ಚಿಕ್ಕಮಗಳೂರು: ಕಳೆದೊಂದು ವಾರದಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ಮಲೆನಾಡು ನಲುಗಿ ಹೋಗಿದೆ. ಕಾಫಿ, ಏಲಕ್ಕಿ, ಅಡಿಕೆ ಬೆಳೆಗಾರರು ರೋಸಿ ಹೋಗಿದ್ದು, ಬೆಳೆ ಸಂಸ್ಕರಣೆಗೆ ಪರದಾಡುತ್ತಿದ್ದಾರೆ.
ಕಾಫಿ ಬೆಳೆಗಾರರು ದಿನಕ್ಕೊಂದು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾಫಿಗೆ ಉತ್ತಮ ಬೆಲೆ ಬಂದಿದ್ದರೂ ಅದರ ಲಾಭ ರೈತರಿಗೆ ದೊರಕುತ್ತಿಲ್ಲ. ಈ ನಡುವೆ ಈ ವರ್ಷದ ಫಸಲು ಕಟಾವಿನ ಹಂತಕ್ಕೆ ಬಂದಿದ್ದರೂ ಸಂಸ್ಕರಣೆ ಸಾಧ್ಯವಾಗುತ್ತಿಲ್ಲ.
ಈ ಮಳೆಗೆ ರೊಬೊಸ್ಟಾ ಕಾಫಿಗಿಂತ ಅರೇಬಿಕಾ ಕಾಫಿ ಸಂಕಷ್ಟಕ್ಕೆ ಸಿಲುಕಿದೆ. ಈಗ ಕಾಯಿ ಹಣ್ಣಾಗುವ ಹಂತದಲ್ಲಿದ್ದು ಜೋರು ಮಳೆಗೆ ನೆಲಕ್ಕೆ ಉದುರಿ ಕೈಗೆ ಬಂದ ಫಲಸು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಚಿಕ್ಕಮಗಳೂರು, ಬಾಳೆಹೊನ್ನೂರು, ಆಲ್ದೂರು ಸುತ್ತಮುತ್ತ ಅರೇಬಿಕಾ ಬೆಳೆ ಜಾಸ್ತಿ ಇದ್ದು, ಬೆಳೆಗಾರರು ಕಷ್ಟಕ್ಕೆ ಸಿಲುಕಿದ್ದಾರೆ.
ಮಳೆಯಿಂದ ಅರೇಬಿಕಾ, ಕಾವೇರಿ ತಳಿಗಳು ಹೆಚ್ಚಾಗಿ ರೋಗಕ್ಕೆ ತುತ್ತಾಗುತ್ತಿವೆ. ರೋಬಸ್ಟಾ ತಳಿಗೆ ಉತ್ತಮ ಬೆಲೆ ಇದ್ದರೂ, ಫಸಲು ಇಲ್ಲವಾಗಿದೆ. ನಿರಂತರ ಮಳೆಯಿಂದ ಕಾಫಿ ತೋಟಗಳಲ್ಲಿ ತೇವಾಂಶ ಹೆಚ್ಚಿ, ಕಾಫಿ ಗಿಡಗಳಲ್ಲಿ ರೋಗ ಕಾಣಿಸಿಕೊಂಡಿದೆ.
ಕಾಳು ಮೆಣಸಿನ ಬಳ್ಳಿಗಳಲ್ಲೂ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ. ಎರಡು ದಿನಗಳಿಂದ ಮಳೆ ಮತ್ತಷ್ಟು ಜಾಸ್ತಿಯಾಗಿದ್ದು, ಇನ್ನಷ್ಟು ಬೆಳೆ ಹಾಳಾಗುವ ಅತಂಕ ರೈತರನ್ನು ಕಾಡುತ್ತಿದೆ.
ಬಯಲು ಸೀಮೆಯಲ್ಲಿ ರಾಗಿ ಬೆಳೆಗೆ ಮಳೆ ಅನುಕೂಲ ಮಾಡಿದೆ. ಕೆಲವೆಡೆ ಮೆಕ್ಕೆಜೋಳ ಕಟಾವು ಆರಂಭವಾಗಿದ್ದು, ಸಂಸ್ಕರಣೆ ಮಾಡಲಾಗದೆ ರೈತರು ಪರದಾಡುತ್ತಿದ್ದಾರೆ. ಕಟಾವಿಗೆ ಬಂದಿದ್ದರೂ, ನಿರಂತರ ಮಳೆಯಿಂದ ಕಟಾವು ಸಾಧ್ಯವಾಗಿಲ್ಲ. ಹಲವೆಡೆ ಕಟಾವು ಮಾಡಿ ಬಿಡಿಸಿರುವ ಜೋಳ ಒಣಗಿಸಲು ಆಗಿಲ್ಲ. ಇದರಿಂದಾಗಿ ಜೋಳದ ಕಾಳಿನಲ್ಲಿ ಮೊಳಕೆ ಕಾಣಿಸುತ್ತಿದ್ದು, ರೈತರು ಆತಂಕದಲ್ಲಿದ್ದಾರೆ.
ಪೂರಕ ಮಾಹಿತಿ: ರವಿ ಕೆಳಂಗಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.