ADVERTISEMENT

ಕೊರೊನಾ ಲಗ್ಗೆ: ಎಚ್ಚರಿಕೆ ಘಂಟೆ

ಹಸಿರು ವಲಯದಲ್ಲಿದ್ದ ಕಾಫಿನಾಡಿನಲ್ಲಿ ಐವರಿಗೆ ಕೋವಿಡ್‌ ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಮೇ 2020, 16:17 IST
Last Updated 19 ಮೇ 2020, 16:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಮಗಳೂರು: ಕಾಫಿನಾಡಿಗೆ ಮಂಗಳವಾರ ಕೊರೊನಾ ಲಗ್ಗೆ ಇಟ್ಟಿದೆ. ಹಸಿರು ವಲಯದಲ್ಲಿದ್ದೇವೆ ಎಂದು ಬೀಗುತ್ತಿದ್ದ ಜಿಲ್ಲೆಯ ಜನತೆಗೆ ಸಂಕಷ್ಟ ತಂದೊಡ್ಡಿ, ಎಚ್ಚರಿಕೆಯ ಘಂಟೆ ಬಾರಿಸಿದೆ.

ಒಂದೇ ದಿನ ಐವರಿಗೆ ಸೋಂಕು ಪತ್ತೆಯಾಗಿದೆ. ಮಹಾಮಾರಿ ವಕ್ಕಿಸಿರುವುದು ಭೀತಿಗೆ ಎಡೆಮಾಡಿದೆ. ನಿಯಂತ್ರಣ ನಿಟ್ಟಿನಲ್ಲಿ ಮಾರ್ಗಸೂಚಿಗಳ ಪಾಲನೆಗೆ ಬಿಗಿ ಕ್ರಮ, ಎಚ್ಚರಿಕೆ ‘ಮಂತ್ರ ಪಠಣ’ ಶುರುವಾಗಿದೆ.

ಕೋವಿಡ್‌ ಪತ್ತೆಗೆ ಪ್ರಯೋಗಾಲ ಇಲ್ಲ: ಕೊರೊನಾ ವೈರಾಣು ಪತ್ತೆ ನಿಟ್ಟಿನಲ್ಲಿ ಗಂಟಲ ದ್ರವ, ರಕ್ತ ಪರೀಕ್ಷೆಗೆ ಜಿಲ್ಲೆಯಲ್ಲಿ ಪ್ರಯೋಗಾಲಯ ಇಲ್ಲ. ಮಾದರಿಗಳನ್ನು ಪರೀಕ್ಷೆಗೆ ಹಾಸನ, ಶಿವಮೊಗ್ಗಕ್ಕೆ ಕಳಿಸಬೇಕು. ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಇರುವುದು ಮೂರು ವೆಂಟಿಲೇಟರ್‌ಗಳು ಮಾತ್ರ ಇವೆ.

ADVERTISEMENT

‘ಇತರ ಜಿಲ್ಲೆಗಳಲ್ಲಿ ಸ್ಥಾಪಿಸಿರುವಂತೆ ನಮ್ಮ ಜಿಲ್ಲೆಯಲ್ಲಿಯೂ ಪ್ರಯೋಗಾಲಯ ಸ್ಥಾಪಿಸಲು ಕ್ರಮ ವಹಿಸಬೇಕು. ನಾಲ್ಕೈದು ವೆಂಟಿಲೇಟರ್‌ಗಳನ್ನು ತರಿಸಲು ಜಿಲ್ಲಾಡಳಿತ ತ್ವರಿತವಾಗಿ ಕ್ರಮ ವಹಿಸಬೇಕು’ ಎಂದು ನಗರದ ಸ್ಪಂದನ ಕ್ಲಿನಿಕ್‌ನ ಡಾ.ಸಂತೋಷ್‌ ನೇತಾ ಒತ್ತಾಯಿಸುತ್ತಾರೆ.

‘ಹೊರಜಿಲ್ಲೆ, ಹೊರ ರಾಜ್ಯಗಳಿಂದ ಬಂದವರ ಕ್ವಾರಂಟೈನ್‌ ನಿಟ್ಟಿನಲ್ಲಿ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಬೇಕು. ಅಂತರ ಪಾಲನೆ, ಮುಖಗವಸು ಧಾರಣೆ ಇತ್ಯಾದಿ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು’ ಎಂದು ಅವರು ಹೇಳುತ್ತಾರೆ.

