ADVERTISEMENT

ಕಳಸ ತಾಲ್ಲೂಕು ರಚನೆಗೆ ಗಡುವು: ಬೆಂಗಳೂರು ಚಲೋ ಎಚ್ಚರಿಕೆ

ಕಳಸ ತಾಲ್ಲೂಕು ಅಧಿಸೂಚನೆಗೆ ಜೆಡಿಎಸ್ ಗಡುವು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 5:16 IST
Last Updated 1 ಮಾರ್ಚ್ 2021, 5:16 IST

ಕಳಸ: ಮಾರ್ಚ್ 8ರೊಳಗೆ ರಾಜ್ಯ ಸರ್ಕಾರವು ಬಜೆಟ್ ಅಧಿವೇಶನದಲ್ಲಿ ಕಳಸ ತಾಲ್ಲೂಕಿನ ಕಾರ್ಯಾರಂಭಕ್ಕೆ ಕ್ರಮ ತೆಗೆದುಕೊಳ್ಳದಿದ್ದಲ್ಲಿ ‘ಬೆಂಗಳೂರು ಚಲೋ’ ಆರಂಭಿಸಲಾಗುತ್ತದೆ ಎಂದು ಇಲ್ಲಿನ ಜೆಡಿಎಸ್ ಘಟಕ ಎಚ್ಚರಿಸಿದೆ.

‘ಕಳಸ ತಾಲ್ಲೂಕಿನ ಘೋಷಣೆ ಆಗಿ 2 ವರ್ಷ ಕಳೆದರೂ ಈವರೆಗೆ ಅಂತಿಮ ಅಧಿಸೂಚನೆ ಹೊರಡಿಸಿಲ್ಲ. ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರ ಮಾಡಲು ಮುಂದಾದಾಗ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರು ಕರೆ ಮಾಡಿ ‘ಬಹಿಷ್ಕಾರ ಹಿಂತೆಗೆದುಕೊಳ್ಳಿ, ಕಳಸ ತಾಲ್ಲೂಕು ನನ್ನ ಜವಾಬ್ದಾರಿ’ ಎಂದು ಭರವಸೆ ನೀಡಿದ್ದರು. ಆದರೆ, ಈವರೆಗೂ ಕಳಸ ತಾಲ್ಲೂಕು ಅಂತಿಮ ಅಧಿಸೂಚನೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಏಪ್ರಿಲ್ 2ರಿಂದ ‘ಬೆಂಗಳೂರು ಚಲೋ’ ಆರಂಭಿಸಲಾಗುತ್ತದೆ’ ಎಂದು ಜೆಡಿಎಸ್ ಮುಖಂಡ ಜಿ.ಕೆ.ಮಂಜಪ್ಪಯ್ಯ ಸುದ್ದಿಗಾರರಿಗೆ ತಿಳಿಸಿದರು.

‘ಕಳೆದ ತಿಂಗಳು ಜೀವರಾಜ್ ಕಳಸಕ್ಕೆ ಬಂದಿದ್ದಾಗ ಅವರಿಗೂ ಈ ಬಗ್ಗೆ ಮನವಿ ನೀಡಿದ್ದೇವೆ. ಮುಂದಿನ ವಾರ ಸರ್ಕಾರದಿಂದ ಸ್ಪಷ್ಟ ತೀರ್ಮಾನ ಬರದಿದ್ದಲ್ಲಿ ಹಳ್ಳಿ ಹಳ್ಳಿಗೂ ತೆರಳಿ ತಾಲ್ಲೂಕಿನ ಅವಶ್ಯಕತೆ ಬಗ್ಗೆ ಜನರಿಗೆ ಮನವರಿಕೆ ಮಾಡಲಾಗುತ್ತದೆ. ಜೆಡಿಎಸ್ ಹೋರಾಟಕ್ಕೆ ಚಾಲನೆ ನೀಡಲಿದ್ದು, ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆ ಹೋರಾಟಕ್ಕೆ ಕೈಜೋಡಿಸಬಹುದು’ ಎಂದು ಅವರು ತಿಳಿಸಿದರು.

ADVERTISEMENT

‘‌ಕಳಸ ನಾಡ ಕಚೇರಿಯ ಕಾರ್ಯನಿರ್ವಹಣೆ ಬಗ್ಗೆ ಊರಿನ ಎಲ್ಲರಿಗೂ ಬೇಸರ ಇದೆ. ಅದು ಜನಪರವಾಗಿ ಕೆಲಸ ಮಾಡುತ್ತಿಲ್ಲ. ಗ್ರೇಡ್ 2 ತಹಶೀಲ್ದಾರ್ ನೇಮಕ ಆಗಿದ್ದರೂ ಅವರು ಈವರೆಗೆ ಕಳಸಕ್ಕೆ ಬಂದು ಅಧಿಕಾರ ವಹಿಸಿಕೊಂಡಿಲ್ಲ. 94 ಸಿ ಮತ್ತು ಫಾರಂ ನಂಬರ್ 53ರಲ್ಲಿ ಲಂಚಾವತಾರ ಮೇರೆ ಮೀರಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಳಸ ತಾಲ್ಲೂಕು ಘೋಷಣೆಯಿಂದ ಪಟ್ಟಣದ ಅಭಿವೃದ್ಧಿಗೆ ವಿಶೇಷ ಅನುದಾನ ಸಿಗುತ್ತದೆ. ಇದನ್ನು ಪಟ್ಟಣದ ನಿವಾಸಿಗಳೆಲ್ಲರೂ ಮನಗಂಡು ಹೋರಾಟ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.‌

ಮುಖಂಡರಾದ ಜ್ವಾಲನಯ್ಯ, ಬ್ರಹ್ಮ ದೇವ, ರವಿ ರೈ, ಎಂ.ಬಿ ಸಂತೋಷ್, ರವಿಕುಮಾರ್, ಅನಿಲ್ ಡಿಸೋಜ, ಆಶಾಲತಾ, ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.