ADVERTISEMENT

ಕೋವಿಡ್‌: ಬೆಚ್ಚದಿರಿ, ಆತ್ಮಸ್ಥೈರ್ಯ ಜಯದ ಅಸ್ತ್ರ

ಕೋವಿಡ್‌ನಿಂದ ಗುಣಮುಖರಾದ ವಿಧಾನ ಪರಿಷತ್‌ ಸದಸ್ಯ ಪ್ರಾಣೇಶ್‌

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 16:34 IST
Last Updated 17 ಜುಲೈ 2020, 16:34 IST
ಪ್ರಾಣೇಶ್‌ ಎಂ.ಕೆ.
ಪ್ರಾಣೇಶ್‌ ಎಂ.ಕೆ.   

ಚಿಕ್ಕಮಗಳೂರು: ‘ಕೋವಿಡ್‌ಗೆ ಬೆಚ್ಚಿ ಬೀಳಬೇಕಾದ ಪ್ರಮೇಯ ಇಲ್ಲ. ಅದೂ ಒಂದು ಕಾಯಿಲೆ, ಚಿಕಿತ್ಸೆಯಿಂದ ವಾಸಿಯಾಗುತ್ತದೆ. ಕೋವಿಡ್‌ ಜಯಿಸಲು ಆತ್ಮಸ್ಥೈರ್ಯ ಮಹಾಮಂತ್ರ’ ಎಂಬುದು ಕೋವಿಡ್‌ನಿಂದ ಗುಣಮುಖರಾಗಿರುವ ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ಕಿವಿಮಾತು.

ನಗರದ ಸರ್ಕಾರಿ ಆಸ್ಪತ್ರೆಯಲ್ಲಿ 12 ದಿನ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಈಗ ತೋಟದ ಮನೆಯಲ್ಲಿದ್ದಾರೆ. ಕೋವಿಡ್‌ ಅನುಭವ ಕುರಿತು ‘ಪ್ರಜಾವಾಣಿ’ಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.

‘ಟೈಫಾಯ್ಡ್‌, ಫ್ಲೂ, ಮಲೇರಿಯಾಗಳಿಗಿಂತ ಕೋವಿಡ್‌ ದೊಡ್ಡ ಕಾಯಿಲೆಯಲ್ಲ. ಕೊರೊನಾ ವಾರಿಯರ್ಸ್‌ ಧೈರ್ಯ ತುಂಬಿ, ವಾತ್ಸಲ್ಯದಿಂದ ಆರೈಕೆ ಮಾಡಿದರು. ಚಿಕಿತ್ಸೆ ನೀಡಿ ಗುಣಪಡಿಸಿದರು. ಆಸ್ಪತ್ರೆಯಲ್ಲಿ 12 ದಿನವೂ ಆರಾಮಾಗಿ ಇದ್ದೆ’ ಎಂದು ಅನುಭವ ಬಿಚ್ಚಿಟ್ಟರು.

ADVERTISEMENT

‘ಖಾಸಗಿ ಆಸ್ಪತ್ರೆಗೆ ದಾಖಲಾಗುವಂತೆ ಕೆಲವರು ಸಲಹೆ ನೀಡಿದ್ದರು. ಆದರೆ, ಸರ್ಕಾರಿ ಆಸ್ಪತ್ರೆಗೇ ದಾಖಲಾದೆ. ವಾರ್ಡ್‌ಗಳನ್ನು ನೀಟಾಗಿ ಇಟ್ಟಿದ್ದಾರೆ. ರೋಗಿಗಳೊಂದಿಗೆ ವೈದ್ಯರು, ಸಿಬ್ಬಂದಿ ತಾಳ್ಮೆಯಿಂದ ನಡೆದುಕೊಳ್ಳುತ್ತಾರೆ. ಜಿಲ್ಲಾ ಸರ್ಜನ್‌ ಡಾ.ಸಿ.ಮೋಹನ್‌ ಕುಮಾರ್‌, ತಜ್ಞವೈದ್ಯರಾದ ಶ್ರೀನಿವಾಸ್‌, ವಿನಯ್‌, ಸೌಮ್ಯಾ ಸುನೀಲ್‌ ಮೊದಲಾದವರು ಚಿಕಿತ್ಸೆ ನೀಡುತ್ತಾರೆ. ರೋಗಿಗಳನ್ನು ಮುಟ್ಟಿ ಪರೀಕ್ಷಿಸುತ್ತಾರೆ. ಚಿಕಿತ್ಸೆ ಜತೆಗೆ ಆತ್ಮವಿಶ್ವಾಸ ತುಂಬುತ್ತಾರೆ. ಕೊರೊನಾ ವಾರಿಯರ್ಸ್‌ಗಳೇ ನಿಜವಾದ ದೇವರು, ಅವರಿಗೆ ನಾವೆಲ್ಲರೂ ಕೈಮುಗಿಯಬೇಕು’ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

‘ವಿಟಮಿನ್‌, ತಲೆನೋವು, ಜ್ವರ ಮಾತ್ರೆಗಳನ್ನು ಕೊಟ್ಟರು. ಪ್ರತಿರೋಧಕ ಶಕ್ತಿ ಹೆಚ್ಚಿಸುವ ಔಷಧಗಳನ್ನ ನೀಡಿದರು. ಆಸ್ಪತ್ರೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಕಾಫಿ/ ಚಹಾ ನೀಡುತ್ತಾರೆ. ಇಡ್ಲಿ, ವಡೆ, ಉಪ್ಪಿಟ್ಟು ಮೊದಲಾದ ಉಪಹಾರ ನೀಡುತ್ತಾರೆ. ಮಧ್ಯಾಹ್ನ ಮತ್ತು ರಾತ್ರಿ ಊಟ (ಚಪ್ಪಾತಿ, ಅನ್ನ, ಸಂಬಾರು...) ನೀಡುತ್ತಾರೆ. ಕೋಳಿ ಮೊಟ್ಟೆಯನ್ನೂ ನೀಡುತ್ತಾರೆ. ಬೆಡ್‌ಗಳನ್ನು ಚೊಕ್ಕವಾಗಿ ಇಟ್ಟಿದ್ದಾರೆ’ ಎಂದು ಶ್ಲಾಘಿಸಿದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಆಸ್ಪತ್ರೆಯಲ್ಲಿನ ವ್ಯವಸ್ಥೆ, ಚಟುವಟಿಕೆ ಬಗ್ಗೆ ನಿಗಾ ವಹಿಸಿದ್ದಾರೆ. ಕೋವಿಡ್‌ ಅನ್ನು ದೊಡ್ಡದಾಗಿ ಬಿಂಬಿಸುವ ಕೆಲಸವನ್ನು ಯಾರೂ ಮಾಡಬಾರದು. ಆದರೆ, ಕೋವಿಡ್‌ ಬಗ್ಗೆ ಉಪೇಕ್ಷೆ ಸಲ್ಲದು, ಜಾಗೃತರಾಗಿರಬೇಕು. ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು, ಅಂತರ ಕಾಪಾಡಬೇಕು ಎಂಬದು ಅವರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.