ಪಕ್ಕದ ಶಿವಮೊಗ್ಗ, ಹಾಸನ, ಮಂಗಳೂರು ಮೊದಲಾದ ಜಿಲ್ಲೆಗಳಲ್ಲಿ ವೈದ್ಯಕೀಯ ವಿಜ್ಞಾನ ಕಾಲೇಜುಗಳು ಇವೆ. ಅಲ್ಲಿ ಅತ್ಯಾಧುನಿಕ ಸೌಕರ್ಯಗಳು ಇವೆ. ಆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಸೌಕರ್ಯಗಳು ಕಡಿಮೆ ಇವೆ. ‘ಎಚ್ಚರಾಯ ನಮಃ’ಕ್ಕೆ ಒತ್ತು ನೀಡಿ ಕೊರೊನಾ ಹರಡದಂತೆ ಜಿಲ್ಲಾಡಳಿತ ವಹಿಸಬೇಕು. ಜನರು ಸ್ಪಂದಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಯೊಬ್ಬರು ಒತ್ತಾಯಿಸುತ್ತಾರೆ.

ಐವರಿಗೂ ಚಿಕ್ಕಮಗಳೂರಿನಲ್ಲಿ ಚಿಕಿತ್ಸೆ
ಮೂಡಿಗೆರೆ ತಾಲ್ಲೂಕಿನ ನಂದಿಪುರದ ಆಸ್ಪತ್ರೆಯ ವೈದ್ಯಾಧಿಕಾರಿ(43), ತರೀಕೆರೆಯ ಗರ್ಭಿಣಿ (27), ಕೊಪ್ಪದ ಕ್ವಾರಂಟೈನ್‌ ಕೇಂದ್ರದಲ್ಲಿದ್ದ ಏಳು ವರ್ಷ ಮತ್ತು 10 ವರ್ಷದ ಇಬ್ಬರು ಬಾಲಕರು, ಯವತಿಗೆ(17) ಮಂಗಳವಾರ ಕೋವಿಡ್‌ ಪತ್ತೆಯಾಗಿದೆ.

‘ಚಿಕ್ಕಮಗಳೂರಿನಲ್ಲಿ ಕೋವಿಡ್‌ ಚಿಕಿತ್ಸೆ ನಿಟ್ಟಿನಲ್ಲಿ ಪತ್ಯೇಕ ಘಟಕ ಇದೆ. ಸೋಂಕು ಪತ್ತೆಯಾಗಿರುವ ಐವರಿಗೂ ಇಲ್ಲಿಯೇ ಚಿಕಿತ್ಸೆ ನೀಡುತ್ತೇವೆ’ ಎಂದು ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಸಿ.ಮೋಹನ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ವೈದ್ಯಾಧಿಕಾರಿ ಬೆಂಗಳೂರು, ಕೊಡಗಿನಲ್ಲಿ ಸಂಚಾರ
ಕೋವಿಡ್‌ ಪತ್ತೆಯಾಗಿರುವ ಮೂಡಿಗೆರೆಯ ವೈದ್ಯಾಧಿಕಾರಿ ಬೆಂಗಳೂರು, ಕೊಡಗು ಇತರೆಡೆಗಳಲ್ಲಿ ಸಂಚರಿಸಿದ್ದಾರೆ.ಅವರು ಕಾರ್ಯನಿರ್ವಹಿಸುವ ಆಸ್ಪತ್ರೆಯಲ್ಲಿ ಹಲವು ರೋಗಿಗಳಿಗೆ ಪರೀಕ್ಷೆ ಮಾಡಿದ್ದಾರೆ. ತರೀಕೆರೆ ಮಹಿಳೆ ಎಲ್ಲಿಗೂ ಪ್ರವಾಸ ಮಾಡಿದಂತಿಲ್ಲ. ಕೊಪ್ಪದ ಕ್ವಾರಂಟೈನ್‌ ಕೇಂದ್ರದಲ್ಲಿದ್ದ ಮೂವರೂ ಎನ್‌.ಆರ್‌.ಪುರ ತಾಲ್ಲೂಕಿನ ಸೀತೂರು ಪಂಚಾಯಿತಿ ವ್ಯಾಪ್ತಿಯ ಕೆರೆಗದ್ದೆ ಗ್ರಾಮದವರು. ಮುಂಬೈನಿಂದ ಮರಳಿ ಕ್ವಾರಂಟೈನ್‌ನಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.