ADVERTISEMENT

ಪೂಜಾ ಸ್ಥಳ ಮರುಸ್ಥಾಪನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಜುಲೈ 2018, 16:47 IST
Last Updated 30 ಜುಲೈ 2018, 16:47 IST

ಬಾಳೆಹೊನ್ನೂರು: ‘ಪಟ್ಟಣದ ಕ್ರೈಸ್ತ ರುದ್ರಭೂಮಿಯನ್ನು ನವೀಕರಣ ಮಾಡುವ ವೇಳೆ ತಂದೆಯವರು ನಿರ್ಮಿಸಿದ್ದ ಪೂಜಾ ಸ್ಥಳವನ್ನು ಕೆಡವಿ ಅಲ್ಲಿದ್ದ ಘೋಷವಾಕ್ಯವನ್ನು ತೆಗೆದುಹಾಕಿರುವುದು ತಮಗೆ ತೀವ್ರ ಬೇಸರ ತಂದಿದ್ದು, ಅದನ್ನು ಮರುಸ್ಥಾಪಿಸುವಂತೆ ಹಲಸೂರು ಸೇಂಟ್ ಅಂತೋಣಿ ಎಸ್ಟೇಟ್ ಮಾಲೀಕರಾದ ಮರ್ಲಿನ್ ಗ್ಲಾಡಿಸ್ ಮೆನೇಜಸ್ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘1955ರಲ್ಲಿ ತಮ್ಮ ತಂದೆ ಎಚ್.ಎ.ಮೆಸೇಜಸ್ ಅವರು ಪೂರ್ವಜರ ನೆನಪಿಗಾಗಿ ಪೂಜಾ ಸ್ಥಳವನ್ನು ನಿರ್ಮಿಸಿ ಗೋರಿಗಳನ್ನು ಕಟ್ಟಿ, ಅದನ್ನು ಸಾರ್ವಕಾಲಿಕವಾಗಿಸುವ ನಿಟ್ಟಿನಲ್ಲಿ ‘ಇವತ್ತು ನನಗೆ ನಾಳೆ ನಿನಗೆ’ ಎಂಬ ಅರ್ಥಗರ್ಭಿತ ಘೋಷ ವಾಕ್ಯವನ್ನು ಬರೆಸಿದ್ದರು. 1955ರಿಂದ 2006ರವರೆಗೂ ಚರ್ಚ್‍ಗೆ ಸಂಬಂಧಿಸಿದ ಸಮಾಧಿ ಸ್ಥಳದಲ್ಲಿ ಸುಣ್ಣಬಣ್ಣ ಬಳಿದು, ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ನಿರ್ವಹಣೆಯನ್ನು ತಮ್ಮ ಕುಟುಂಬವೇ ಮಾಡುತ್ತಿದ್ದು, ನಾನು ವಿದೇಶದಲ್ಲಿದ್ದ ಸಂದರ್ಭದಲ್ಲಿ ನನಗೆ ಯಾವುದೇ ಮಾಹಿತಿ ನೀಡದೆ, ಪೂಜಾ ಸ್ಥಳವನ್ನು ಚರ್ಚ್‌ ಕಡೆಯವರು ಕೆಡವಿ ಹಾಕಿದ್ದಾರೆ’ ಎಂದು ದೂರಿದರು.

ಚರ್ಚ್‍ನ ಧರ್ಮಗುರು ಲ್ಯಾನ್ಸಿ ಪಿಂಟೋ ಅವರನ್ನು ತಾವು ಸಂಪರ್ಕಿಸಿದ್ದು, ಅಲ್ಪಸಂಖ್ಯಾತ ನಿಗಮದಿಂದ ಸಮಾಧಿ ಸ್ಥಳ ನವೀಕರಣಕ್ಕೆ ಹಣ ಮಂಜೂರಾಗಿರುವ ಕಾರಣ ಹಳೆಯದನ್ನು ಕೆಡವಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಕೇವಲ ನವೀಕರಣದ ಉದ್ದೇಶದಿಂದ ಅದನ್ನು ಕೆಡವಿರುವುದು ಅಸಮಂಜಸವಾಗಿದ್ದು, ಪುನಃ ಅದೇ ಶೈಲಿಯಲ್ಲಿ ಪೂಜಾ ಸ್ಥಳವನ್ನು ಮರು ನಿರ್ಮಿಸಬೇಕು, ಅಲ್ಲಿದ್ದ ವಾಕ್ಯಗಳನ್ನು ಬರೆಯಿಸಬೇಕು ಎಂದು ಚರ್ಚ್ ಧರ್ಮಗುರುಗಳ ಬಳಿ ಮನವಿ ಮಾಡಲಾಗಿದೆ. ತಮ್ಮ ಮನವಿಯನ್ನು ಚರ್ಚ್‍ನವರು ಸ್ವೀಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.