ADVERTISEMENT

ಚಿಕ್ಕಮಗಳೂರು: 23 ಮಂದಿಗೆ ಕೋವಿಡ್‌ ದೃಢ

ಬೆಂಗಳೂರಿನಿಂದ ಬಂದಿದ್ದ ಮಹಿಳೆ ಸಾವು– ಒಟ್ಟು ಪ್ರಕರಣ 123ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 16:14 IST
Last Updated 8 ಜುಲೈ 2020, 16:14 IST

ಚಿಕ್ಕಮಗಳೂರು: ಬೆಂಗಳೂರಿನಿಂದ ಉಪ್ಪಳ್ಳಿಗೆ ಬಂದಿದ್ದ 52 ವರ್ಷದ ಮಹಿಳೆಯೊಬ್ಬರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಕಾಫಿನಾಡಿನಲ್ಲಿ ವಿಧಾನ ಪರಿಷತ್‌ ಸದಸ್ಯರೊಬ್ಬರು ಸಹಿತ 23 ಮಂದಿಗೆ ಬುಧವಾರ ಕೋವಿಡ್‌ ದೃಢಪಟ್ಟಿದೆ. 16 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಮಹಿಳೆಗೆ ತೀವ್ರ ಉಸಿರಾಟ ಸಮಸ್ಯೆಯಾಗಿ ಸೋಮವಾರ ರಾತ್ರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಕೆಲ ಹೊತ್ತಿನಲ್ಲೇ ಅವರು ಮೃತಪಟ್ಟಿದ್ದಾರೆ.

‘ಮೃತದೇಹದಿಂದ ಗಂಟಲು, ಮೂಗಿನ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಕೋವಿಡ್‌ ದೃಢಪಟ್ಟಿದೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್‌.ಕೆ.ಮಂಜುನಾಥ್‌ ತಿಳಿಸಿದ್ದಾರೆ.

ADVERTISEMENT

ಚಿಕ್ಕಮಗಳೂರಿನ ದೋಣಿಕಣದಲ್ಲಿ ಏಳು ಮಂದಿಗೆ, ಕಲ್ಯಾಣನಗರದ ಒಬ್ಬರಿಗೆ, ಕೋಟೆಯ ಒಬ್ಬರಿಗೆ, ಹೊಸಮನೆ ಬಡಾವಣೆಯ ಒಬ್ಬರಿಗೆ, ಬೆಳವಾಡಿಯ ಒಬ್ಬರಿಗೆ (ಬೆಂಗಳೂರಿನಿಂದ ಬಂದವರು) , ಉಪ್ಪಳ್ಳಿಯ ಒಬ್ಬರಿಗೆ (ಬೆಂಗಳೂರಿನಿಂದ ಬಂದವರು), ಕಡೂರು ತಾಲ್ಲೂಕು ಚಿಕ್ಕದೇವನೂರಿನ ಇಬ್ಬರಿಗೆ, ಕಡೂರು ತಾಲ್ಲೂಕಿನ ತಿಮ್ಲಾಪುರ–ಪಂಚನಹಳ್ಳಿಯ ಮೂವರಿಗೆ, ಕೆ.ಎಂ.ರಸ್ತೆ ಭಾಗದ ಇಬ್ಬರಿಗೆ, ಕೆವಿ ಕಾಲೊನಿಯ ಒಬ್ಬರಿಗೆ, ಕೊಪ್ಪ ತಾಲ್ಲೂಕಿನ ಹುಲ್ಮಗಿಯ ಒಬ್ಬರಿಗೆ, ಅಜ್ಜಂಪುರದ ಅಂಬೇಡ್ಕರ್‌ ಬಡಾವಣೆಯ ಒಬ್ಬರಿಗೆ, ಎನ್‌.ಆರ್‌.ತಾಲ್ಲೂಕಿನ ಮೆಣಸೂರಿನ ಒಬ್ಬರಿಗೆ (ಹರಿಯಾಣದಿಂದ ಬಂದವರು) ಸೋಂಕು ದೃಢಪಟ್ಟಿದೆ. ಇವರನ್ನು ದೃಢಪಟ್ಟವರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋವಿಡ್‌ ಪತ್ತೆಯಾಗಿರುವ ವಿಧಾನ ಪರಿಷತ್‌ ಸದಸ್ಯರೊಬ್ಬರು ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

23 ಮಂದಿ ಪೈಕಿ 17 ಮಂದಿಗೆ ಕೋವಿಡ್‌ ಇದ್ದವರ ಪ್ರಾಥಮಿಕ ಸಂಪರ್ಕದಿಂದ ತಗುಲಿದೆ. ಕಾಫಿನಾಡಿನಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳು 54 ಇವೆ. ಈವರೆಗಿನ ಒಟ್ಟು ಪ್ರಕರಣಗಳು ಸಂಖ್ಯೆ 123ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.