ADVERTISEMENT

ಚಿಕ್ಕಮಗಳೂರು: ಶ್ರೀಗಂಧಕ್ಕೆ ವೈಜ್ಞಾನಿಕ ಬೆಲೆ ನಿಗದಿಗೆ ಒತ್ತಾಯ

ರೈತರೇ ಸಂಗ್ರಹಿಸಿದ ಟೋಲ್ ಮೊತ್ತ ₹558 ಮುಖ್ಯಮಂತ್ರಿಗೆ ಒಪ್ಪಿಸಲು ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 14:05 IST
Last Updated 17 ಜೂನ್ 2025, 14:05 IST
ಟೋಲ್‌ ನಿರ್ಮಿಸಿಕೊಂಡ ಹಣ ಸಂಗ್ರಹಿಸಿದ್ದ ಡಬ್ಬಿಗಳನ್ನು ಮಾಧ್ಯಮಗಳ ಮುಂದೆ ತೆರೆದ ರೈತರು
ಟೋಲ್‌ ನಿರ್ಮಿಸಿಕೊಂಡ ಹಣ ಸಂಗ್ರಹಿಸಿದ್ದ ಡಬ್ಬಿಗಳನ್ನು ಮಾಧ್ಯಮಗಳ ಮುಂದೆ ತೆರೆದ ರೈತರು   

ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸ್ವಾಧೀನವಾಗುತ್ತಿರುವ ಶ್ರೀಗಂಧದ ತೋಟಕ್ಕೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ರೈತರೇ ಟೋಲ್ ನಿರ್ಮಿಸಿ ಸಂಗ್ರಹಿಸಿದ್ದ ಹಣವನ್ನು ಒಪ್ಪಿಸಲು ಮುಖ್ಯಮಂತ್ರಿಗಳ ಸಮಯ ಕೊಡಿಸುವಂತೆ ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಶ್ರೀಗಂಧ ಬೆಳೆಗಾರ ಟಿ.ಎನ್.ವಿಶುಕುಮಾರ್ ಮತ್ತು ಇತರ ರೈತರು ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೆದಾರ್‌ಗೆ ಮನವಿ ಸಲ್ಲಿಸಿದರು. 

ಒಟ್ಟು 8 ಎಕರೆ ಜಾಗದಲ್ಲಿ 22 ರೈತರು ಸೇರಿ ಶ್ರೀಗಂಧದ ಮರ ಬೆಳೆಯಲಾಗಿದೆ. ಈ ಪೈಕಿ 3 ಎಕರೆ 30 ಗುಂಟೆ ಜಾಗ ರಾಷ್ಟ್ರೀಯ ಹೆದ್ದಾರಿಗೆ ಸ್ವಾಧೀನವಾಗಿದ್ದು, ಕಡಿಮೆ ಪರಿಹಾರ ನಿಗದಿ ಮಾಡಲಾಗಿದೆ ಎಂಬುದು ರೈತರ ಆರೋಪ. ಮೊದಲಿಗೆ ಇದೇ ಅಧಿಕಾರಿಗಳು ಅಂದಾಜಿಸಿದ್ದ ಪ್ರಕಾರ ₹62 ಕೋಟಿ ಪರಿಹಾರ ನೀಡಬೇಕು. ಆದರೆ, ₹17 ಲಕ್ಷ ಮಾತ್ರ ಪರಿಹಾರ ನೀಡಲಾಗಿದೆ. ಇದರಿಂದ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ADVERTISEMENT

ಈ ಹಿಂದೆ ಹಲವು ರೀತಿಯ ಪ್ರತಿಭಟನೆ ನಡೆಸಿದ್ದ ರೈತ ವಿಶಕುಮಾರ್ ಮತ್ತು ಇತರರು, ಇತ್ತೀಚೆಗೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಇದೇ ವೇಳೆ ರಸ್ತೆಯಲ್ಲಿ ರೈತರೇ ಗಂಧದ ಗುಡಿ ಹೆಸರಿನಲ್ಲಿ ಟೋಲ್ ನಿರ್ಮಿಸಿ ವಾಹನ ಸವಾರರಿಂದ ಹಣ ಸಂಗ್ರಹಿಸಿದ್ದರು. ಪ್ರತಿ ವಾಹನದಿಂದ ಸರ್ಕಾರಕ್ಕೆ ಭಿಕ್ಷೆಯಾಗಿ ₹1 ನೀಡುವಂತೆ ವಾಹನ ಚಾಲಕರ ಬಳಿ ಪಡೆದಿದ್ದರು.

ಈ ಹಣವನ್ನು ಸರ್ಕಾರಕ್ಕೆ ಜುಲೈ 2ರಂದು ಒಪ್ಪಿಸಲಾಗುವುದು. ಅದಕ್ಕೆ ಬೇಕಿರುವ ಸಹಕಾರ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಇದೇ ವೇಳೆ ಸಂಗ್ರಹವಾಗಿದ್ದ ಹಣದ ಡಬ್ಬಿಗಳನ್ನು ಮಾಧ್ಯಮಗಳ ಎದುರು ಪ್ರವಾಸಿ ಮಂದಿರದ ಬಳಿ ತೆರೆದು ಲೆಕ್ಕ ಮಾಡಿದರು.

₹558 ಸಂಗ್ರಹವಾಗಿದ್ದು, ಸಾರ್ವಜನಿಕರ ಹಣ ಆಗಿರುವುದರಿಂದ ಸರ್ಕಾರಕ್ಕೆ ಒಪ್ಪಿಸಬೇಕಿದೆ. ಆದ್ದರಿಂದ ಮಾಧ್ಯಮಗಳ ಎದುರು ಲೆಕ್ಕ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಹಣ ಒಪ್ಪಿಸಲಾಗುವುದು ಎಂದರು.

‘ಇತ್ತೀಚೆಗೆ ಟವರ್ ಏರಿ ಪ್ರತಿಭಟನೆ ನಡೆಸಿದಾಗ ಎರಡು ದಿನಗಳಲ್ಲಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ, ಮತ್ತೆ ತಲೆಕೆಡಿಸಿಕೊಂಡಿಲ್ಲ’ ಎಂದು ದೂರಿದರು.

ವೈಜ್ಞಾನಿಕ ಬೆಲೆ ನಿಗದಿ ಮಾಡಿ:

‘ತುಮಕೂರು–ಹೊನ್ನಾವರ ರಸ್ತೆಗೆ ತರೀಕೆರೆ ಸಮೀಪದ ಶ್ರೀಗಂಧದ ತೋಟ ಸ್ವಾಧೀನಪಡಿಸಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಒಂದು ಮರಕ್ಕೆ ₹420 ನಿಗದಿ ಮಾಡಿದ್ದಾರೆ. ಇದು ಅವೈಜ್ಞಾನಿಕ ಬೆಲೆಯಾಗಿದ್ದು ಮತ್ತೊಮ್ಮೆ ಮೌಲ್ಯಮಾಪನ ನಡೆಸಿ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು’ ಎಂದು ಟಿ.ಎನ್.ವಿಶುಕುಮಾರ್ ಒತ್ತಾಯಿಸಿದರು. ಶ್ರಿಗಂಧ ಮರಗಳನ್ನು ಬೆಳೆಸಿದರೆ ಕೋಟಿ ಕೋಟಿ ಹಣ ಬರಲಿದೆ ಎಂದು ಸರ್ಕಾರವೇ ರೈತರಲ್ಲಿ ಜಾಗೃತಿ ಮೂಡಿಸುತ್ತಿದೆ. ಆದರೆ ಒಂದು ಮರಕ್ಕೆ ₹420 ನಿಗದಿ ಮಾಡುವ ಮೂಲಕ ರೈತರಿಗೆ ಮೋಸ ಮಾಡುತ್ತಿದೆ. ಇದು ಸರಿಯಾದ ಕ್ರಮವಲ್ಲ. ಕೂಡಲೇ ಸಮಸ್ಯೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.