
ಚಿಕ್ಕಮಗಳೂರು: ದತ್ತಪೀಠ ಸೇವಾ ಸಮಿತಿ ಹೆಸರಿನಲ್ಲಿ ಇದೇ ಮೊದಲ ಬಾರಿಗೆ ದತ್ತಮಾಲ ಅಭಿಯಾನ ಆರಂಭಗೊಂಡಿದೆ. ನಗರದ ಶಂಕರಮಠದಲ್ಲಿ ಭಕ್ತರು ಗುರುವಾರ ಮಾಲೆ ಧಾರಣೆ ಮಾಡಿದರು.
ಶ್ರೀರಾಮ ಸೇನೆಯಿಂದ ನವೆಂಬರ್‌ನಲ್ಲಿ ಅಭಿಯಾನ ನಡೆಯುತ್ತಿತ್ತು. ಡಿಸೆಂಬರ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ದತ್ತ ಜಯಂತಿ ನಡೆಸಲಾಗುತ್ತಿತ್ತು.
ಈ ಮೂರು ಸಂಘಟನೆಗಳು ಒಟ್ಟಾಗಿ ನಡೆಸಲು ಉದ್ದೇಶಿಸಿದ್ದು, ಶ್ರೀರಾಮ ಸೇನೆಯಲ್ಲಿದ್ದ ಮುಖಂಡರೇ ದತ್ತಪೀಠ ಸೇವಾ ಸಮಿತಿ ಹೆಸರಿನಲ್ಲಿ ಅಭಿಯಾನ ಆರಂಭಿಸಿದ್ದಾರೆ. ಗುರುವಾರ ಮಾಲೆ ಧಾರಣೆ ಮಾಡಿದ್ದು, ನ.31 ರಂದು ದತ್ತ ದೀಪೋತ್ಸವ ನಡೆಯಲಿದೆ.
ನ. 1ರಂದು ಪಡಿ ಸಂಗ್ರಹ, ನ. 2ರಂದು ದತ್ತ ಪಾದುಕೆ ದರ್ಶನ ಕಾರ್ಯಕ್ರಮ ನಡೆಸಲಾಗುವುದು. ಹಲವು ವರ್ಗಗಳಿಂದ ನಡೆದಿರುವ ಕಾರ್ಯಕ್ರಮ ನಿಲ್ಲಬಾರದು ಎಂಬ ಕಾರಣಕ್ಕೆ ನಡೆಸಲಾಗುತ್ತಿದೆ ಎಂದು ಸೇವಾ ಸಮಿತಿ ಮುಖ್ಯಸ್ಥ ರಂಜಿತ್ ಶೆಟ್ಟಿ ತಿಳಿಸಿದರು.
ರಾಜ್ಯದ ಎಲ್ಲೆಡೆಯಿಂದ ಭಕ್ತರು ಬರಲಿದ್ದಾರೆ. ನ. 2ರಂದು ದತ್ತಪೀಠದಲ್ಲಿ ಪಾದುಕೆ ದರ್ಶನ ಮತ್ತು ಹೋಮ- ಹವನಗಳು ನಡೆಯಲಿವೆ ಎಂದು ಸೇವಾ ಸಮಿತಿ ಮುಖಂಡ ಯೋಗಿ ಸಂಜಿತ್ ಸುವರ್ಣ ತಿಳಿಸಿದರು.
ದತ್ತಮಾಲೆ ಧಾರಣೆ ಕಾರ್ಯಕ್ರಮದಲ್ಲಿ ಮುಖಂಡರಾದ ನರಸಿಂಹಮೂರ್ತಿ, ರಾಜೇಂದ್ರಕುಮಾರ್ ಭಾಗವಹಿಸಿದ್ದರು.
ಹೋಮಕ್ಕೆ ಅವಕಾಶ ಇಲ್ಲ: ಜಿಲ್ಲಾಧಿಕಾರಿ
ದತ್ತ ಪಾದುಕೆ ದರ್ಶನಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ, ಆ ವ್ಯಾಪ್ತಿಯಲ್ಲಿ ಹೋಮ- ಹವನಕ್ಕೆ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.
ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಭೇಟಿ ನೀಡಲು ಎಲ್ಲರಿಗೂ ಮುಕ್ತ ಅವಕಾಶ ಇದೆ. ಮಾಲೆ ಧಾರಣೆ ಮಾಡಿ ಬಂದವರೂ ದರ್ಶನ ಮಾಡಿ ಹೋಗಬಹುದು ಎಂದರು.
ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಗಳಿಗೆ ಅವಕಾಶ ಇದೆ. ಯಾವುದೇ ಹೊಸ ಆಚರಣೆಗಳಿಗೆ ಅವಕಾಶ ಇಲ್ಲ ಎಂದು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.
ಶ್ರೀರಾಮ ಸೇನೆ ನೋಂದಾಯಿತ ಸಂಸ್ಥೆ. ಹಲವು ವರ್ಷಗಳಿಂದ ಅಭಿಯಾನ ನಡೆಸಿದೆ. ಈಗ ದತ್ತ ಮಾಲೆ ಅಭಿಯಾನ ನಡೆಸಲು ಹೊರಟಿರುವ ಸಮಿತಿ ನೋಂದಣಿಯಾಗಿರುವ ಮಾಹಿತಿ ಒದಗಿಸಿಲ್ಲ. ಇದರ ಜೊತೆಗೆ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ಯಾವುದೇ ಹೊಸ ಆಚರಣೆಗೆ ಅನುಮತಿ ನೀಡುವುದಿಲ್ಲ ಎಂದರು.
ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆ ಕಲ್ಪಿಸಬೇಕು: ಸಿ.ಟಿ.ರವಿ ಬರುವ ಭಕ್ತರು ತಮ್ಮ ಭಕ್ತಿಯ ಭಾವನೆ ಪ್ರಕಟಿಸಲು ಬೇಕಿರುವ ಎಲ್ಲಾ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು. ಮಾಲೆ ಧಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಎಲ್ಲಾ ಹಿಂದೂ ಸಂಘಟನೆಗಳು ಸೇರಿ ಒಟ್ಟಾಗಿಯೇ ದತ್ತ ಜಯಂತಿ ಆಚರಿಸಲು ಹೇಳಿದ್ದಾರೆ ಎಂಬ ಮಾಹಿತಿ ಬಂದಿದೆ. ಇದು ಉತ್ತಮವಾದ ನಿರ್ಧಾರ ಎಂದರು. ಪ್ರಮೋದ್ ಮುತಾಲಿಕ್ ಅವರು ನಮ್ಮ ವಿಚಾರ ಪರಿವಾರದ ಹಿರಿಯರು. ಹಿಂದೂ ಸಂಘಟನೆಗಳನ್ನು ಒಗ್ಗೂಡಿಸುವ ನಿರ್ಧಾರ ಸೂಕ್ತವಾದುದು. ಅವರು ಬಯಸಿದರೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು. ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಪದ್ಧತಿ ನಿಲ್ಲಿಸಬಾರದು ಎಂಬ ಕಾರಣಕ್ಕೆ ರಂಜಿತ್ ಶೆಟ್ಟಿ ಮತ್ತು ಸ್ನೇಹಿತರು ಮುಂದಾಗಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.