ADVERTISEMENT

ಮೂವರ ಬಂಧನ; ನಗದು, ಕಾರು ವಶ

ಚಿನ್ನದ ನಾಣ್ಯ ತೋರಿಸಿ, ತಾಮ್ರದ ನಾಣ್ಯ ಕೊಟ್ಟು ವಂಚನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2022, 4:12 IST
Last Updated 16 ಅಕ್ಟೋಬರ್ 2022, 4:12 IST
ವಶಪಡಿಸಿಕೊಂಡಿರುವ ನಗದು, ಮೊಬೈಲ್‌ಪೋನ್‌ಗಳು, ನಾಣ್ಯಗಳು.
ವಶಪಡಿಸಿಕೊಂಡಿರುವ ನಗದು, ಮೊಬೈಲ್‌ಪೋನ್‌ಗಳು, ನಾಣ್ಯಗಳು.   

ಚಿಕ್ಕಮಗಳೂರು: ನಗರದ ವ್ಯಕ್ತಿಯೊಬ್ಬರಿಗೆ ಚಿನ್ನದ ನಾಣ್ಯ ತೋರಿಸಿ ನಂತರ ತಾಮ್ರದ ನಾಣ್ಯ ಕೊಟ್ಟು ಫೋನ್‌ ಪೇ ಮೂಲಕ ₹ 5 ಸಾವಿರ ಪಾವತಿಸಿಕೊಂಡು ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ನಗದು, ವಾಹನ, ನಾಣ್ಯ, ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಜಯನಗರದ ಜಿಲ್ಲೆಯ ಹರಪ್ಪನಹಳ್ಳಿ ಶ್ರೀನಿವಾಸ ನಾಯ್ಕ ಅಲಿಯಾಸ್‌ ಸೀನಾ (21), ಕೋಟಿ ನಾಯ್ಕ ಅಲಿಯಾಸ್‌ ಕೋಟೇಶ್ ನಾಯ್ಕ (28), ವೆಂಕಟೇಶ ನಾಯ್ಕ, (20) ಬಂಧಿತರು. ₹ 5 ಸಾವಿರ ನಗದು, ಎರಡು ಚಿನ್ನದ ನಾಣ್ಯ, 1.95 ಕೆ.ಜಿ ತ್ರಾಮದ ನಾಣ್ಯಗಳು, ಮೂರು ಮೊಬೈಲ್ ಫೋನ್, ಕಾರು ವಶಪಡಿಸಿಕೊಳ್ಳಲಾಗಿದೆ.
ಏನಿದು ಪ್ರಕರಣ?: ಎಸ್ಟೇಟ್‌ವೊಂದರಲ್ಲಿ ಹರಪ್ಪನಹಳ್ಳಿಯ ಶ್ರೀನಿವಾಸ ನಾಯ್ಕ ಮತ್ತು ನಗರದ ಕೆ.ಮಹೇಶ್‌ ಅವರಿಗೆ ಪರಿಚಯವಾಗಿತ್ತು.

ಮಹೇಶ್‌ ಅವರಿಗೆ ಶ್ರೀನಿವಾಸ ನಾಯ್ಕ ಈಚೆಗೆ ಫೋನ್‌ ಮಾಡಿ 2 ಕೆ.ಜಿ ಚಿನ್ನದ ನಾಣ್ಯಗಳು ಇವೆ, ಕಡಿಮೆ ಬೆಲೆ ₹ 5 ಲಕ್ಷ ಕೊಡುತ್ತೇನೆ ಎಂದು ಪುಸಲಾಯಿಸಿದ್ದಾರೆ. ಮೂವರು ಕಾರಿನಲ್ಲಿ ಚಿಕ್ಕಮಗಳೂರಿಗೆ ಬಂದು ಎರಡು ಚಿನ್ನದ ನಾಣ್ಯಗಳನ್ನು ಮಹೇಶ್‌ಗೆ ಕೊಟ್ಟು ಅಸಲಿಯುತ್ತು ಪರಿಶೀಲಿಸುವಂತೆ ತಿಳಿಸಿದ್ದಾರೆ. ಪರಿಶೀಲಿಸಿದಾಗ ಅಸಲಿ ಎಂದು ಖಾತರಿಯಾಗಿದೆ. ಮಹೇಶ್‌ ಅವರಿಗೆ 20 ನಾಣ್ಯಗಳನ್ನು ಕೊಟ್ಟು ಗೂಗಲ್‌ ಪೇ ಮೂಲಕ ₹ 5 ಸಾವಿರ ಪಾವತಿಸಿಕೊಂಡು ಆ ಮೂವರು ಹೋಗಿದ್ದಾರೆ. ಮಹೇಶ್‌ ಅವರು 20 ನಾಣ್ಯಗಳನ್ನು ಅಕ್ಕಸಾಗಲಿಗರಿಗೆ ಕೊಟ್ಟು ಪರೀಕ್ಷೆ ಮಾಡಿಸಿದಾಗ. ಅವು ತಾಮ್ರದ ನಾಣ್ಯಗಳು ಎಂದು ಗೊತ್ತಾಗಿದೆ. ಸಿಇಎನ್‌ (ಸೈಬರ್‌, ಆರ್ಥಿಕ ಅಪರಾಧ, ಮಾದಕ) ಠಾಣೆಯಲ್ಲಿ ದೂರು ದಾಖಲಾಗಿತ್ತು. ಇನ್‌ಸ್ಪೆಕ್ಟರ್‌ ಮುತ್ತುರಾಜ್‌, ಪಿಎಸ್‌ಐ ನಾಸೀರ್ ಹುಸೇನ್ ಮತ್ತು ತಂಡ ಕಾರ್ಯಾಚರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT