ತರೀಕೆರೆ: ‘ಕಂದಾಯ ಮತ್ತು ಅರಣ್ಯ ಇಲಾಖೆ ನಡುವೆ ಇರುವ ದಲಿತರ ಸಮಸ್ಯೆಗಳನ್ನು ಬಗೆಹರಿಸಲು ಪ್ರತ್ಯೇಕವಾಗಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಕಾನೂನಾತ್ಮಕ ಸಮಸ್ಯೆ ಇತ್ಯರ್ಥಪಡಿಸಲು ಕ್ರಮ ವಹಿಸಲಾಗುವುದು’ ಎಂದು ಉಪವಿಭಾಗಾಧಿಕಾರಿ ಎನ್.ವಿ.ನಟೇಶ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಉಪವಿಭಾಗೀಯ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜಾಗೃತಿ ಉಸ್ತುವಾರಿ ಸಮಿತಿ ಮತ್ತು ಸಫಾಯಿ ಕರ್ಮಚಾರಿ ಮತ್ತು ಅದರ ಪುನರ್ವಸತಿ ವಸತಿ ಕಾಯ್ದೆಯ ವಿಜಿಲೆನ್ಸ್ ಸಮಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಗೆಹರಿಸಬಹುದಾದ ಹಲವು ಸಮಸ್ಯೆಗಳು ದೀರ್ಘ ಕಾಲದಿಂದ ಅನುಪಾಲನಾ ವರದಿಯಲ್ಲಿ ಪುನರಾವರ್ತನೆಯಾಗುತ್ತಿವೆ. ಇದು ಮುಂದುವರಿಯುವುದು ಬೇಡ. ಅಧಿಕಾರಿಗಳು ಸೂಕ್ತ ಮಾಹಿತಿಯೊಂದಿಗೆ ಸಭೆಗೆ ಬರಬೇಕು. ಬೇಜವಾಬ್ದಾರಿಯ ಉತ್ತರ ನೀಡಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ದಲಿತ ಮುಖಂಡ ಎಚ್.ವಿ.ಬಾಲರಾಜ್ ಮಾತನಾಡಿ, ಎರಡು ವರ್ಷಗಳಿಂದಲೂ ಋಷಿಪುರ ಗ್ರಾಮದ ಸ.ನಂ. 6ರಲ್ಲಿ ಇರುವ ನಕಾಶೆ ಕಂಡ ದಾರಿಯನ್ನು ಬಿಡಿಸಿಕೊಡಿ ಎಂದು ಪ್ರಸ್ತಾಪ ಮಾಡಿಕೊಂಡು ಬಂದಿದ್ದರೂ ಇದುವರೆಗೂ ಒತ್ತುವರಿದಾರರನ್ನು ತೆರವುಗೊಳಿಸಿಲ್ಲ ಎಂದರು. ತರೀಕೆರೆ ತಹಶೀಲ್ದಾರ್ ವಿಶ್ವಜೀತ್ ಮೇಹತಾ, ಕೆಲವೇ ದಿನಗಳಲ್ಲಿ ತೆರವುಗೊಳಿಸುವುದಾಗಿ ಭರವಸೆ ನೀಡಿದರು.
ಮುಖಂಡ ಎಸ್.ಕೆ.ಸ್ವಾಮಿ ಮಾತನಾಡಿ, ಪಟ್ಟಣದ ಸುಂದರೇಶ್ ಬಡಾವಣೆಯಲ್ಲಿ ರಸ್ತೆ ಮೇಲೆ ಗಲೀಜು ನೀರು ಹರಿಯುತ್ತಿದೆ. ಪುರಸಭೆ ಆಡಳಿತ ಗಮನಹರಿಸಬೇಕು ಎಂದರು.
ಮುಖಂಡ ನೇರಲಕೆರೆ ಓಂಕಾರಪ್ಪ ಮಾತನಾಡಿ, ಕಾಟಾಚಾರಕ್ಕೆ ಸಭೆ ನಡೆಸಲಾಗುತ್ತಿದೆ. ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಮುಂದಿನ ದಿನಗಳಲ್ಲಿ ಇದೇ ಧೋರಣೆ ಮುಂದುವರಿದರೆ ಸಭೆಯನ್ನು ಬಹಿಷ್ಕರಿಸಲಾಗುವುದು ಎಂದರು.
ಡಿಎಸ್‌ಎಸ್ ರಾಜ್ಯ ಘಟಕದ ಸಂಚಾಲಕ ಎನ್.ವೆಂಕಟೇಶ್ ಮಾತನಾಡಿ, ಬಾವಿಕೆರೆಯಿಂದ 9 ಕುಟುಂಬಗಳನ್ನು ಅರಸಿಕೆರೆ ಕಾವಲು ಗ್ರಾಮಕ್ಕೆ ಸ್ಥಳಾಂತರಿಸಿದ್ದು, ಅವರಿಗೆ ಇದುವರೆಗೂ ನಿವೇಶನ ಹಕ್ಕುಪತ್ರ ನೀಡಿಲ್ಲ. ಕೂಡಲೇ ಹಕ್ಕುಪತ್ರ ವಿತರಿಸಲು ಕ್ರಮಕೈಗೊಳ್ಳಬೇಕು ಎಂದರು.
ಡಿವೈಎಸ್‌ಪಿ ಎಚ್.ಪರಶುರಾಮಪ್ಪ, ತಾ.ಪಂ. ಇಒಗಳಾದ ತರೀಕೆರೆಯ ಆರ್.ದೇವೇಂದ್ರಪ್ಪ, ಅಜ್ಜಂಪುರದ ವಿಜಯಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ತರೀಕೆರೆಯ ಮಂಜುನಾಥ್, ಕಡೂರಿನ ನಟರಾಜ್, ನರಸಿಂಹರಾಜಪುರದ ಪಾಟೀಲ್, ಸಮಿತಿ ಸದಸ್ಯರಾದ ಎಸ್.ಎನ್.ಸಿದ್ದರಾಮಪ್ಪ, ನಾಗರಾಜ್, ರಾಮು, ಮುಖಂಡರಾದ ಜಿ.ಟಿ.ರಮೇಶ್, ವೈ.ಎಸ್. ಮಂಜಪ್ಪ, ಶಿವರಾಜ್, ರಘು, ಶಂಕರನಾಯ್ಕ, ಸುನೀಲ್, ರಾಮಚಂದ್ರ, ರಾಜಪ್ಪ, ಟಿ.ಎಸ್. ಬಸವರಾಜ್, ಮಂಜುನಾಥ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.