ADVERTISEMENT

ಕಡೂರು ಸಾರ್ವಜನಿಕ ಆಸ್ಪತ್ರೆ ಪ್ರಯೋಗಾಲಯ ತಂತ್ರಜ್ಞ,4 ತಿಂಗಳಿಂದ ರಜೆ ಪಡೆಯದೆ ಕೆಲಸ

ಕಡೂರು ಸಾರ್ವಜನಿಕ ಆಸ್ಪತ್ರೆ ಪ್ರಯೋಗಾಲಯ ತಂತ್ರಜ್ಞ ಸುರೇಶ್

ಬಾಲು ಮಚ್ಚೇರಿ
Published 1 ಜುಲೈ 2020, 3:47 IST
Last Updated 1 ಜುಲೈ 2020, 3:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಕಡೂರು: ಕೊರೊನಾ ವೈರಸ್‌ ಸೋಂಕಿನ ಆತಂಕದ ನಡುವೆಯೇ ಕೊರೊನಾ ವಾರಿಯರ್ಸ್ಸ್‌ಗಳ ಸೇವಾ ಕಾರ್ಯ ಶ್ಲಾಘನೀಯ.

ಆರೋಗ್ಯ ಇಲಾಖೆಯ ಸಿಬ್ಬಂದಿಯಂತೂ ಪ್ರಾಣ ಒತ್ತೆಯಿಟ್ಟು ಕೆಲಸ ಮಾಡುತ್ತಿದ್ದಾರೆ. ಕಡೂರು ಸಾರ್ವಜನಿಕ ಆಸ್ಪತ್ರೆಯ ಪ್ರಯೋಗಾಲಯ ತಂತ್ರಜ್ಞ ಸುರೇಶ್ ಅವರು ನಾಲ್ಕು ತಿಂಗಳಿನಿಂದ ಒಂದು ದಿನವೂ ರಜೆ ಪಡೆಯದೆ ಕೊರೊನಾ ಶಂಕಿತರ ಗಂಟಲು ಮತ್ತು ಮೂಗಿನ ದ್ರವ ಮಾದರಿ ತೆಗೆಯುವುದರಲ್ಲಿ ನಿರತರಾಗಿದ್ದಾರೆ.

ತಂತ್ರಜ್ಞ ಸುರೇಶ್

ಸುರೇಶ್‌ ಅವರು ಈವರೆಗೆ 976 ಮಂದಿಯ ಗಂಟಲ ದ್ರವ ಮಾದರಿ ಸಂಗ್ರಹಿಸಿದ್ದಾರೆ. 4 ತಿಂಗಳ ಹಸುಗೂಸಿನಿಂದ ಹಿಡಿದು 82 ವರ್ಷದ ವೃದ್ಧರ ಮಾದರಿ ಸಂಗ್ರಹ ಮಾಡಿದ್ದಾರೆ. ಕೊರೊನಾ ಪಾಸಿಟಿವ್ ಇದ್ದವರ, ಪ್ರಾಥಮಿಕ ಸಂಪರ್ಕದಲ್ಲಿದ್ದವರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ADVERTISEMENT

‘ಕಡೂ‍ರಿನ ಗ್ರಾಮವೊಂದರಲ್ಲಿ ವೃದ್ಧರೊಬ್ಬರು ಕೋವಿಡ್‌ನಿಂದ ಮೃತಪಟ್ಟರು. ಅವರ ಸಂಬಂಧಿಕರು ತಾವೇ ಸ್ವಪ್ರೇರಿತರಾಗಿಮೃತರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲು ಕೋರಿದ್ದರು. ಶವದ ಹತ್ತಿರ ಹೆಚ್ಚು ಜನ ಸೇರದೆ ನಾವುಹೋಗುವ ತನಕ ಕಾದಿದ್ದರು. ಮೃತರಿಗೆ ಕೋವಿಡ್‌ ಇದ್ದ ಪಕ್ಷದಲ್ಲಿ ಬೇರೆಯವರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ದುಃಖದಲ್ಲೂ ಪರೀಕ್ಷೆ ಮಾಡಲು ಕೋರಿದ್ದು ಮಾನವೀಯತೆಯ ಪ್ರತೀಕವೆನಿಸಿತು. ಮೃತದೇಹದ ಗಂಟಲು ದ್ರವ ಪಡೆದದ್ದು ಜಿಲ್ಲೆಯಲ್ಲಿ ಇದೇ ಮೊದಲ ಪ್ರಕರಣ. ನಿಜಕ್ಕೂ ಈ ಸಂದರ್ಭ ಸಂಕಟದ ಸ್ಥಿತಿಯಾಗಿತ್ತು’ ಎನ್ನುತ್ತಾರೆ ಸುರೇಶ್.

‘ಪ್ರತಿದಿನ ಬೆಳಿಗ್ಗೆ 10.30ಕ್ಕೆಪಿಪಿಇ ಕಿಟ್ ಧರಿಸಿದರೆ ಸಂಜೆ ನಾಲ್ಕೂವರೆ ತನಕ ಅದರೊಳಗೇ ಅನಿವಾರ್ಯವಾಗಿ ಇರಬೇಕು. ಸೆಖೆ-ಬೆವರು ಕಿತ್ತು ಬರುತ್ತದೆ. ನೀರು ಸಹ ಕುಡಿಯಲು ಅವಕಾಶವಿಲ್ಲ. ಸರಾಗ ಉಸಿರಾಟಕ್ಕೂ ತೊಂದರೆಯಿರುತ್ತದೆ. ಆದರೆ, ಕರ್ತವ್ಯದ ಕಡೆ ಗಮನವಿರುವುದರಿಂದ ಇದಾವುದೂ ತಿಳಿಯುವುದಿಲ್ಲ. ಇದಲ್ಲದೆ, ಪೊಲೀಸರು ವಿಚಾರಣಾಧೀನ ಕೈದಿಗಳನ್ನು ಜೈಲಿಗೆ ಕಳುಹಿಸುವ ಮೊದಲು ಅವರಗಂಟಲು ದ್ರವ ಪಡೆದಿದ್ದೊಂದು ವಿಭಿನ್ನ ಅನುಭವ. ಪ್ರತಿಯೊಂದು ರೀತಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದರಿಂದ ನಮ್ಮ ಸುರಕ್ಷತೆಯ ಬಗ್ಗೆ ಹೆಚ್ಚು ಯೋಚಿಸುವ ಅಗತ್ಯವಿಲ್ಲ.

ಈ ಎಲ್ಲ ಕೆಲಸಗಳಿಗೆ ನಮ್ಮ ಪ್ರಯೋಗಾಲಯ ಸಹಾಯಕರಾದ ಕಾವ್ಯಶ್ರೀ, ಶ್ವೇತಾ, ಮಲ್ಲಿಕ್, ಈಶ್ವರ್ ಸಹಕಾರ ನೀಡುತ್ತಿದ್ದಾರೆ. ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ದೀಪಕ್ ಹಾಗೂ ಮತ್ತಿತರ ವೈದ್ಯರು ಮಾರ್ಗದರ್ಶನ ನೀಡುತ್ತಾರೆ’ ಎನ್ನುತ್ತಾರೆ ಸುರೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.