ADVERTISEMENT

ಹೈಕೋರ್ಟ್‌ನಿಂದ ತಡೆಯಾಜ್ಞೆ: ಭೋಜೇಗೌಡ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 5:59 IST
Last Updated 2 ಅಕ್ಟೋಬರ್ 2020, 5:59 IST
Bhoje Gowda
Bhoje Gowda   

ಚಿಕ್ಕಮಗಳೂರು: ‘ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ ಚುನಾವಣೆಯಲ್ಲಿ ಚಿಕ್ಕಮಗಳೂರು ತಾಲ್ಲೂಕು ಸಹಕಾರ ಸಂಘಗಳ (ಪ್ಯಾಕ್ಸ್‌) ಪರವಾಗಿನ ಎರಡು ಸ್ಥಾನ ಮತ್ತು ಕೊಪ್ಪ ತಾಲ್ಲೂಕು ಪ್ಯಾಕ್ಸ್‌ನ ಒಂದು ಸ್ಥಾನಕ್ಕೆ ಆಯ್ಕೆಯಾಗಿರುವ ಮೂವರು ನಿರ್ದೇಶಕರಿಗೆ ಆಡಳಿತ ಮಂಡಳಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಹೈಕೋರ್ಟ್‌ ಗುರುವಾರ ತಡೆಯಾಜ್ಞೆ ನೀಡಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ತಿಳಿಸಿದ್ದಾರೆ.

‘ಪ್ರಜಾವಾಣಿ’ಯೊಂದಿಗೆ ಅವರು ಮಾತನಾಡಿ, ‘ಚಿಕ್ಕಮಗಳೂರು ತಾಲ್ಲೂಕು ಪ್ಯಾಕ್ಸ್‌ನ 10 ಮತ್ತು ಕೊಪ್ಪ ತಾಲ್ಲೂಕು ಪ್ಯಾಕ್ಸ್‌ನ ಎರಡು ಮಂದಿಯನ್ನು ಮತಪಟ್ಟಿಯಿಂದ ಅನರ್ಹಗೊಳಿಸಿರುವುದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಕೈಗೆತ್ತಿಕೊಂಡಿದೆ. ಈ ಮೂವರು ಯಾವುದೇ ಕಾರ್ಯಭಾರ ನಿರ್ವಹಿಸುವಂತಿಲ್ಲ ಸೂಚಿಸಿದೆ’ ಎಂದು ಅವರು ತಿಳಿಸಿದ್ದಾರೆ.

‘ಸಹಕಾರ ಸಂಘಗಳ ಸಹಾಯಕ ರಿಜಿಸ್ಟ್ರಾರ್‌ (ಎಆರ್‌ಸಿಎಸ್‌) ಅವರು 12 ಮಂದಿಯನ್ನು ಮತಪಟ್ಟಿಯಿಂದ ಅನರ್ಹಗೊಳಿಸಿರುವ ಕ್ರಮದ ಬಗ್ಗೆ ವಿಚಾರಣೆ ನಡೆಯಿತು. ನಂತರ, ಕೋರ್ಟ್‌ ಈ ಸೂಚನೆ ನೀಡಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿಯ 13 ಸ್ಥಾನಗಳಿಗೆ ಇದೇ 19ರಂದು ಚುನಾವಣೆ ನಡೆದು ಫಲಿತಾಂಶ ಘೋಷಿಸಲಾಗಿತ್ತು. ಮತಪಟ್ಟಿಯಿಂದ 12 ಮಂದಿ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್‌ ಮೆಟ್ಟಿಲು ಏರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.