ಕೊಪ್ಪ: ‘ಬಿಜೆಪಿಯವರು ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಸುಳ್ಳು ಆರೋಪ ಎದುರಿಸುತ್ತಿರುವ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ನಾವೆಲ್ಲ ಶಕ್ತಿಯಾಗಿ, ಬೆಂಬಲವಾಗಿ ನಿಲ್ಲಬೇಕು’ ಎಂದು ಭದ್ರಾ ಕಾಡಾ ನಿಗಮದ ಅಧ್ಯಕ್ಷ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಹೇಳಿದರು.
ಶಾಸಕ ಟಿ.ಡಿ.ರಾಜೇಗೌಡ ಅವರ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿಗರ ಷಡ್ಯಂತ್ರದ ವಿರುದ್ಧ ಹೋರಾಟ ರೂಪಿಸಲು ಪುರಭವನದಲ್ಲಿ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಬ್ಲಾಕ್ ಕಾಂಗ್ರೆಸ್ ಶುಕ್ರವಾರ ಆಯೋಜಿಸಿದ್ದ ಶೃಂಗೇರಿ ಕ್ಷೇತ್ರ ಕಾಂಗ್ರೆಸ್ ಕಾರ್ಯಕರ್ತರ ಸಮ್ಮಿಲನ ಸಭೆ ‘ಸತ್ಯಮೇವ ಜಯತೇ’ ಉದ್ಘಾಟಿಸಿ ಅವರು ಮಾತನಾಡಿದರು.
‘ರಾಜ್ಯ, ರಾಷ್ಟ್ರದಲ್ಲಿ ನೇರ ರಾಜಕಾರಣ ಮಾಡಲು ಬಿಜೆಪಿಗೆ ತಿಳಿದಿಲ್ಲ. ಜನರ ಬದುಕು ಸುಧಾರಿಸುವ ಕೆಲಸ ಮಾಡುವುದಿಲ್ಲ. 2004ರಿಂದ 2018ರವರೆಗೆ ಶೃಂಗೇರಿ ಕ್ಷೇತ್ರಕ್ಕೆ ಕಳಂಕ ಬಂದಿತ್ತು. ಜೀವರಾಜ್ ಅವರು ಹಕ್ಕುಪತ್ರದ ದಾಖಲೆ ತಿದ್ದುವ ಮೂಲಕ ರೈತರ, ಕಾರ್ಮಿಕರ ಜೀವನವನ್ನು ಕಷ್ಟಕ್ಕೆ ದೂಡಿದ್ದರು. ಜನರ ಬದುಕು ಸುಧಾರಿಸುವ ಕೆಲಸ ಮಾಡಿಲ್ಲ. ಕಂದಾಯ ಭೂಮಿ ಅರಣ್ಯಕ್ಕೆ ಸೇರಿಸುವಾಗ ಸುಮ್ಮನಿದ್ದರು. ಬಿಜೆಪಿ ಅವಧಿಯಲ್ಲಿ ಜನರು ಹಕ್ಕುಪತ್ರಕ್ಕಾಗಿ ಮಧ್ಯವರ್ತಿಗಳನ್ನು ಅವಲಂಬಿಸಿದ್ದರು’ ಎಂದು ದೂರಿದರು.
‘ರಾಜ್ಯ ಸರ್ಕಾರ ನುಡಿದಂತೆ ನಡೆದಿರುವುದನ್ನು, ಜನಪ್ರಿಯತೆಯನ್ನು ಸಹಿಸದ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆಯುವ ಬಿಜೆಪಿ ಮನಃಸ್ಥಿತಿಯ ವಕೀಲರ ಮೇಲೆ ಪ್ರಕರಣ ದಾಖಲಿಸಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಆಗಿಲ್ಲ ಎಂದರೆ ನ್ಯಾಯಾಂಗ ಉಳಿಸುವ ಯಾವ ಮನಃಸ್ಥಿತಿಯೂ ಬಿಜೆಪಿಗೆ ಇಲ್ಲ’ ಎಂದು ಆರೋಪಿಸಿದರು.
ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ‘ಮಾಜಿ ಶಾಸಕರ ಮೇಲೆ ಮುಖ ಮುಚ್ಚಿಕೊಂಡು ಓಡಾಡುವ ಪ್ರಕರಣ ದಾಖಲಾಗಿತ್ತು. ಆಗ ಅವರು ಜಾಮೀನು ಪಡೆಯಲು ಓಡಾಡುತ್ತಿದ್ದರು. ಆದರೆ, ರಾಜೇಗೌಡ ಅವರು ಊರಲ್ಲೇ ಇದ್ದು ಪ್ರಕರಣ ಎದುರಿಸುತ್ತಿದ್ದು, ಪ್ರಕರಣ ದಾಖಲಾದಾಗ ತಡೆಯಾಜ್ಞೆ ತರಬಹುದಿತ್ತು. ಆದರೆ, ಜನರಿಗೆ ಸತ್ಯ ಗೊತ್ತಾಗಲಿ ಎಂಬ ಕಾರಣಕ್ಕೆ ಅವರು ಹಾಗೆ ಮಾಡಿಲ್ಲ. ದಾಖಲೆ ತಿದ್ದಿದ ಆರೋಪ ಬಂದಾಗ ನೀವು ಯಾಕೆ ತಡೆಯಾಜ್ಞೆ ತಂದಿದ್ದೀರಿ ಎಂದು ಜೀವರಾಜ್ ಅವರನ್ನು’ ಪ್ರಶ್ನಿಸಿದರು.
