ಚಿಕ್ಕಮಗಳೂರು: ಜಿಲ್ಲೆಯಲ್ಲಿನ ಇಂದಿರಾ ಕ್ಯಾಂಟೀನ್‌ಗಳು ಬಡವರು ಮತ್ತು ವಿದ್ಯಾರ್ಥಿಗಳ ಅನ್ನದ ಬಟ್ಟಲಾಗಿದ್ದು, ಇನ್ನಷ್ಟು ಕ್ಯಾಂಟೀನ್‌ಗಳನ್ನು ತೆರೆಯಬೇಕು ಎಂಬ ಬೇಡಿಕೆ ನಗರದಲ್ಲಿದೆ.
ಜಿಲ್ಲೆಯಲ್ಲಿ ಒಟ್ಟು ಏಳು ಇಂದಿರಾ ಕ್ಯಾಂಟೀನ್‌ಗಳಿದ್ದು, ಪ್ರತಿನಿತ್ಯ ಸರಾಸರಿ 4 ಸಾವಿರ ಬಡವರ ಹೊಟ್ಟೆ ತುಂಬಿಸುತ್ತಿವೆ. ಚಿಕ್ಕಮಗಳೂರು ನಗರದಲ್ಲಿನ ಇಂದಿರಾ ಕ್ಯಾಂಟೀನ್‌ಗಳ ಬಳಿ ಹೋಗಿ ನಿಂತರೆ ಶ್ರಮಿಕರು ಮತ್ತು ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಊಟ–ಉಪಾಹಾರ ಸೇವಿಸುವುದು ಕಾಣಿಸುತ್ತದೆ.
ಕಾರ್ಮಿಕರು, ಆಟೊ ರಿಕ್ಷಾ ಚಾಲಕರು, ಅಂಗಡಿ–ಮುಂಗಟ್ಟುಗಳಲ್ಲಿ ದುಡಿಯುವವರು, ಸೆಕ್ಯೂರಿಟಿ ಕೆಲಸ ಮಾಡುವವರು ಹೀಗೆ ಹಸಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಇಂದಿರಾ ಕ್ಯಾಂಟೀನ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಾರಾಂತ್ಯದಲ್ಲಿ ಪ್ರವಾಸಿಗರೂ ಉಪಾಹಾರ ಸೇವಿಸುತ್ತಾರೆ ಎಂದು ಇಂದಿರಾ ಕ್ಯಾಂಟೀನ್ ನಿರ್ವಹಣೆ ಮಾಡುವವರು ಹೇಳುತ್ತಾರೆ.
ಬೆಳಿಗ್ಗೆ ಉಪಾಹಾರಕ್ಕೆ ಚಿತ್ರಾನ್ನ, ಪಲಾವು, ಟೊಮೊಟೊ ಬಾತು ತಯಾರಿಸಲಾಗುತ್ತದೆ. ಭಾನುವಾರ ವಿಶೇಷವಾಗಿ ಉಪ್ಪಿಟ್ಟು ಕೇಸರಿ ಬಾತು ನೀಡಲಾಗುತ್ತಿದೆ. ಮಧ್ಯಾಹ್ನ ಅನ್ನ, ಸಾಂಬರ್, ಮೊಸರನ್ನ, ಉಪ್ಪಿನಕಾಯಿ ನೀಡಲಾಗುತ್ತದೆ. ರಾತ್ರಿ ಊಟಕ್ಕೆ ಅನ್ನ, ಸಾಂಬರ್ ಅಥವಾ ಪಲಾವು ನೀಡಲಾಗುತ್ತಿದೆ.
ಬೆಳಿಗ್ಗೆ ತಿಂಡಿ, ರಾತ್ರಿ ಊಟ ಸೇರಿ ದಿನಕ್ಕೆ ಸರಾಸರಿ 1,500 ಜನ ಊಟ–ಉಪಾಹಾರ ಮಾಡುತ್ತಿದ್ದಾರೆ. ₹10ಕ್ಕೆ ಒಂದು ಬೌಲ್ ಮಾತ್ರ ಅನ್ನ ಸಿಗುತ್ತಿದ್ದು, ಅದು ಹಸಿದವರ ಹೊಟ್ಟೆ ತುಂಬಿಸುವುದಿಲ್ಲ. ಶ್ರಮಿಕರಲ್ಲಿ ಬಹುತೇಕರು ₹20 ನೀಡಿ ಎರಡು ಬೌಲ್ ಅನ್ನ ಪಡೆಯುವುದು ಸಾಮಾನ್ಯ.
