ADVERTISEMENT

ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್‌ ನೀಡಿ: ಮಹಡಿಮನೆ ಸತೀಶ್‌

ಕಾಂಗ್ರೆಸ್‌ ಜಿಲ್ಲಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಗೊಂದಲ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 7:11 IST
Last Updated 2 ಏಪ್ರಿಲ್ 2023, 7:11 IST
ಚಿಕ್ಕಮಗಳೂರಿನಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಮಹಡಿಮನೆ ಸತೀಶ್‌ ಮಾತನಾಡಿದರು.
ಚಿಕ್ಕಮಗಳೂರಿನಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಮಹಡಿಮನೆ ಸತೀಶ್‌ ಮಾತನಾಡಿದರು.   

ಚಿಕ್ಕಮಗಳೂರು: ಕಾಂಗ್ರೆಸ್‌ನಲ್ಲಿ ಹಲವು ವರ್ಷಗಳಿಂದ ದುಡಿದವರಿಗೆ ಟಿಕೆಟ್‌ ನೀಡಬೇಕು. ಈಚೆಗಷ್ಟೆ ಪಕ್ಷ ಸೇರಿರುವ ಎಚ್‌.ಡಿ.ತಮ್ಮಯ್ಯಗೆ ಮಣೆ ಹಾಕಿದರೆ, ಆತನ ವಿರುದ್ಧ ವಾಗಿ ಕೆಲಸ ಮಾಡಿ ಸೋಲಿಸುತ್ತೇನೆ’ ಎಂದು ಸಖರಾಯಪಟ್ಟಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಡಿಮನೆ ಸತೀಶ್‌ ಹೇಳಿದರು.

ನಗರದ ಕಾಂಗ್ರೆಸ್‌ ಜಿಲ್ಲಾ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವ ಆರು ಮಂದಿ ಪೈಕಿ ಯಾರಿಗೇ ಟಿಕೆಟ್‌ ನೀಡಿದರೂ ನಮ್ಮ ವಿರೋಧ ಇಲ್ಲ. ತಮ್ಮಯ್ಯ ಅವರು ಹಿಂದೆ ಬಿಜೆಪಿಯಲ್ಲಿದ್ದಾಗ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ’ ಎಂದು ದೂರಿದರು.

‘20 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದೇನೆ. ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದೇನೆ. ನಮ್ಮನ್ನು ಬಲಿಪಶು ಮಾಡುವ ಕೆಲಸ ನಡೆಯುತ್ತಿದೆ. ಗೊಡ್ಡು ಬೆದರಿಕೆಗಳಿಗೆಲ್ಲ ಜಗ್ಗಲ್ಲ. ತಮ್ಮಯ್ಯ ಅವರಿಗೆ ಟಿಕೆಟ್‌ ನೀಡಿದರೆ ಅವರ ವಿರುದ್ಧವಾಗಿ ಕೆಲಸ ಮಾಡುತ್ತೇನೆ’ ಎಂದು ಎಚ್ಚರಿಸಿದರು.

ADVERTISEMENT

‘ಪಕ್ಷದ ನಾಯಕರಾದ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಅವರು ಎಲ್ಲವನ್ನು ಗಮನಿಸಬೇಕು. ಪಕ್ಷ ನಿಷ್ಠರಿಗೆ ಟಿಕೆಟ್‌ ನೀಡಬೇಕು’ ಎಂದು ಒತ್ತಾಯಿಸಿದರು.

ಮತ್ತೊಬ್ಬ ಟಿಕೆಟ್‌ ಅರ್ಜಿದಾರ ಎ.ಎನ್‌.ಮಹೇಶ್‌ ಮಾತನಾಡಿ, ‘ತಮ್ಮಯ್ಯ ಅವರು ಅಧಿಕಾರದ ಆಸೆಯಿಂದ ಪಕ್ಷ ಸೇರಿದ್ದಾರೆ. ಆ ವ್ಯಕ್ತಿ ಹಿಂದೆ ಓಡುವುದು ಸರಿಯಲ್ಲ’ ಎಂದರು.

ಸಿ.ಎನ್‌.ಅಕ್ಮಲ್‌ ಮಾತನಾಡಿ, ‘ತಮ್ಮಯ್ಯ ಅವರು ಹಿಂದೆ ಕಾಂಗ್ರೆಸ್‌ ವಿರುದ್ಧ ಕೆಲಸ ಮಾಡಿದ್ದಾರೆ. ಅವರನ್ನು ಪರಿಗಣಿಸಬಾರದು’ ಎಂದರು.

ಮುಖಂಡರಾದ ಕೆ.ಮಹಮದ್‌, ಶಿವಾನಂದಸ್ವಾಮಿ, ಎಚ್‌.ಎಚ್‌.ದೇವರಾಜ್‌, ಎಂ.ಎಲ್‌.ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.