ಕಳಸ: ಪಟ್ಟಣದ 7 ಕಿ.ಮೀ ದೂರದ ಹೊರನಾಡು ರಸ್ತೆಯು ವಾರಾಂತ್ಯದಲ್ಲಿ ಅತಿ ಹೆಚ್ಚಿನ ಪ್ರವಾಸಿಗರು ಬರುವ ರಾಜ್ಯ ಹೆದ್ದಾರಿ. ಆದರೆ ಈ ರಸ್ತೆಯ ಸ್ಥಿತಿ ಗ್ರಾಮೀಣ ರಸ್ತೆಗಳಿಗಿಂತ ಕೆಟ್ಟದಾಗಿದೆ.
ಈ ಹೆದ್ದಾರಿಯ ಮಧ್ಯೆಯೇ ಅರ್ಧ ಅಡಿ ಆಳದ ದೊಡ್ಡ ಗಾತ್ರದ ಗುಂಡಿಗಳು ನಿರ್ಮಾಣವಾಗಿದ್ದು ಮಳೆ ನೀರು ತುಂಬಿಕೊಂಡಿರುತ್ತದೆ. ಈ ಗುಂಡಿಗಳಿಗೆ ಕಾರುಗಳನ್ನು ಇಳಿಸಿದಾಗ ವಾಹನಗಳಿಗೆ ಅಪಘಾತ ಮತ್ತು ಹಾನಿ ಆಗುತ್ತಿದೆ. 7 ಕಿ.ಮೀ ರಸ್ತೆಯಲ್ಲಿ ಒಂದೆರಡು ಕಿ.ಮೀ. ಬಿಟ್ಟರೆ ಉಳಿದ ಎಲ್ಲ ರಸ್ತೆಯೂ ಬಳಕೆಗೆ ಯೋಗ್ಯವಲ್ಲ ಎಂಬ ಸ್ಥಿತಿಗೆ ತಲುಪಿದೆ.
ಕಳೆದ ವರ್ಷದ ಮಳೆಗಾಲದಲ್ಲೇ ಈ ರಸ್ತೆ ಗುಂಡಿಮಯವಾಗಿತ್ತು. ಆಗಿನಿಂದ ರಸ್ತೆ ಪಕ್ಕದ ಚರಂಡಿ ನಿರ್ವಹಣೆ ಮಾಡಿದ್ದರೆ ರಸ್ತೆ ಉಳಿಯುತ್ತಿತ್ತು. ಆದರೆ ನಿರ್ವಹಣೆ ಕೊರತೆಯಿಂದ ಈಗ ಈ ರಸ್ತೆ ಸಂಪೂರ್ಣ ಹಾಳಾಗಿದೆ. ಈ ವರ್ಷದ ಮಳೆಗಾಲವಿಡೀ ಈ ರಸ್ತೆ ಹೇಗೆ ಬಳಸುವುದು ಎಂಬುದೇ ಚಿಂತೆ ಆಗಿದೆ ಎಂದು ಹೊರನಾಡಿನ ಉದ್ಯಮಿ ಅಜಿತ್‍ಕುಮಾರ್ ಬೇಸರ ವ್ಯಕ್ತಪಡಿಸಿದರು.
ಹೊರನಾಡು ಕ್ಷೇತ್ರ ನಾಡಿನಲ್ಲೇ ಪ್ರಸಿದ್ಧಿ ಪಡೆದಿದೆ. ಆದರೆ ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಾತ್ರ ಏಕೆ ಇಷ್ಟು ಕೆಟ್ಟದಾಗಿದೆ ಎಂದು ಅರ್ಥ ಆಗುತ್ತಿಲ್ಲ. ಸಂಬಂಧಪಟ್ಟವರು ಏಕೆ ಇಷ್ಟು ನಿರ್ಲಕ್ಷ್ಯ ಮಾಡುತ್ತಿದ್ದಾರೋ ತಿಳಿಯದು ಎಂದು ತಮಿಳುನಾಡಿನಿಂದ ಬಂದಿದ್ದ ಉದ್ಯಮಿ ಸೆಲ್ವರಾಜು ಅಭಿಪ್ರಾಯಪಟ್ಟರು.
ಕಳಸ-ಹೊರನಾಡು ರಸ್ತೆಯ ಗಣಪತಿಕಟ್ಟೆ ಪ್ರದೇಶದಲ್ಲೂ ಕೂಡ ರಸ್ತೆ ಮೂಲ ಸ್ವರೂಪ ಕಳೆದುಕೊಂಡಿದೆ. ಕಸದ ವಿಲೇವಾರಿ ಘಟಕದ ಬಳಿ ರಸ್ತೆಯು ಚರಂಡಿಗೆ ಕುಸಿಯುತ್ತಿದೆ. ಹೆಬ್ಬೊಳೆ ನೂತನ ಸೇತುವೆಯ ತಿರುವಿನಲ್ಲಿ ಕೂಡ ರಸ್ತೆಗೆ ಬಹಳಷ್ಟು ಹಾನಿ ಆಗಿದೆ. ಹೊರನಾಡು ಗ್ರಾಮ ಪಂಚಾಯಿತಿ ಕಚೇರಿ ಬಳಿ 100 ಅಡಿ ಉದ್ದಕ್ಕೂ ರಸ್ತೆಯಲ್ಲೇ ಕೆರೆಗಳು ಮೂಡಿವೆ. ದಾರಿಮನೆಯಿಂದ ಹೆಬ್ಬೊಳೆವರೆಗೂ ರಸ್ತೆಯಲ್ಲಿ ಡಾಂಬರ್ ಮಾಯವಾಗಿದೆ. ಇಷ್ಟೆಲ್ಲಾ ಹಾನಿ ಆಗಿದ್ದರೂ ಲೋಕೋಪಯೋಗಿ ಇಲಾಖೆ ಕ್ರಮ ವಹಿಸಿಲ್ಲ ಎಂದು ಗ್ರಾಮಸ್ಥರು ದೂರಿದರು.
‘ಹೆದ್ದಾರಿ ದುರಸ್ತಿಗೆ ಪ್ರಸ್ತಾವ ಸಲ್ಲಿಕೆ’
‘ಕಳಸ-ಹೊರನಾಡು ಹೆದ್ದಾರಿ ದುರಸ್ತಿ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಚೆನ್ನಯ್ಯ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಶಾಸಕಿ ನಯನಾ ಮೋಟಮ್ಮ ಅವರು ಹೊರನಾಡು ರಸ್ತೆ ಮರು ಡಾಂಬರೀಕರಣಕ್ಕೆ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಲೋಕೋಪಯೋಗಿ ಸಚಿವರ ಜೊತೆ ಮಾತುಕತೆ ನಡೆದಿದ್ದು ₹3 ಕೋಟಿ ಅನುದಾನ ಸದ್ಯದಲ್ಲೇ ಬಿಡುಗಡೆ ಆಗುವ ನಿರೀಕ್ಷೆ ಇದೆ’ ಎಂದು ಶಾಸಕರ ಆಪ್ತ ಕಾರ್ಯದರ್ಶಿ ಸಂಶುದ್ದೀನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.