
ಮೂಡಿಗೆರೆ: ದತ್ತ ಜಯಂತಿ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಡಿ. 2 ರಂದು ಪಟ್ಟಣದಲ್ಲಿ ಸಂಜೆ 4 ಗಂಟೆಗೆ ದತ್ತಮಾಲಾ ಸಂಕೀರ್ತನಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಸುದೇವ್ ಗುತ್ತಿ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ದತ್ತ ಜಯಂತಿ ಅಂಗವಾಗಿ ಬುಧವಾರ ಬೆಳಿಗ್ಗೆ ಪಟ್ಟಣದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ 60ಕ್ಕೂ ಅಧಿಕ ಮಂದಿ ದತ್ತ ಮಾಲೆ ಧರಿಸಿದ್ದು, ತಾಲ್ಲೂಕಿನಲ್ಲಿ ಸುಮಾರು 1 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ದತ್ತ ಮಾಲೆ ಧರಿಸಲಿದ್ದಾರೆ ಎಂದರು
ಡಿ.2 ರಂದು ಗಂಗನಮಕ್ಕಿ ಗಣಪತಿ ದೇವಸ್ಥಾನದಿಂದ ಶ್ರೀ ವೇಣು ಗೋಪಾಲಸ್ವಾಮಿ ದೇವಸ್ಥಾನದ ವರೆಗೆ ಬೈಕ್ ಜಾಥಾದ ಮೂಲಕ ಮೆರವಣಿಗೆ ನಡೆಸಿ, ಬಳಿಕ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ದತ್ತಮಾಲಾ ಸಂಕೀರ್ತನಾ ಸಭೆ ನಡೆಯಲಿದೆ. ಸಭೆಯಲ್ಲಿ ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹಾಗೂ ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಪಾಲ್ಗೊಳ್ಳಲಿದ್ದಾರೆ.. ಈ ಕಾರ್ಯಕ್ರಮಕ್ಕೆ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
'ದತ್ತ ಜಯಂತಿ ಸಂದರ್ಭದಲ್ಲಿ ನಾವು ಭಕ್ತಿ ಮಾರ್ಗದಿಂದ ದತ್ತಪೀಠಕ್ಕೆ ತೆರಳುತ್ತೇವೆ ಹೊರತು, ಯಾರಿಗೂ ತೊಂದರೆ ಕೊಡುವ ಮನೋಭಾವ ಯಾರಲ್ಲೂ ಇಲ್ಲ. ಆದರೆ ಹಿಂದೂ ಸಂಘಟನೆಗಳ ಮೇಲೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಲು ಕಳೆದ 4 ವರ್ಷಗಳಿಂದ ರಾಜ್ಯ ಸರ್ಕಾರ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ತೊಂದರೆ ಮಾಡುತ್ತಿದೆ. ಬಂದ್ ಮಾಡುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಕೈ ಬಿಡಬೇಕು' ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಪ್ರಶಾಂತ್ ಹಂಡುಗುಳಿ, ಭಜರಂಗದಳ ತಾಲ್ಲೂಕು ಸಂಯೋಜಕ ಸಂತೋಷ್, ಸಹ ಸಂಯೋಜಕ ಪ್ರಣಿತ್, ಜಿಲ್ಲಾ ಗೋರಕ್ಷಾ ಪ್ರಮುಖ್ ಅಜಿತ್ ಜೇನುಬೈಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.