ADVERTISEMENT

ಆರ್‌ಟಿಇ ಮಕ್ಕಳಿಗೆ ಪುಸ್ತಕ ಪೂರೈಕೆಯಲ್ಲಿ ವಿಳಂಬ: ಆರೋಪ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 13:11 IST
Last Updated 18 ಜೂನ್ 2025, 13:11 IST
ಕೆ.ಎಸ್. ಶಂಕರ್ 
ಕೆ.ಎಸ್. ಶಂಕರ್    

ಕಡೂರು: ‘ಪಟ್ಟಣದ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಕಡೂರು ಶೈಕ್ಷಣಿಕ ವಲಯದಿಂದ ಇದುವರೆಗೂ ಪಠ್ಯ ಪುಸ್ತಕಗಳನ್ನು ಸರಬರಾಜು ಮಾಡದೆ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ’ ಎಂದು ಜಿಲ್ಲಾ ದೌರ್ಜನ್ಯ ಸಮಿತಿ ಸದಸ್ಯ ಕೆ.ಎಸ್.ಶಂಕರ್ ದೂರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಶಾಲಾ ಆಡಳಿತ ಮಂಡಳಿಯ ವತಿಯಿಂದ ಪಠ್ಯ ಪುಸ್ತಕಗಳು ಪೂರೈಕೆಗೊಂಡಿವೆ. ಆದರೆ, ಆರ್‌ಟಿಇ ಅಡಿ ದಾಖಲಾಗಿರುವ ಮಕ್ಕಳಿಗೆ ಶಿಕ್ಷಣ ಇಲಾಖೆ ವತಿಯಿಂದ ನೀಡುವ ಉಚಿತ ಪಠ್ಯ ಪುಸ್ತಕಗಳನ್ನು ಸರಬರಾಜು ಮಾಡದೆ ಕಡೂರು ಶೈಕ್ಷಣಿಕ ವಲಯದ ಅಧಿಕಾರಿಗಳು ಶಿಕ್ಷಣ ಹಕ್ಕುನಡಿಯಲ್ಲಿನ ಮಕ್ಕಳಿಗೆ ತಾರತಮ್ಯ ಎಸಗುತ್ತಿದ್ದಾರೆ. ಪಠ್ಯಪುಸ್ತಕ ವಿತರಣೆಗೆ ಹಣ ಕೇಳುವ ಪರಿಪಾಟ ಬೆಳೆಸಿಕೊಂಡಿದ್ದಾರೆ. ಇದಕ್ಕೆ ಕಡೂರಿನ ಕ್ಷೇತ್ರ ಶಿಕ್ಷಣಾಧಿಕಾರಿಯವರ ಪರೋಕ್ಷ ಬೆಂಬಲವಿದೆ. ಶಾಲೆಗಳು ಆರಂಭವಾಗಿ ಈಗಾಗಲೇ 20 ದಿನಗಳು ಕಳೆದರೂ ಮಕ್ಕಳಿಗೆ ಅವರ ಹಕ್ಕಿನ ಪುಸ್ತಕ ಲಭ್ಯವಾಗಿಲ್ಲ’ ಎಂದು ದೂರಿದರು.

‘ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹಲವು ಸವಲತ್ತುಗಳನ್ನು ನೀಡುತ್ತಿದೆ. ಆದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಖಾಸಗಿ ಶಾಲೆಗಳಿಗೆ ಭೇಟಿ ನೀಡದೆ, ಆರ್‌ಟಿಇ ಅಡಿ ವ್ಯಾಸಂಗ ಮಾಡುವ ಮಕ್ಕಳಿಗೆ ನೀಡಲಾಗುವ ಗುಣಾತ್ಮಕ ಶಿಕ್ಷಣದ ಬಗ್ಗೆ ಪರಿಶೀಲಿಸದೆ, ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ. ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಕಡೂರು ಶೈಕ್ಷಣಿಕ ವಲಯಕ್ಕೆ ಅವಶ್ಯಕತೆ ಇದೆ ಎಂಬುದನ್ನು ಶಾಸಕರು ಗಮನಿಸಬೇಕಿದೆ’ ಎಂದು ಅವರು ಒತ್ತಾಯಿಸಿದರು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧರಾಜನಾಯ್ಕ, ‘ಕೆಲವೇ ಖಾಸಗಿ ಶಾಲೆಗಳಿಗೆ ಪುಸ್ತಕ ವಿತರಣೆ ಆಗಿರಲಿಲ್ಲ. ಪುಸ್ತಕ ಪಡೆದುಕೊಂಡು ಹೋಗುವಲ್ಲಿ ಅವರ ಜವಾಬ್ದಾರಿಯೂ ಇದೆಯಲ್ಲವೇ? ಬಹುತೇಕ ಶಾಲೆಗಳಿಗೆ ಪುಸ್ತಕ ವಿತರಣೆ ಮಾಡಲಾಗಿತ್ತು. ಬಾಕಿ ಇದ್ದ ಶಾಲೆಗಳವರು ಬುಧವಾರ ಪುಸ್ತಕ ಪಡೆದುಕೊಂಡು ಹೋಗಿದ್ದಾರೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಇಲಾಖೆ ತನ್ನದೇ ಆದ ದೃಷ್ಟಿಕೋನ ಹೊಂದಿದ್ದು, ಯಾವುದೇ ಸಮಸ್ಯೆ ಇಲ್ಲದಂತೆ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.