ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು ಮಾಂಸವನ್ನು ಸ್ವಚ್ಛ ಮಾಡುತ್ತಿದ್ದಾಗ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ದಾಳಿ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಕುಸುಬೂರು ಗ್ರಾಮದ ದೊಡ್ಡಿನತಲೆ ಮೇಲ್ಭಾಗದ ಆರಂಬಳ್ಳಿ ಅರಣ್ಯದಲ್ಲಿ ದಾಳಿ ಮಾಡಿದ್ದಾರೆ. ಐವರು ಆರೋಪಿಗಳು ಜಿಂಕೆ ಮಾಂಸವನ್ನು ಸ್ವಚ್ಛ ಮಾಡುತ್ತಿದ್ದು, ಅವರನ್ನು ಹಿಡಿಯಲು ಹೋದಾಗ ಇಬ್ಬರು ಆರೋಪಿಗಳಾದ ಮಹಮ್ಮದ್ ಆರೀಫ್, ಸೈಯ್ಯದ್ ಓಡಿ ಹೋಗಿ ತಲೆ ಮರೆಸಿಕೊಂಡಿದ್ದಾರೆ. ಸೈಯ್ಯದ್ ಮನ್ಸೂರ್, ಅಜತ್, ಗಿರೀಶ್ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಮುತ್ತಿನಕೊಪ್ಪ ಭಾಗದವರಾಗಿದ್ದು, ಜಿಂಕೆ ಕೊಲ್ಲಲು ಬಳಸಿದ್ದ ನಾಡ ಬಂದೂಕು ಹಾಗೂ ಜಿಂಕೆ ಮಾಂಸವನ್ನು ವಶಪಡಿಸಿಕೊಳ್ಳಲಾಯಿತು. ಆರೋಪಿಗಳನ್ನು ಗುರುವಾರ ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಅರಣ್ಯ ಇಲಾಖೆಯವರು ಶೋಧ ನಡೆಸಿದ್ದಾರೆ.
ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಬು ರಾಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಅರುಣ ಬಾರಂಗಿ, ಗಸ್ತು ಅರಣ್ಯ ಪಾಲಕರಾದ ನವೀನ್ ಕುಮಾರ್, ಬಲರಾಮೇಗೌಡ, ರಾಘವೇಂದ್ರ ಹಾಗೂ ವಾಹನ ಚಾಲಕ ಸುದೀಪ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.