್ಯಾರ್ಥಿಗಳಿಗೆ ನೀಡಿರುವ ಪ್ರವೇಶವನ್ನು ತಡೆ ಹಿಡಿಯಬೇಕು. ತನಿಖೆಗೆ ಸಮಿತಿಯನ್ನೂ ರಚಿಸಬೇಕು’ ಎಂದು ಜಿಲ್ಲಾಧಿಕಾರಿಗೆ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.