ADVERTISEMENT

ದತ್ತ ಜಯಂತ್ಯುತ್ಸವ; ಮಾಲಾಧಾರಣೆ ಕೈಂಕರ್ಯ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 12:33 IST
Last Updated 1 ಡಿಸೆಂಬರ್ 2019, 12:33 IST
ಚಿಕ್ಕಮಗಳೂರಿನ ಕಾಮಧೇನು ಮಹಾಶಕ್ತಿ ಗಣಪತಿ ದೇಗುಲ ಆವರಣದಲ್ಲಿ ದತ್ತಭಕ್ತರು ಭಜನೆ ಮಾಡಿದರು.
ಚಿಕ್ಕಮಗಳೂರಿನ ಕಾಮಧೇನು ಮಹಾಶಕ್ತಿ ಗಣಪತಿ ದೇಗುಲ ಆವರಣದಲ್ಲಿ ದತ್ತಭಕ್ತರು ಭಜನೆ ಮಾಡಿದರು.   

ಚಿಕ್ಕಮಗಳೂರು: ನಗರದ ರತ್ನಗಿರಿ ರಸ್ತೆಯ ಕಾಮಧೇನು ಮಹಾಶಕ್ತಿ ಗಣಪತಿ ದೇಗುಲದಲ್ಲಿ ದತ್ತ ಭಕ್ತರಿಗೆ ಮಾಲಾಧಾರಣೆ ಕೈಂಕರ್ಯ ಭಾನುವಾರ ನೆರವೇರಿತು.

ಅರ್ಚಕ ರಘು ಅವಧಾನಿ ಪೂಜೆ ನೆರವೇರಿಸಿದರು. ಬೆಳಿಗ್ಗೆ 10.30ರ ಹೊತ್ತಿಗೆ ಮಾಲಾ ಧಾರಣೆ ಕೈಂಕರ್ಯ ನಡೆಯಿತು. 60ಕ್ಕೂ ಹೆಚ್ಚು ಭಕ್ತರು ಮಾಲೆ ಧರಿಸಿದರು. ಈ ಬಾರಿಯ ದತ್ತ ಜಯಂತ್ಯುತ್ಸವ ಅಭಿಯಾನ ಈ ಕೈಂಕರ್ಯದೊಂದಿಗೆ ವಿಧ್ಯುಕ್ತವಾಗಿ ಮೊದಲ್ಗೊಂಡಿದೆ.

ದೇಗುಲ ಆವರಣದಲ್ಲಿ ಭಕ್ತರು ಭಜನೆ ಮಾಡಿದರು. ಶ್ರೀಗುರುದತ್ತಾತ್ರೇಯ ಸ್ವಾಮಿ ನಾಮಸ್ಮರಣೆ ಮಾಡಿದರು. ಬಜರಂಗದಳ, ವಿಶ್ವಹಿಂದು ಪರಿಷತ್‌ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ADVERTISEMENT

ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ ರಘು ಸಕಲೇಶಪುರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದ ವಿವಿಧೆಡೆ ಭಕ್ತರು ಮಾಲೆ ಧಾರಣೆ ಮಾಡಿದ್ದಾರೆ. ಗಿರಿಯಲ್ಲಿ ಹೋಮದ ಸ್ಥಳವನ್ನು ಬದಲಾಯಿಸಿ ಪೀಠದ ಎದುರಿನ ತುಳಸಿ ಕಟ್ಟೆ ಮುಂದೆ ಹೋಮ ನೇರವೇರಿಸಲು ಅವಕಾಶ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ. ತೀರ್ಥ ಬಾವಿಗೆ ಮತ್ತೆ ಚಾಲನೆ ನೀಡಬೇಕು ಎಂದೂ ಕೇಳಿಕೊಂಡಿದ್ದೇವೆ’ ಎಂದು ತಿಳಿಸಿದರು.

‘ದತ್ತಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದೇವೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಭೇಟಿ ಮಾಡಿ ಒತ್ತಾಯ ಹೇರುತ್ತೇವೆ. ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ಮಾಡುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ವಿಎಚ್‌ಪಿ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಎ.ಶಿವಶಂಕರ್‌, ‘ಸ್ಕಂದ ಪಂಚಮಿ ದಿನ ಮಾಲೆ ಧರಿಸಿ ವ್ರತ ಶುರು ಮಾಡಿದ್ದೇವೆ. ಇದೇ 10ರಂದು ನಗರದಲ್ಲಿ ಅನಸೂಯಾ ಜಯಂತಿ, 11 ರಂದು ಶೋಭಾಯಾತ್ರೆ, 12ರಂದು ಗಿರಿಯಲ್ಲಿ ದತ್ತಪಾದುಕೆ ದರ್ಶನ ಜರುಗಲಿದೆ’ ಎಂದರು.

ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಯೋಗೀಶರಾಜ್‌ ಅರಸ್‌ ಮಾತನಾಡಿ, ‘ಮುಖ್ಯಮಂತ್ರಿಯವರು ಶಾಖಾದ್ರಿಯೊಂದಿಗೆ ಮಾತುಕತೆ ನಡೆಸಿ ದತ್ತಪೀಠದ ಜಾಗದ ಸಮಸ್ಯೆ ಇತ್ಯರ್ಥಗೊಳಿಸಬೇಕು ಎಂಬುದು ನಮ್ಮ ಆಗ್ರಹ.’ ಎಂದರು.

ಮುಖಂಡರಾದ ತುಡಕೂರು ಮಂಜು, ಮಧುಕುಮಾರ್‌ ಅರಸ್‌ , ಶಶಿ ಆಲ್ದೂರು, ರಂಗನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.