ADVERTISEMENT

ಸಿ.ಟಿ. ರವಿ ಹೇಳಿಕೆ ತಿರುಚಿದ್ದಾರೆ: ದೇವರಾಜ್‌ ಶೆಟ್ಟಿ

ಸವಿತಾ ಸಮಾಜವನ್ನು ಅವಮಾನಿಸುವ ಪದ ಬಳಕೆ ಮಾಡಿಲ್ಲ: ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 5:44 IST
Last Updated 30 ಅಕ್ಟೋಬರ್ 2025, 5:44 IST
ಎಂ.ಆರ್.ದೇವರಾಜಶೆಟ್ಟಿ
ಎಂ.ಆರ್.ದೇವರಾಜಶೆಟ್ಟಿ   

ಚಿಕ್ಕಮಗಳೂರು: ಸಿ.ಟಿ.ರವಿ ಅವರ ಜನಪ್ರಿಯತೆ ಮತ್ತು ಜನಪರ ಕಾಳಜಿ ಸಹಿಸದ ಕಾಂಗ್ರೆಸ್‌ ಮುಖಂಡರು ಅವರ ಹೇಳಿಕೆಯನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್. ದೇವರಾಜಶೆಟ್ಟಿ ಹೇಳಿದರು.

‘ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸುವ ಸಂದರ್ಭದಲ್ಲಿ ಕಾಲೇಜಿನ ಡೀನ್ ಗೈರಾಗಿದ್ದರು. ಅವರ ವಿರುದ್ಧ ದೂರವಾಣಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಸಿ.ಟಿ.ರವಿ ಅವರ ಮಾತುಗಳನ್ನು ಸವಿತಾ ಸಮಾಜಕ್ಕೆ ಅವಮಾನಕರವಾಗಿ ಮಾತನಾಡಿದ್ದಾರೆ ಎಂಬಂತೆ ತಿರುಚಿ ವಿಡಿಯೊ ಹರಿಬಿಟ್ಟಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಹೇಳಿದರು.

ನಿಷೇಧಿತ ಪದ ಬಳಕೆ ಮಾಡಿದ್ದಾರೆ ಎಂಬುದು ಸುಳ್ಳು. ಅವರ ಭೇಟಿ ವೇಳೆ ಡೀನ್‌ ಅವರನ್ನು ತಮ್ಮ ಮನೆಯಲ್ಲಿ ಕೂರಿಸಿಕೊಂಡಿದ್ದವರೇ ಈ ರೀತಿ ತಿರುಚಿ ವಿಡಿಯೊ ಹರಿಬಿಡಿಸಿದ್ದಾರೆ ಎಂದರು.

ADVERTISEMENT

ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಮುಖ್ಯಮಂತ್ರಿ ಬದಲಾವಣೆ ಮತ್ತು ಮಂತ್ರಿಮಂಡಲ ಪುನರ್ ರಚನೆಯ ಗುಂಗಿನಲ್ಲಿ ಕಾಂಗ್ರೆಸ್ ಸಚಿವರು ಮತ್ತು ಶಾಸಕರು ಇದ್ದಾರೆ. ರಾಜ್ಯದ ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆ ಮರೆತಿದ್ದಾರೆ ಎಂದು ಹೇಳಿದರು.

ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಜಸಂತಾ ಅನಿಲಕುಮಾರ್ ಮಾತನಾಡಿ, ‘ಕರ್ನಾಟಕ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ, ಹಲ್ಲೆ, ಕೊಲೆ ಪ್ರಕರಣಗಳು ಹೆಚ್ಚಾಗಿವೆ’ ಎಂದರು.

ರಾಜ್ಯದಲ್ಲಿ 65ಕ್ಕೂ ಹೆಚ್ಚು ಮಹಿಳೆಯರ ಹತ್ಯೆಯಾಗಿದೆ. ಹುಬ್ಬಳ್ಳಿಯ ನೇಹಾ ಹಿರೇಮರ್, ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಯಾದಗಿರಿ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. 1,300ಕ್ಕಿಂತ ಹೆಚ್ಚು ಮಹಿಳಾ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಮೈಸೂರಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಬೆಂಗಳೂರಿನಲ್ಲಿ ಗ್ಯಾಂಗ್ ರೇಪ್, ಕಾಲೇಜು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಸೇರಿ ಹಲವಾರು ಪ್ರಕರಣಗಳು ದಾಖಲಾಗಿವೆ. ಗೃಹ ಸಚಿವರು ಕಣ್ಣು ಮುಚ್ಚಿ ಕುಳಿತಿರುವುದು ವಿಪರ್ಯಾಸ ಎಂದರು.

ರಾಜ್ಯ ಸರ್ಕಾರದ ಕಮಿಷನ್ ಕಾಟಕ್ಕೆ 7 ಅಧಿಕಾರಿಗಳು ಹಾಗೂ 20ಕ್ಕೂ ಹೆಚ್ಚು ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಸರ್ಕಾರದ ಒತ್ತಡದಿಂದ 6 ಜನ ಪ್ರಾಣ ತೆತ್ತಿದ್ದಾರೆ. 15ಕ್ಕಿಂತ ಹೆಚ್ಚು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದು, ದಯಾಮರಣ ಕೇಳಿ ಗುತ್ತಿಗೆದಾರರು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಪುಷ್ಪರಾಜ್, ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಮುಖಂಡರಾದ ವೀಣಾ, ಕವಿತಾ ಶೇಖರ್, ಪ್ರೀತಿ ಯೋಗೇಶ್, ರಾಜೇಶ್ವರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.