ಕಡೂರು: ರೈತರು ತಮ್ಮ ಬೆಳೆಗಳನ್ನು ತಾವೇ ನೋಂದಾಯಿಸಿಕೊಳ್ಳುವ ಜತೆಗೆ ವಿಮೆ ಪರಿಹಾರ ಸೇರಿದಂತೆ ಸರ್ಕಾರದ ಸೌಲಭ್ಯ ಪಡೆಯಲು ನೆರವಾಗುವಂತೆ ಬೆಳೆ ಸಮೀಕ್ಷೆಗೆ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಲಾಗಿದೆ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಅಶೋಕ್ ಮಾಹಿತಿ ನೀಡಿದರು.
2025-26ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ರೈತರು ಸ್ವತಃ ತಮ್ಮ ಜಮೀನುಗಳಲ್ಲಿನ ಬೆಳೆ ಸಮೀಕ್ಷೆ ಮಾಡಿ, ಪಹಣಿಯಲ್ಲಿ ನೋಂದಾಯಿಸಬಹುದಾಗಿದೆ. ರೈತರು ತಮ್ಮ ಮೊಬೈಲ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ‘Kharif crop survey –25’ ಡೌನ್‌ಲೋಡ್ ಮಾಡಿಕೊಳ್ಳಿ, ಕಳೆದ ಬಾರಿ ಡೌನ್‌ಲೋಡ್ ಮಾಡಿದ್ದರೆ ಅಪ್‌ಡೇಟ್ ಮಾಡಿಕೊಳ್ಳಿ ಎಂದರು.
ಸರ್ಕಾರ ಬೆಳೆ ವಿಮೆ, ಬರ, ಅತಿವೃಷ್ಟಿಯಂತಹ ಹಾನಿಗಳಿಗೆ ಪರಿಹಾರ ಒದಗಿಸುವ ಜತೆಗೆ ಬೆಂಬಲ ಬೆಲೆ ಯೋಜನೆಯಡಿ ಧಾನ್ಯಗಳ ಮಾರಾಟ, ಬ್ಯಾಂಕ್ ಸಾಲ ಇತ್ಯಾದಿಗಳಿಗೆ ಬೆಳೆ ಸಮೀಕ್ಷೆಯನ್ನು ಕಡ್ಡಾಯಗೊಳಿಸಿದ್ದು, ಬೆಳೆ ಸಮೀಕ್ಷೆ ದತ್ತಾಂಶದಿಂದ ಮಾಹಿತಿ ಪಡೆಯಲಿದೆ. ಆದ್ದರಿಂದ ಎಲ್ಲಾ ರೈತರು ತಪ್ಪದೆ ಬೆಳೆ ಸಮೀಕ್ಷೆ ಕೈಗೊಳ್ಳಬೇಕು. ರೈತರು ತಮ್ಮ ಜಮೀನಿನಲ್ಲಿ ನಿಂತು ಆಧಾರ್ ಸಂಖ್ಯೆ ನಮೂದಿಸಿ ಒಟಿಪಿ ಪಡೆದು ದೃಢಿಕರಿಸಬೇಕು. ಹೆಸರು, ಹುಟ್ಟಿದ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆ ನಮೂದಿಸಬೇಕು. ಎಫ್‌ಐಡಿ, ಪಹಣಿಗೂ ಆಧಾರ್ ಲಿಂಕ್ ಆಗಿರುವುದರಿಂದ ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿ, ಸೂಕ್ತ ಹಿಸ್ಸಾ ದಾಖಲಿಸಿ, ಬೆಳೆ ವಿವರ, ಬಿತ್ತನೆ ಮಾಡಿದ ದಿನಾಂಕ, ನೀರಾವರಿ ಅಥವಾ ಮಳೆಯ ಆಶ್ರಿತ ಎಂಬುದನ್ನು ದಾಖಲಿಸಬೇಕು. ನಂತರ ಬೆಳೆಯ ಚಿತ್ರವನ್ನು ತೆಗೆದು ಅಪ್‌ಲೋಡ್ ಮಾಡಬೇಕು ಎಂದರು.
ಬೆಳೆ ದರ್ಶಕ್‌ನಲ್ಲಿ ವೀಕ್ಷಣೆಗೆ ರೈತರಿಗೆ ಅವಕಾಶ ಇದೆ. ಬೆಳೆ ಸಮೀಕ್ಷೆಯಾದ ನಂತರ ದಾಖಲಾದ ಬೆಳೆಗಳ ವಿವರವನ್ನು ‘ಬೆಳೆ ದರ್ಶಕ್’ ಆ್ಯಪ್‌ನಲ್ಲಿ ವೀಕ್ಷಿಸಬಹುದು. ಇದನ್ನೂ ಸಹ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ತಪ್ಪಾಗಿ ನಮೂದಿಸಿದ್ದರೆ ಆ್ಯಪ್‌ನಲ್ಲೇ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುತ್ತದೆ. ಗ್ರಾಮ ಆಡಳಿತಾಧಿಕಾರಿ ಆಕ್ಷೇಪಣೆಯನ್ನು ಪರಿಶೀಲಿಸಿ, ಮರು ಸಮೀಕ್ಷೆಗೆ ಸೂಚಿಸುತ್ತಾರೆ ಎಂಬ ಮಾಹಿತಿ ನೀಡಿದರು.
ತಾವೇ ಬೆಳೆ ಸಮೀಕ್ಷೆ ಕೈಗೊಳ್ಳಲು ಸಾಧ್ಯವಾಗದಿದ್ದಲ್ಲಿ ನಿಮ್ಮ ಗ್ರಾಮಕ್ಕೆ ನಿಯೋಜಿಸಿರುವ ಖಾಸಗಿ ನಿವಾಸಿಗಳನ್ನು ಸಂಪರ್ಕಿಸಿ, ಬೆಳೆ ಸಮೀಕ್ಷೆ ಮಾಡಿಸಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಸೂಚಿಸಿದೆ. ಹೆಚ್ಚಿನ ಮಾಹಿತಿಗೆ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಅಶೋಕ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.