‘ನಿಮ್ಮ ದೂರಿಗೆ ಸಂಬಂಧಿಸಿ ಲೋಕಾಯುಕ್ತಕ್ಕೆ ದಾಖಲೆ ಕೊಟ್ಟಿದ್ದೇವೆ. ನೀವು ಬೇಕಾದರೆ ಅಲ್ಲಿಂದ ಪಡೆಯಿರಿ. ಕಳಪೆ ಕಾಮಗಾರಿ ನಡೆಸಿದ ವ್ಯಕ್ತಿ ರಾಜೇಗೌಡ ಅವರ ವಿರುದ್ಧ ದೂರು ನೀಡುವ ಮುನ್ನ ಯೋಚಿಸಬೇಕಿತ್ತು. ದೂರು ಕೊಟ್ಟ ವ್ಯಕ್ತಿ ಸೈನಿಕರ ಕುಟುಂಬಕ್ಕೆ ಸೇರಿದ ಜಮೀನನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದರು. ಜೀವರಾಜ್ ಎಂದಿಗೂ ರಾಜಕಾರಣಕ್ಕೆ ಬರಲು ಸಾಧ್ಯವಿಲ್ಲ’ ಎಂದರು.
ರಾಜ್ಯ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಮಾತನಾಡಿ, ‘ನಾವೂ ಕಾನೂನಾತ್ಮಕ ಹೋರಾಟ ಮಾಡಬೇಕು. ಕಾರ್ಯಕರ್ತರ ರಕ್ಷಣೆ ಇದೆ ಎಂದು ಬಾಯಿ ಮಾತಲ್ಲಿ ಹೇಳಿದರೆ ಸಾಲದು’ ಎಂದರು.
ಮುಖಂಡ ಎಸ್.ಪೇಟೆ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಬೆಂಗಳೂರು, ಕಲಬುರಗಿ, ಲೋಕಾಯುಕ್ತ ನ್ಯಾಯಾಲಯ ಎಂದು ವಾರದಲ್ಲಿ 6 ದಿನ ನ್ಯಾಯಾಲಯಕ್ಕೆ ಸುತ್ತಾಡಿದರೆ ಅಭಿವೃದ್ಧಿ ಕೆಲಸ ಮಾಡುವುದಾದರೂ ಹೇಗೆ. ದೂರು ಕೊಟ್ಟ ಹೊಸೂರ್ ದಿನೇಶ್ ಅವರು ನಾಯಕನಾಗಲು ಸಾಧ್ಯವಿಲ್ಲ. ಜೀವರಾಜ್ ಅವರ ಚೇಲಾ ಆಗಿರುತ್ತಾರೆ. ಚುನಾವಣೆ ಸಂದರ್ಭದಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಿ, ಸೀರೆ ಹಂಚಿದ್ದೀರಿ. ಎರಡು ವರ್ಷದಲ್ಲಿ ಸತ್ಯನಾರಾಯಣ ಪೂಜೆ ಯಾಕೆ ಮಾಡಿಲ್ಲ’ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಸದಸ್ಯ ಎನ್.ಆರ್.ಪುರದ ಸದಾಶಿವ ಮಾತನಾಡಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್, ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಭಟ್, ಮುಖಂಡ ಪಿ.ಸಿ.ಜೋಯ್, ಎನ್.ಆರ್.ಪುರ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ ಮಾತನಾಡಿ, ‘ರಾಜೇಗೌಡ ಅವರ ವಿರುದ್ಧದ ಆರೋಪಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಡುತ್ತೇವೆ’ ಎಂದು ಹೇಳಿದರು.
ಎನ್.ಆರ್.ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರುಬೈಲ್ ನಟರಾಜ್, ಬಗರ್ ಹುಕುಂ ಸಮಿತಿ ಅಧ್ಯಕ್ಷ ಕೆ.ಜಿ.ಶೋಭಿಂತ್, ಎಪಿಎಂಸಿ ಅಧ್ಯಕ್ಷ ರಾಜೇಂದ್ರ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಾನಂದ ಸ್ವಾಮಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಜಿತ್ ದಂಡಿನಮಕ್ಕಿ, ಶೃಂಗೇರಿ ಕ್ಷೇತ್ರ ಘಟಕದ ಅಧ್ಯಕ್ಷ ದುರ್ಗಾ ಚರಣ್, ತಾಲ್ಲೂಕು ಘಟಕದ ಅಧ್ಯಕ್ಷ ವಿಜಯಾನಂದ, ಮುಖಂಡರಾದ ನುಗ್ಗಿ ಮಂಜುನಾಥ್, ಜೇಸುದಾಸ್, ನವೀನ್ ಮಾವಿನಕಟ್ಟೆ, ನವೀನ್ ಕರುವಾನೆ, ಪ್ರಿಯಾಂಕ ರಾಜೀವ್ ಭಾಗವಹಿಸಿದ್ದರು.
‘ನ್ಯಾಯಾಲಯದ ಮೂಲಕವೇ ಜನರಿಗೆ ಸತ್ಯ ಗೊತ್ತಾಗಲಿ’
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ ‘ಕ್ಷೇತ್ರಕ್ಕೆ ಕಪ್ಪುಚುಕ್ಕಿ ತರುವ ಕೆಲಸ ಮಾಡಿಲ್ಲ. ಜನರಿಗೆ ಸತ್ಯಕ್ಕೆ ನ್ಯಾಯಕ್ಕೆ ಹತ್ತಿರವಾಗಿದ್ದೇವೆ. ಬಿಜೆಪಿಗರು ನಮ್ಮ ಕುಟುಂಬದ ಮೇಲೆ ನಿರಂತರ ಕಿರುಕುಳ ನೀಡಿದ್ದಾರೆ. ಪಕ್ಷದ ಕಾರ್ಯಕರ್ತರ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ಮಾಡಿಸಿದ್ದರು. ದಾಳಿ ವೇಳೆ ಅಧಿಕಾರಿಗಳಿಗೆ ಬಂದು ಹೋದ ಖರ್ಚು ಕೂಡ ಶೋಧ ವೇಳೆ ಸಿಗಲಿಲ್ಲ. ಮೈತುಂಬಾ ವಿಷ ದ್ವೇಷದ ರಾಜಕಾರಣ ಮಾಡಿಕೊಂಡು ಬರುತ್ತಿದ್ದಾರೆ’ ಎಂದು ದೂರಿದರು. ‘ಮೊದಲು ಅನುದಾನಕ್ಕೆ ತಡೆ ತಂದರು. ಗುತ್ತಿಗೆದಾರರು ಬೀದಿಗೆ ಬರುವಂತೆ ಮಾಡಿದರು. ಶಂಕರಾಚಾರ್ಯ ಪ್ರತಿಮೆ ಮೇಲೆ ಮುಸ್ಲಿಂ ಬಟ್ಟೆ ಹಾಕಿ ದ್ವೇಷ ರಾಜಕೀಯಕ್ಕೆ ಮುಂದಾದರು. ನಿರಂತರವಾಗಿ ಸುಳ್ಳನ್ನು ಪ್ರಚಾರ ಮಾಡಿದರು. ಸಿದ್ದಾರ್ಥ ಹೆಗ್ಡೆ ಮತ್ತು ನನ್ನ ನಡುವೆ ಅವಿನಾಭಾವ ಸಂಬಂಧ ಇತ್ತು. ಸಂಕಷ್ಟದ ಸಂದರ್ಭದಲ್ಲಿ ಆ ಕುಟುಂಬದ ಪರವಾಗಿ ನಿಂತೆ. ಈ ವಿಚಾರದಲ್ಲಿ ಮಾಳವಿಕ ಹೆಗ್ಡೆ ಸ್ಪಷ್ಟನೆ ನೀಡಿದರೂ ಲೋಕಾಯುಕ್ತಕ್ಕೆ ದೂರು ನೀಡಿದರು. ಯಾವುದೇ ಮಾನದಂಡ ಅನುಸರಿಸದೆ ಪ್ರಕರಣ ದಾಖಲಿಸಿದ್ದರು. ತಡೆಯಾಜ್ಞೆ ತರಲು ಅವಕಾಶ ಇತ್ತು. ಆದರೆ ನ್ಯಾಯಾಲಯದ ಮೂಲಕವೇ ಜನರಿಗೆ ಸತ್ಯ ಗೊತ್ತಾಗಲಿ ಎಂದು ಸುಮ್ಮನಾದೆ’ ಎಂದು ತಿಳಿಸಿದರು.
ಜೀವರಾಜ್ ಅವರು ದಲಿತರ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಮೊದಲು ಆ ಜಮೀನು ಬಿಟ್ಟುಕೊಡಲಿ.–ಸುಧೀರ್ ಕುಮಾರ್, ಮುರೊಳ್ಳಿ ಕೆಪಿಸಿಸಿ ವಕ್ತಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.