ADVERTISEMENT

ಮಾಜಿ ಸಚಿವ ಜೀವರಾಜ್ ಇನ್ನಿಲ್ಲದ ಕಿರುಕುಳ ನೀಡಿದರು: ಶಾಸಕ ಟಿ.ಡಿ.ರಾಜೇಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 6:59 IST
Last Updated 3 ಮಾರ್ಚ್ 2026, 6:59 IST
<div class="paragraphs"><p>ಜನಾಂದೋಲನ ಸಮಾವೇಶದಲ್ಲಿ ಅಂಗವಾಗಿ ಬಾಳೆಹೊನ್ನೂರಿನ ಜೆಸಿಐ ವೃತ್ತದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿದರು</p></div>

ಜನಾಂದೋಲನ ಸಮಾವೇಶದಲ್ಲಿ ಅಂಗವಾಗಿ ಬಾಳೆಹೊನ್ನೂರಿನ ಜೆಸಿಐ ವೃತ್ತದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿದರು

   

ಬಾಳೆಹೊನ್ನೂರು: ‘ನನ್ನ ಅಧಿಕಾರದ ಅವಧಿಯಲ್ಲಿ ಸರಿಯಾಗಿ ಕೆಲಸ ಮಾಡದಂತೆ ಹೊಟ್ಟೆಕಿಚ್ಚಿನಿಂದ ಮಾಜಿ ಸಚಿವ ಜೀವರಾಜ್ ಇನ್ನಿಲ್ಲದ ಕಿರುಕುಳ ನೀಡಿದರು’ ಎಂದು ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದರು.

ಪಟ್ಟಣದ ಜೇಸಿ ವೃತ್ತದಲ್ಲಿ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲ್ಲೂಕುಗಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಶೃಂಗೇರಿ ಕ್ಷೇತ್ರದ ರೈತರ ಕಾರ್ಮಿಕರ ಮತ್ತು ನೆಲವಾಸಿಗಳ ಸಮಸ್ಯೆ ಕುರಿತು ಜನಾಂದೋಲನ ಸಮಾವೇಶದಲ್ಲಿ ಅವರು ಮಾತನಾಡಿದರು. ‌

ADVERTISEMENT

‘ಅಧಿಕಾರ ಇದ್ದಾಗ ಏನೂ ಮಾಡದಿದ್ದ ಅವರು ರಾಜಕೀಯ ಕಾರ್ಯದರ್ಶಿಯಾಗಿದ್ದಾಗ ಕ್ಷೇತ್ರದ ಅಭಿವೃದ್ದಿಗೆ ಮಂಜೂರಾದ ಹಣವನ್ನು ಶಿಕಾರಿಪುರಕ್ಕೆ ವರ್ಗಾವಣೆ ಮಾಡಿ ಇಲ್ಲಿಗೆ ಬಿಡುಗಡೆಯಾಗದಂತೆ ತಡೆ ಹಿಡಿದರು. ಆದಾಯ ತೆರಿಗೆ ಅಧಿಕಾರಿಗಳ ಮೇಲೆ ಒತ್ತಡ ಹೇರಿ ದಾಳಿ ಮಾಡಿಸಿದರು. ನನ್ನ ವಿರುದ್ದ ಆರಂಭದಲ್ಲಿ ಭಿತ್ತಿಪತ್ರ ಹಂಚಿಕೆ, ಇ.ಡಿ.ದಾಳಿ ನಡೆಸಲಾಯಿತು. ಟೆಂಡರ್‌ದಾರರ ಬದುಕನ್ನು ಬೀದಿಗೆ ತಂದರು’ ಎಂದು ಆರೋಪಿಸಿದರು.

ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕೊಡಿಗೆ ರವೀಂದ್ರ ಮಾತನಾಡಿ, ‘ಇಷ್ಟೆಲ್ಲ ಆನೆ ದಾಳಿ ನಡೆದಿದ್ದರೂ ಸಂಸದರು ಕನಿಷ್ಠ ಒಂದು ಮನೆಗೂ ಭೇಟಿ ನೀಡಿ ಅಹವಾಲು ಆಲಿಸಿಲ್ಲ. ಕ್ಷೇತ್ರದಲ್ಲಿ ಗಟ್ಟಿಯಾಗಿ ಧ್ವನಿ ಎತ್ತುವ ಪಕ್ಷಾತೀತ ರೈತ ಸಂಘಟನೆ ಬೇಕು. ಅರಣ್ಯ ಇಲಾಖೆಯ ಮೇಲಿನ ಹಿಡಿತ ಕೇಂದ್ರ ಸರ್ಕಾರದಲ್ಲಿದ್ದು ಸಂಸದರು ಕಾಯ್ದೆ ತಿದ್ದುಪಡಿಗೆ ಒತ್ತಾಯಿಸಬೇಕು. ಒಂದು ತಿಂಗಳೊಳಗೆ ಸಭೆ ನಡೆಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಸದರು ಭಾಗವಹಿಸುವ ಕಾರ್ಯಕ್ರಮದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದರು.

ಆನೆ ದಾಳಿಯಿಂದ ಹ್ಯಾರಂಬಿಪುರದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರಿಗೆ ಕಾಂಗ್ರೆಸ್ ಕಾರ್ಯಕರ್ತರು ₹75 ಸಾವಿರ ನೀಡಿದರು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಂಶುಮಂತ್, ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಭಟ್, ನರಸಿಂಹರಾಜಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್ ಬೈಲ್ ನಟರಾಜ್, ಕೊಪ್ಪದ ವಕೀಲ ಸುಧೀರ್ ಕುಮಾರ್ ಮುರೊಳ್ಳಿ, ಹಿರಿಯಣ್ಣ, ಎಸ್.ಪೇಟೆ ಸತೀಶ್, ಇ.ಸಿ.ಜಾಯ್, ಯುವ ಕಾಂಗ್ರೆಸ್ ಕ್ಷೇತ್ರಾಧ್ಯಕ್ಷ ದುರ್ಗಾಚರಣ್, ಬಿ.ಎನ್.ಸೋಮೇಶ್, ಖಾಂಡ್ಯ ಹೋಬಳಿ ಅಧ್ಯಕ್ಷ ಬಿ.ಸಿ.ಮಂಜುನಾಥ್, ಎಚ್.ಎಂ.ಸತೀಶ್, ಓಣಿತೋಟ ರತ್ನಾಕರ್, ಸದಾಶಿವ, ಜುಬೇದಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.