ಮಧ್ಯಾಹ್ನದ ಊಟಕ್ಕೆ ಬಹುತೇಕ ವಿದ್ಯಾರ್ಥಿಗಳೇ ಇಂದಿರಾ ಕ್ಯಾಂಟೀನ್‌ಗೆ ಮುತ್ತಿಗೆ ಹಾಕಿರುತ್ತಾರೆ. ನಗರದಲ್ಲಿ ಒಂದೇ ಕ್ಯಾಂಟೀನ್ ಇದ್ದು, ಬಸ್ ನಿಲ್ದಾಣದ ಪಕ್ಕದಲ್ಲೇ ಇದೆ. ಬೆಳಿಗ್ಗೆ ಬೇಗ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟಕ್ಕೆ ಇಂದಿರಾ ಕ್ಯಾಂಟೀನ್ ಆಧಾರವಾಗಿದೆ.
ನಗರದ ಆಜಾದ್ ಪಾರ್ಕ್ ವೃತ್ತದ ಬಳಿ ಮತ್ತೊಂದು ಇಂದಿರಾ ಕ್ಯಾಂಟೀನ್ ತೆರೆದರೆ ಇನ್ನಷ್ಟು ಅನುಕೂಲ ಆಗಲಿದೆ ಎನ್ನುತ್ತಾರೆ ವಿದ್ಯಾರ್ಥಿಗಳು. ಆಜಾದ್ ಪಾರ್ಕ್ ವೃತ್ತ ಎಂದರೆ ಸದಾ ಜನರಿಂದ ಗಿಜಿಗುಡುವ ಪ್ರದೇಶ. ಪಕ್ಕದಲ್ಲೇ ಸರ್ಕಾರಿ ಆಸ್ಪತ್ರೆ ಇದ್ದು, ಅಲ್ಲಿಗೆ ಬರುವ ಹೊರ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಅನುಕೂಲ ಆಗಲಿದೆ. ಅಲ್ಲದೇ ಪಕ್ಕದಲ್ಲೇ ಸರ್ಕಾರಿ ಜ್ಯೂನಿಯರ್ ಕಾಲೇಜಿದ್ದು, ಅಲ್ಲಿನ ವಿದ್ಯಾರ್ಥಿಗಳಿಗೂ ಹೆಚ್ಚು ಉಪಯೋಗವಾಗಲಿದೆ.
ಇಂದಿರಾ ಕ್ಯಾಂಟೀನ್ ಇಲ್ಲದಿರುವುದರಿಂದ ಸುತ್ತಮುತ್ತ ಇರುವ ಹೋಟೆಲ್ ಮತ್ತು ಕೈಗಾಡಿಗಳಲ್ಲಿ ದುಬಾರಿ ಹಣ ಪಾವತಿಸಿ ಊಟ–ಉಪಾಹಾರ ಮಾಡುವುದು ಅನಿವಾರ್ಯವಾಗಿದೆ.
‘ಆಜಾದ್ ಪಾರ್ಕ್ ಬಳಿ ಇಂದಿರಾ ಕ್ಯಾಂಟೀನ್ ತೆರೆಯಲು ಈ ಹಿಂದೆಯೇ ಜಾಗ ಗುರುತಿಸಲಾಗಿತ್ತು. ನಿರ್ಮಾಣಕ್ಕೆ ಬೇಕಿರುವ ಸಲಕರಣೆಗಳನ್ನು ಕ್ರೇನ್‌ಗಳ ಸಹಿತ ತರಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಕಾಮಗಾರಿ ಆರಂಭಿಸಲು ಆಗಲಿಲ್ಲ. ಚಿಕ್ಕಮಗಳೂರು ನಗರದಲ್ಲಿ ನಿರ್ಮಾಣವಾಗಬೇಕಿದ್ದ ಎರಡನೇ ಇಂದಿರಾ ಕ್ಯಾಂಟೀನ್ ಬೇರೆ ಜಿಲ್ಲೆಗೆ ವರ್ಗಾಯಿಸಲಾಯಿತು. ಈಗಲಾದರೂ ಜಾಗದ ಸಮಸ್ಯೆ ಬಗೆಹರಿಸಿ ಇಂದಿರಾ ಕ್ಯಾಂಟೀನ್ ತೆರೆಯಬೇಕು’ ಎಂದು ಕೆಂಪನಹಳ್ಳಿ ಲೋಹಿತ್ ಹೇಳಿದರು.
ಹೊಸ ತಾಲ್ಲೂಕುಗಳಾದ ಕಳಸ ಮತ್ತು ಅಜ್ಜಂಪುರದಲ್ಲಿ ಇಂದಿರಾ ಕ್ಯಾಂಟೀನ್‌ಗಳಿಲ್ಲ. ಅಲ್ಲಿಯೂ ತೆರೆಯಬೇಕೆಂಬ ಒತ್ತಡ ಸ್ಥಳೀಯರಲ್ಲಿದೆ.
ಪೂರಕ ಮಾಹಿತಿ: ರವಿಕುಮಾರ್ ಶೆಟ್ಟಿಹಡ್ಲು, ಕೆ.ನಾಗರಾಜ್, ಬಾಲು ಮಚ್ಚೇರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.